ADVERTISEMENT

ಕೀಟಗಳ ಹತೋಟಿಗೆ ಅಂಟುಬಲೆ ಪರಿಣಾಮಕಾರಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 7:08 IST
Last Updated 24 ಅಕ್ಟೋಬರ್ 2017, 7:08 IST
ಚಿಂಚೋಳಿ ತಾಲ್ಲೂಕು ಕಲ್ಲೂರು ರೋಡ್‌ ಗ್ರಾಮದ ಸುದರ್ಶನರೆಡ್ಡಿ ಪಾಟೀಲರ ಪಾಲಿಹೌಸ್‌ನಲ್ಲಿ ಬೆಳೆಯುತ್ತಿರುವ ಜರ್ಬೇರಾ ಹೂ ಕೃಷಿಯಲ್ಲಿ ಕೀಟಗಳ ನಿಯಂತ್ರಣಕ್ಕೆ ಬಳಸಿದ ಹಳದಿ ಅಂಟು ಬಲೆಗೆ ಕೀಟಗಳು ಅಂಟಿಕೊಂಡಿರುವುದು
ಚಿಂಚೋಳಿ ತಾಲ್ಲೂಕು ಕಲ್ಲೂರು ರೋಡ್‌ ಗ್ರಾಮದ ಸುದರ್ಶನರೆಡ್ಡಿ ಪಾಟೀಲರ ಪಾಲಿಹೌಸ್‌ನಲ್ಲಿ ಬೆಳೆಯುತ್ತಿರುವ ಜರ್ಬೇರಾ ಹೂ ಕೃಷಿಯಲ್ಲಿ ಕೀಟಗಳ ನಿಯಂತ್ರಣಕ್ಕೆ ಬಳಸಿದ ಹಳದಿ ಅಂಟು ಬಲೆಗೆ ಕೀಟಗಳು ಅಂಟಿಕೊಂಡಿರುವುದು   

ಚಿಂಚೋಳಿ: ಹೂವು, ಹಣ್ಣು, ತರಕಾರಿ ಹಾಗೂ ವಿವಿಧ ಬೆಳೆಗಳ ಬೇಸಾಯದಲ್ಲಿ ಕೀಟಗಳ ನಿರ್ವಹಣೆಗೆ ಅಂಟುಬಲೆ ಪರಿಣಾಮಕಾರಿಯಾಗಿದೆ. ‘ಅತ್ಯಂತ ಕಡಿಮೆ ಬೆಲೆಯಲ್ಲಿ ಲಭಿಸುವ ಇವುಗಳನ್ನು ಬಳಸಿ ರೈತರು ಕೀಟಗಳನ್ನು ಹತೋಟಿಗೆ ತರಬಹುದಾಗಿದ್ದು, ಇದರಿಂದ ಕೀಟನಾಶಕ ಸಿಂಪರಣೆಗೆ ಬಳಸುವ ಖರ್ಚಿನ ಅಪವ್ಯಯ ಮತ್ತು ಬೆಳೆಗಳ ಮೇಲೆ ಪರೋಕ್ಷವಾಗಿ ನಡೆಯುವ ಅಡ್ಡಪರಿಣಾಮ ನೈಸರ್ಗಿಕವಾಗಿ ತಡೆಯಲು ಅಂಟುಬಲೆ ಉಪಯುಕ್ತ’ ಎಂದು ಕಲಬುರ್ಗಿಯ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರಾದ ಡಾ.ರಾಜು ತೆಗ್ಗಳ್ಳಿ ತಿಳಿಸಿದ್ದಾರೆ.

ರಸ ಹೀರುವ ಕೀಟಗಳು ಹಳದಿ ಬಣ್ಣಕ್ಕೆ ಬಹುಬೇಗ ಆಕರ್ಷಿಸುತ್ತವೆ. ಹೀಗಾಗಿ, ಹಳದಿ ಅಂಟುಬಲೆ ಅತ್ಯಂತ ಪರಿಣಾಮಕಾರಿಯಾಗಿದೆ. ಕೀಟನಾಶಕ ಬಳಕೆಯಿಂದ ಜನರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ ಮತ್ತು ಪರಿಸರದ ಮೇಲೆ ಉಂಟಾಗುವ ಹಾನಿ ತಡೆಯಬಹುದಾಗಿದೆ ಎಂದರು.

‘ನಾನು ವಿಜ್ಞಾನಿಗಳ ಸಲಹೆ ಮೇರೆಗೆ ಕೀಟಗಳ ಹತೋಟಿಗೆ ಹಳದಿ ಮತ್ತು ನೀಲಿ ಬಣ್ಣದ ಅಂಟುಬಲೆ ನನ್ನ ಜರ್ಬೇರಾ ಬೇಸಾಯದ ಪಾಲಿಹೌಸ್‌ ಘಟಕದಲ್ಲಿ ಬಳಸುತ್ತಿದ್ದೇನೆ. ಕಳೆದ ಒಂದು ವರ್ಷದಿಂದ ಇವುಗಳ ಬಳಕೆ ಮಾಡುತ್ತಿದ್ದು, ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಫಲಿತಾಂಶ ಅಂಟುಬಲೆಯಿಂದ ಬಂದಿದೆ’ ಎಂದು ಕಲ್ಲೂರು ರೋಡ್‌ ಗ್ರಾಮದ ಯುವ ರೈತ ಸುದರ್ಶನರೆಡ್ಡಿ ಪಾಟೀಲ ತಿಳಿಸಿದರು.

ADVERTISEMENT

‘ಕೀಟಗಳ ನಿಯಂತ್ರಣಕ್ಕೆ ನಾನು ಕೀಟನಾಶಕ ಸಿಂಪರಣೆ ಮಾಡಿಲ್ಲ. ಅಂಟುಬಲೆ ಆ ಕೆಲಸ ಮಾಡಿದ್ದು, ಕೀಟನಾಶಕ ಹಣ ಉಳಿತಾಯವಾಗಿದ್ದಲ್ಲದೇ ಯಾವುದೇ ರೋಗ ಹರಡಲು ಈ ಕೀಟಗಳು ರೋಗವಾಹಕವಾಗಿಯೂ ಕೆಲಸ ಮಾಡುತ್ತವೆ. ಆದರೆ, ಅಂಟು ಬಲೆಗೆ ಆಕರ್ಷಣೆಯಾಗಿ ಅವು ಅಂಟಿನಲ್ಲಿ ಮೆತ್ತಿಕೊಳ್ಳುವುದರಿಂದ ಅವು ಬೆಳೆಗಳ ಮೇಲೆ ಪರಿಣಾಮ ಬೀರಲು ಸಾಧ್ಯವಾಗುವುದಿಲ್ಲ’ ಎಂದರು.

‘ನನ್ನ ಒಂದು ಎಕರೆ ಪಾಲಿಹೌಸ್‌ ಘಟಕದಲ್ಲಿ 20ಕ್ಕೂ ಹೆಚ್ಚು ಅಂಟು ಬಲೆ ಬಳಸಿದ್ದೇನೆ. ಚಿಕ್ಕ ಬಲೆಗಳು ₹10ಕ್ಕೆ ಒಂದು, ದೊಡ್ಡ ಬಲೆ ₹40ಕ್ಕೆ ಒಂದರಂತೆ ಬೆಳಗಾವಿಯಿಂದ ತರಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.