ADVERTISEMENT

ಗರ್ಭಕೋಶಕ್ಕೆ ಕತ್ತರಿ: ಡಿಸಿ ನೇತೃತ್ವದಲ್ಲಿ ಸಮಿತಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 7:21 IST
Last Updated 14 ಅಕ್ಟೋಬರ್ 2017, 7:21 IST

ಕಲಬುರ್ಗಿ: ‘ಖಾಸಗಿ ವೈದ್ಯರು ಧನದಾಹಕ್ಕೆ ಜಿಲ್ಲೆಯ 2,100 ಮಹಿಳೆಯರ ಗರ್ಭಕೋಶಕ್ಕೆ ಕತ್ತರಿ ಹಾಕಿದ್ದಾರೆ. ಗರ್ಭಕೋಶ ಕಳೆದುಕೊಂಡ ಮಹಿಳೆಯರ ಪಟ್ಟಿ ಮಾಡಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಹೇಳಿದರು.

‘ಗರ್ಭಕೋಶ ಕಳೆದುಕೊಂಡವರಲ್ಲಿ ನರ ದೌರ್ಬಲ್ಯ ಉಂಟಾಗಿದ್ದು, ಕೆಲವರ ಕಣ್ಣು ಮಂಜಾಗಿವೆ. ಕೆಲವರು ಅನಾರೋಗ್ಯದಿಂದ ನರಳುತ್ತಿದ್ದಾರೆ. ಅಂತಹವರನ್ನು ಗುರುತಿಸಿ, ಅವರಿಗೆ ಸ್ವಯಂ ಉದ್ಯೋಗಕ್ಕೆ ಸರ್ಕಾರದಿಂದ ನೆರವು ದೊರಕಿಸಲು ಯತ್ನಿಸಲಾಗುವುದು. ಹಾವೇರಿ ಜಿಲ್ಲೆಯಲ್ಲೂ ಇದೇ ಬಗೆಯ ಸಮಿತಿ ರಚಿಸಲಾಗಿದೆ. ಒಂದು ತಿಂಗಳಲ್ಲಿ ವರದಿ ಪಡೆದುಕೊಳ್ಳಲಾಗುವುದು’ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಗರ್ಭಕೋಶಕ್ಕೆ ವಿನಾಕಾರಣ ಕತ್ತರಿ ಹಾಕಿದ ನಗರದ ನಾಲ್ವರು ವೈದ್ಯರ ಆಸ್ಪತ್ರೆ ಮುಚ್ಚಿಸಲಾಗಿದೆ. ಆ ವೈದ್ಯರು ಆಸ್ಪತ್ರೆ ಹೆಸರು ಬದಲಿಸಿ ಮತ್ತೆ ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವ ಮಾಹಿತಿ ಇದ್ದು, ಆ ಬಗ್ಗೆ ತನಿಖೆ ನಡೆಸಲಾಗುವುದು. ಅವರ ವಿರುದ್ಧ ಭಾರತೀಯ ವೈದ್ಯಕೀಯ ಮಂಡಳಿಗೂ ದೂರು ಸಲ್ಲಿಸಲಾಗುವುದು’ ಎಂದರು.

ADVERTISEMENT

ಅಸಮಾಧಾನ: ಇದಕ್ಕೂ ಮುನ್ನ ಅಧಿಕಾರಿಗಳ ಸಭೆ ನಡೆಸಿದ ಅಧ್ಯಕ್ಷರು, ‘ಜಿಲ್ಲೆಯಲ್ಲಿ ಮಹಿಳೆಯರ ಕೊಲೆ, ಅತ್ಯಾಚಾರ, ಬಾಲಕಿಯರ ಅಪಹರಣ ಹಾಗೂ ದೌರ್ಜನ್ಯ ಪ್ರಕರಣಗಳು ಈ ವರ್ಷ ಹೆಚ್ಚಾಗಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಆರು ತಿಂಗಳಲ್ಲಿ 36 ಅತ್ಯಾಚಾರ, 30 ಅಪಹರಣ, 71 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದರು.

‘ಜಿಲ್ಲೆಯಲ್ಲಿ ನಾಗರಿಕ ಪೊಲೀಸ್‌ ಸಿಬ್ಬಂದಿಯ ಮಂಜೂರಾತಿ ಹುದ್ದೆ 1,500 ಇದ್ದು, 1,200ಕ್ಕೂ ಹೆಚ್ಚು ಭರ್ತಿಯಾಗಿವೆ. ಕೇವಲ 60 ಜನ ಮಹಿಳಾ ಸಿಬ್ಬಂದಿ, 6 ಜನ ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ ಇದ್ದಾರೆ. ಪೊಲೀಸ್‌ ಠಾಣೆಗಳಲ್ಲಿ ಮಹಿಳಾ ಡೆಸ್ಕ್‌ ಆರಂಭಿಸಿದ್ದರೂ ಬಹುತೇಕ ಠಾಣೆಗಳಲ್ಲಿ ಪುರುಷ ಸಿಬ್ಬಂದಿಯೇ ಅವುಗಳನ್ನು ನಿರ್ವಹಿಸುತ್ತಿದ್ದಾರೆ. ಮಹಿಳಾ ಸಿಬ್ಬಂದಿ ನೇಮಕಕ್ಕೆ ಸರ್ಕಾರದ ಮೇಲೆ ಒತ್ತಡ ತನ್ನಿ’ ಎಂದು ಎಸ್‌ಪಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.