ADVERTISEMENT

ಗಮನಸೆಳೆದ ವಿನೂತನ ಆವಿಷ್ಕಾರಗಳು

ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತರ ಕಾಲೇಜುಮಟ್ಟದ ಪ್ರೊಜೆಕ್ಟ್‌ ಪ್ರದರ್ಶನ– ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 3:00 IST
Last Updated 25 ಮೇ 2018, 3:00 IST
ಹೊಲ ಉಳುಮೆ ಮಾಡಲು ದ್ವಿಚಕ್ರ ವಾಹನ ಬಳಕೆ
ಹೊಲ ಉಳುಮೆ ಮಾಡಲು ದ್ವಿಚಕ್ರ ವಾಹನ ಬಳಕೆ   

ಕಲಬುರ್ಗಿ: ಇಲ್ಲಿನ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರಿಂಗ್‌, ಇಂಡಸ್ಟ್ರಿಯಲ್ ಅಂಡ್ ಪ್ರೊಡಕ್ಷನ್ ಎಂಜಿನಿಯರಿಂಗ್ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತರವಲಯ ಪ್ರೊಜೆಕ್ಟ್‌ ಪ್ರದರ್ಶನ ಮತ್ತು ಸ್ಪರ್ಧೆ ಯಶಸ್ವಿಯಾಯಿತು.

ವಿವಿಧ ಕಾಲೇಜುಗಿಂದ ಬಂದಿದ್ದ ವಿದ್ಯಾರ್ಥಿಗಳು ಭವಿಷ್ಯದ ತಂತ್ರಜ್ಞಾನದ ಅಭಿವೃದ್ಧಿಯ ಮಾದರಿಗಳನ್ನು ಪ್ರದರ್ಶಿಸಿ ಗಮನಸೆಳೆದರು.

ಕೃಷಿ, ನೀರಾವರಿ, ವಿದ್ಯುತ್‌ ಉತ್ಪಾದನೆ, ಸಾಫ್ಟ್‌ವೇರ್‌ ಉದ್ಯಮ, ಗಣಿಕಾರಿಗೆ ಸೇರಿದಂತೆ ನಿತ್ಯದ ಬದುಕಿಗೆ ಬೇಕಾದ ಅತಿ ಸರಳ ತಂತ್ರಜ್ಞಾನ ಮಾದರಿಗಳು ನೋಡುಗರ ಮನಸೆಳೆದವು. ಪಿಡಿಎ ಎಂಜಿನಿಯರ್ ಕಾಲೇಜು ಹಾಗೂ ಶೆಟ್ಟಿ ಎಂಜಿನಿಯರಿಂಗ್ ಕಾಲೇಜಿನಿಂದ ಒಟ್ಟು 25 ಪ್ರೊಜೆಕ್ಟ್‌ಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಪ್ರದರ್ಶಿಸಿದರು. ರಸಗೊಬ್ಬರ ಸಿಂಪಡಿಸಲು ಸರಳವಾದ ಕೃಷಿಸ್ನೇಹಿ ಯಂತ್ರ, ಸಾಫ್ಟ್‌ವೇರ್ ಬಳಕೆ, ಕಲ್ಲು ಗಣಿಗಾರಿಕೆಯಲ್ಲಿ ದೈಹಿಕ ಶ್ರಮವನ್ನು ಕಡಿಮೆ ಮಾಡುವ ಮತ್ತು ಹೆಚ್ಚು ಉತ್ಪಾದನೆಗೆ ಸಹಕಾರಿಯಾದ ಯಂತ್ರ... ಹೀಗೆ ಹಲವು ಬಗೆಯ ಹೊಸ ತಾಂತ್ರಿಕ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ADVERTISEMENT

ಪಿಡಿಎ ಕಾಲೇಜಿನ ಅಟೊಮೊಬೈಲ್ ವಿಭಾಗದ 8ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಅಮೀತ್ ಎಸ್. ಹಾಗೂ ವಾಹೀದ್ ತಯಾರಿಸಿದ ‘ರಿವರ್ಸ್ ಗೇರ್ ಮೆಕ್ಯಾನಿಸಂ ಫಾರ್ ಮೊಪೆಡ್ಸ್ ಯೂಸಿಂಗ್ ಪ್ಲಾನೆಟರಿ ಗೇರ್ ಬಾಕ್ಸ್’ ಪ್ರೊಜೆಕ್ಟ್‌ಗೆ ಪ್ರಥಮ ಬಹುಮಾನ ದೊರೆಯಿತು.

8ನೇ ಸೆಮಿಸ್ಟರ್‌ನ ಐ ಆಂಡ್ ಪಿ ವಿಭಾಗದ ಲಿಂಗಾರಾಜ್ ಪಾಟೀಲ, ಶ್ರದ್ಧಾ ಲಾಹೋಟಿ, ರೂಪಾ ಪರೀಟ್, ಶ್ರೀಕಾಂತ ಅವರ ‘ಡೆವಲಪ್ ಮೆಕ್ಯಾನಿಸಂ ಫಾರ್ ರೆಡ್ಯುಸಿಂಗ್‌ ದಿ ಎಫರ್ಟ್ ಇನ್ ಪೆಸ್ಟಿಸೈಡ್ ಸ್ಪ್ರೆಯಿಂಗ್’ ಪ್ರೊಜೆಕ್ಟ್‌ಗೆ ದ್ವಿತೀಯ ಬಹುಮಾನ ಪಡೆದರು. ಐ ಆಂಡ್ ಪಿ ವಿಭಾಗದ ಅನಿಲ್‌ಕುಮಾರ, ಕೀರ್ತಿ, ರಂಜಿತಾ ಹಾಗೂ ಶೀತಲ್ ತಯಾರಿಸಿದ ‘ಕೇಸ್‌ ಸ್ಟಡಿ ಆನ್ ಅಕ್ಯೂಪೇಶನಲ್ ಹೆಲ್ತ್, ಸೇಫ್ಟಿ ಅಂಡ್ ಎರ್ಗೋನಾಮಿಕ್ಸ್ ಇನ್ ಸ್ಟೋನ್ ಪ್ರೊಸೆಸ್ಸಿಂಗ್ ಇಂಡಸ್ಟ್ರಿ ಪ್ರೊಜೆಕ್ಟ್‌’ಗೆ ತೃತೀಯ ಬಹುಮಾನ ಲಭಿಸಿತು.

ಬಹುಮಾನ ವಿತರಣಾ ಸಮಾರಂಭದ ಅತಿಥಿಗಳಾಗಿ ಎಚ್‌ಕೆಇ ಕಾರ್ಯದರ್ಶಿ ಡಾ.ನಾಗೇಂದ್ರ ಎಸ್.ಮಂಥಾಳೆ, ನಿತೀನ್ ಬಿ.ಜವಳಿ, ಸತೀಶಚಂದ್ರ ಹಡಗಲಿಮಠ ಪಾಲ್ಗೊಂಡಿದ್ದರು.

**
ವಿದ್ಯಾರ್ಥಿಗಳಲ್ಲಿ ಅಡಗಿರುವ ಹೊಸ ಯೋಜನೆಗಳು ಇಲ್ಲಿ ಮೂಡಿ ಬಂದಿವೆ. ಇಂತಹ ಸ್ಪರ್ಧೆಗಳಿಂದ ಸೃಜನಶೀಲತೆ ಬೆಳೆಸಲು ಸಾಧ್ಯ
– ಡಾ.ಎಸ್.ಎಸ್.ಕಲಶೆಟ್ಟಿ, ಮುಖ್ಯಸ್ಥ, ಪಿಡಿಎ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.