ADVERTISEMENT

ಗಡಿಕೇಶ್ವಾರ: ಭೂಮಿಯಿಂದ ವಿಚಿತ್ರ ಸದ್ದು ಭಯಭೀತ ಜನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 7:14 IST
Last Updated 13 ಸೆಪ್ಟೆಂಬರ್ 2017, 7:14 IST
ಚಿಂಚೋಳಿ ತಾಲ್ಲೂಕು ಗಡಿಕೇಶ್ವಾರ ಗ್ರಾಮಕ್ಕೆ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ಭೇಟಿ ನೀಡಿ ಭೂಮಿಯಿಂದ ವಿಚಿತ್ರ ಸದ್ದು ಬಂದಿರುವ ಕುರಿತು ಮಾಹಿತಿ ಪಡೆದರು
ಚಿಂಚೋಳಿ ತಾಲ್ಲೂಕು ಗಡಿಕೇಶ್ವಾರ ಗ್ರಾಮಕ್ಕೆ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ಭೇಟಿ ನೀಡಿ ಭೂಮಿಯಿಂದ ವಿಚಿತ್ರ ಸದ್ದು ಬಂದಿರುವ ಕುರಿತು ಮಾಹಿತಿ ಪಡೆದರು   

ಚಿಂಚೋಳಿ: ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಮಧ್ಯಾಹ್ನ 1.15ರಿಂದ 2 ಗಂಟೆ ಮಧ್ಯದಲ್ಲಿ 4 ಬಾರಿ ಭೂಮಿಯಿಂದ ವಿಚಿತ್ರವಾದ ಸದ್ದು ಬಂದಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ವೀರೇಶ ಬೆಳಕೇರಿ ಮತ್ತು ರೇವಣಸಿದ್ದಪ್ಪ ಅಣಕಲ್‌ ತಿಳಿಸಿದ್ದಾರೆ.

ಜನರು ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ವಯೋವೃದ್ಧರು ಮನೆಯ ಹೊರಗಡೆ ಕಟ್ಟೆಯ ಮೇಲೆ, ದೇವಾಲಯಗಳಲ್ಲಿ ಮಲಗಿದ್ದರು. ಆಗ ಪದೇ ಪದೇ ಬಂದ ಸದ್ದು ಜನರಲ್ಲಿ ಭೀತಿ ಸೃಷ್ಟಿಸಿತು. ಇದರಿಂದ ಜನರು ಮನೆಯಿಂದ ಹೊರಗಡೆ ಬಂದಿದ್ದಾರೆ ಎಂದರು. ಸ್ಫೋಟಕ ರೀತಿಯ ಸದ್ದು ಭೂಮಿಯಿಂದ ಬರುತ್ತಿರುವುದರಿಂದ ಇದು ಭೂಕಂಪದ ಮುನ್ಸೂಚನೆ ಇರಬಹುದೆಂದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ತಹಶೀಲ್ದಾರ್ ಭೇಟಿ: ಸುದ್ದಿ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಗ್ರಾಮಸ್ಥರು ತಾವು ಕೇಳಿದ ಸದ್ದು ಮತ್ತು ಅದರ ಅನುಭವ ಅವರೊಂದಿಗೆ ಹಂಚಿಕೊಂಡರು. ಕಂದಾಯ ನಿರೀಕ್ಷಕ ರವಿ ಪಾಟೀಲ ಇದ್ದರು.

ADVERTISEMENT

ಶರಣಸಿರಸಗಿಯಲ್ಲಿ ದಾಖಲಾಗಿಲ್ಲ:
ಕಲಬುರ್ಗಿ ಬಳಿಯ ಶರಣಶಿರಸಗಿ ಭೂಕಂಪ ಮಾನ ಕೇಂದ್ರದ ದತ್ತಾಂಶಗಳನ್ನು ಪರಿಶೀಲಿಸಲಾಗಿದ್ದು, ಗಡಿಕೇಶ್ವಾರದಲ್ಲಿ ಕೇಳಿಸಿದ ಸದ್ದಿನ ಮಾಹಿತಿ ದಾಖಲಾಗಿಲ್ಲ ಎಂದು ಕೇಂದ್ರದ ಸಹಾಯಕ ವಿಜ್ಞಾನಿ ಅಣವೀರಪ್ಪ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಈ ಕುರಿತು ತಾವು ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುವುದಾಗಿ ಅವರು ಹೇಳಿದ್ದಾರೆ.

ಮರುಕಳಿಸಿದ 2015 ಘಟನೆ: ಗಡಿಕೇಶ್ವಾರ ಮತ್ತು ತೇಗಲತಿಪ್ಪಿ ಗ್ರಾಮದಲ್ಲಿ 2015ರ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ಇದೇ ರೀತಿ ಭೂಮಿಯಿಂದ ಸದ್ದು ಕೇಳಿಬಂದಿತ್ತು. ಆಗ ನೈಸರ್ಗಿಕ ವಿಪತ್ತುಗಳ ನಿರ್ವಹಣೆ ಕೇಂದ್ರದ ಭೂಕಂಪ ತಜ್ಞರಾದ ಡಾ.ಜಗದೀಶ, ಡಾ.ರಮೇಶ ದಿಕ್ಪಾಲ್‌ ನೇತೃತ್ವದಲ್ಲಿ ಗಡಿಕೇಶ್ವಾರ ಗ್ರಾಮದಲ್ಲಿ (ಸಿಸ್ಮಿಕ್‌ ಸೆಂಟರ್‌) ತಾತ್ಕಾಲಿಕ ಭೂಕಂಪ ಮಾಪನ ಕೇಂದ್ರ ತೆರೆದು ಸಿಸ್ಮೊಗ್ರಾಫ್ ಅಳವಡಿಸಲಾಗಿತ್ತು. ಕಳೆದ ವರ್ಷ ತಾಲ್ಲೂಕಿನ ಐಪಿ ಹೊಸಳ್ಳಿಯಲ್ಲಿ ಇಂತಹುದೇ ಸದ್ದು ಜನರಲ್ಲಿ ಭೀತಿ ಸೃಷ್ಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.