ADVERTISEMENT

ಕೆಳದಂಡೆ ಮುಲ್ಲಾಮಾರಿ ಯೋಜನೆಗೆ ಬಲ

ಮಾತು ಉಳಿಸಿಕೊಂಡ ಬೃಹತ್‌ ಹಾಗೂ ಮಧ್ಯಮ ನೀರಾವರಿ ಸಚಿವ ಎಂ.ಬಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 7:33 IST
Last Updated 10 ಮಾರ್ಚ್ 2018, 7:33 IST
ಚಿಂಚೋಳಿ ತಾಲ್ಲೂಕು ನಾಗರಾಳ ಜಲಾಶಯದ ಸುರಕ್ಷತಾ ಕಾಮಗಾರಿ ಪ್ರಗತಿಯಲ್ಲಿದೆ
ಚಿಂಚೋಳಿ ತಾಲ್ಲೂಕು ನಾಗರಾಳ ಜಲಾಶಯದ ಸುರಕ್ಷತಾ ಕಾಮಗಾರಿ ಪ್ರಗತಿಯಲ್ಲಿದೆ   

ಚಿಂಚೋಳಿ: ಮಳೆಯಾಶ್ರಿತ ಕೃಷಿಯನ್ನೇ ನೆಚ್ಚಿಕೊಂಡ ತಾಲ್ಲೂಕಿನ ರೈತರ ಸಂಕಷ್ಟ ದೂರ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರವು ಶನಿವಾರ ಮುಲ್ಲಾಮಾರಿ ಯೋಜನೆಯ  ಬಲದಂಡೆ ಕಾಲುವೆ ಹಾಗೂ ಕಾಲುವೆ ಜಾಲದ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಲಿದೆ. ಅಣೆಕಟ್ಟು ಪುನಶ್ಚೇತನ  ಮತ್ತು ಬಲವರ್ಧನಡಿ ಶಕ್ತಿ ಶಾಮಕ ಸ್ಟೀಲಿಂಗ್ ಬೇಸಿನ್ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಿದೆ.

ಶಹಾಬಾದ ಕಲ್ಲಿನ ನೆಲಹಾಸಿನಿಂದ ಕೂಡಿದ್ದ ಮುಖ್ಯ ಕಾಲುವೆಗಳು ಹಾಗೂ ವಿತರಣಾ ನಾಲೆಗಳು ಸಂಪೂರ್ಣ ಹಾಳಾಗಿದ್ದವು.

ನಾಲೆಗಳು ಹಾಳಾಗಿದ್ದರಿಂದ ರೈತರ ಜಮೀನಿಗೆ ಹರಿಸಲು ಬಿಟ್ಟ ನೀರು ವ್ಯರ್ಥವಾಗುತ್ತಿತ್ತು. ಇದರಿಂದ ಕೆಳಭಾಗದ ರೈತರು ತೊಂದರೆಗೆ ಸಿಲುಕುತ್ತಿದ್ದರು. ಇದರಿಂದ ಮುಕ್ತಿ ಯಾವಾಗ? ಎಂದು ರೈತರು ಗೊಣಗುತ್ತಿದ್ದರು.

ADVERTISEMENT

ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಕನಸಿನ ಕೂಸಾದ ಯೋಜನೆ ಆರಂಭವಾದಾಗಿನಿಂದ ಒಂದು ವರ್ಷಕ್ಕೆ ಬಂದ ಗರಿಷ್ಠ ಅನುದಾನ ಎಂದರೆ ಕೇವಲ ₹10 ಕೋಟಿ ಮಾತ್ರ. ವರ್ಷಕ್ಕೆ ₹ 5ರಿಂದ ₹ 10 ಕೋಟಿ ಅನುದಾನ ನೀಡಿದರೆ ಪ್ರಯೋಜನವಿಲ್ಲ. ಹೀಗಾಗಿ ಏಕಕಾಲಕ್ಕೆ ಯೋಜನೆ ನವೀಕರಣಕ್ಕೆ ಬೇಡಿಕೆ ಹೆಚ್ಚಾಗಿತ್ತು.

ಇಂತಹ ಸ್ಥಿತಿಯಲ್ಲಿ ಶಾಸಕ ಉಮೇಶ ಜಾಧವ್‌ ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರಿ ಅನುದಾನ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಿಕಾಂತ ಚೊಂಚಿ ಹೇಳಿದರು.

ಅಪೂರ್ಣವಾಗಿದ್ದ ಯೋಜನೆಯ ಜಲಾಶಯದ ಕಾಮಗಾರಿ ಪೂರ್ಣಗೊಳಿಸಲು ಜಲಾಶಯ ಸುರಕ್ಷತಾ ತಜ್ಞರ ವರದಿ ಆಧರಿಸಿ ಜಿಲ್ಲೆಯಲ್ಲೇ  ಅತ್ಯಧಿಕ ಅನುದಾನ ₹ 36 ಕೋಟಿ ಯೋಜನೆಗೆ ಮಂಜೂರಾಗಿದ್ದು 6 ತಿಂಗಳಿನಿಂದ ಕಾಮಗಾರಿ ಪ್ರಾರಂಭವಾಗಿದೆ.

ಚಿಂಚೋಳಿ ಮತ್ತು ಸೇಡಂ ಮತಕ್ಷೇತ್ರ ವ್ಯಾಪ್ತಿಯ ಚಿಂಚೋಳಿ ತಾಲ್ಲೂಕಿನ 25 ಗ್ರಾಮಗಳ 9713 ಹೆಕ್ಟೇರ್‌ ಜಮೀನಿಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ. ಯೋಜನೆ ನಾಗರಾಳ್‌ ಜಲಾಶಯದಲ್ಲಿ ಚನ್ನೂರು, ಗಡಿಲಿಂಗದಳ್ಳಿ ಮತ್ತು ಯಲಮಾಮಡಿ ಗ್ರಾಮಗಳು ಮುಳುಗಡೆಯಾಗಿವೆ. ಗಡಿಲಿಂಗದಳ್ಳಿ ಗ್ರಾಮ ವಿಭಜಿಸಿ 3 ಪುನರ್‌ ವಸತಿ ಕೇಂದ್ರಗಳಾಗಿ, ಯಲ್ಮಾಮಡಿ ವಿಭಜಿಸಿ 2 ಪುನರ್‌ ವಸತಿ ಕೇಂದ್ರ ಮೈದಳೆಯುವಂತೆ ಮಾಡಲಾಗಿತ್ತು. ಪುನರ್‌ ವಸತಿ ಕೇಂದ್ರ ಸ್ಥಾಪಿಸಲಾಗಿದೆ.

ತಾತ್ಕಾಲಿಕ ಪುನರ್‌ ವಸತಿ ಕೇಂದ್ರಗಳಲ್ಲಿಯೇ 2 ದಶಕ ಕಳೆದ ಸಂತ್ರಸ್ತರ ಗೋಳು ಕೇಳುವ ಕೆಲಸ ಯಾವ ಜನಪ್ರತಿನಿಧಿ ಮಾಡಿರಲಿಲ್ಲ. ಅವರಿಗೆ ನಿವೇಶನಗಳ ಹಕ್ಕುಪತ್ರವೂ ನೀಡಿರಲಿಲ್ಲ.

ಆದರೆ. ‘ಮುಲ್ಲಾಮಾರಿ ಯೋಜನೆಯ ಸಂತ್ರಸ್ತರ ಗೋಳು ಮಾಧ್ಯಮ ಗಳಲ್ಲಿ ಸರಣಿ ವರದಿ ರೂಪದಲ್ಲಿ ಪ್ರಕಟವಾದ ಮೇಲೆ ಗಮನ ಹರಿಸಿದ ಶಾಸಕ ಉಮೇಶ ಜಾಧವ್‌ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲರನ್ನು ಕರೆದುಕೊಂಡು ಬಂದು ಸಂತ್ರಸ್ತರ ಅಳಲು ಆಲಿಸಿದ್ದರು.

ಸಚಿವರು ಪುನರ್‌ ವಸತಿ ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸಲು ₹ 17 ಕೋಟಿ ಮಂಜೂರು ಮಾಡುವ ಭರವಸೆ ನೀಡಿದ್ದರು. ಇದಕ್ಕಾಗಿ ಹಲವು ಬಾರಿ ನಿಯೋಗ ತೆರಳಿ ಮನವಿ ಮಾಡಿದ್ದೇವು.

ಒಂದು ವರ್ಷ ವಿಳಂಬವಾಗಿದ್ದರಿಂದ ₹ 19 ಕೋಟಿಗೆ ಆ ಮೊತ್ತ ಏರಿದೆ. ತಡವಾಗಿಯಾದರು ಅನುದಾನ ಮಂಜೂರು ಮಾಡಿಸಿದ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂದು ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ಗೌರಿಶಂಕರ ಉಪ್ಪಿನ್‌ ಹೇಳಿದರು.

**

ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದ ಸಂತ್ರಸ್ತರಿಗೆ ಸೌಕರ್ಯ ಕಲ್ಪಿಸಲು ಶಾಸಕ ಡಾ.ಉಮೇಶ ಜಾಧವ್‌ ₹ 19 ಕೋಟಿ ಮಂಜೂರು ಮಾಡಿಸಿದ್ದಾರೆ.

ಗೌರಿಶಂಕರ ಉಪ್ಪಿನ್‌, ಸಂಚಾಲಕರು, ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.