ADVERTISEMENT

ಗ್ರಾಮದಲ್ಲಿ ಕಳೆಗುಂದಿದ ದೀಪಾವಳಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 7:09 IST
Last Updated 21 ಅಕ್ಟೋಬರ್ 2017, 7:09 IST

ಸೇಡಂ: ದೀಪಾವಳಿ ಅಮಾವಾಸ್ಯೆ ನಿಮಿತ್ತ ಕಾಗಿಣಾ ನದಿಗೆ ಪೂಜೆ ಮಾಡಿ ಬಾಗಿನ ಅರ್ಪಿಸಲು ತೆರಳಿದ್ದ ಮಾವ-ಅಳಿಯ ನದಿ ಪಾಲಾದ ಕುಟುಂಬಕ್ಕೆ ದೀಪಾವಳಿ ಅಮಾವಾಸ್ಯೆ ಕಗ್ಗತ್ತಲಾಗಿ ಪರಿಣಮಿಸಿದೆ.

ಮೃತರ ಎರಡು ಕುಟುಂಬಗಳಿಗೆ ದೀಪಾವಳಿ ಸಂಭ್ರಮದ ದಿನವಾಗದೇ ಕರಾಳ ದಿನವಾಗಿ ಮಾರ್ಪಟ್ಟಿತ್ತು. ಎರಡು ಕುಟುಂಬದಲ್ಲಿ ಮೌನದ ವಾತಾವರಣ ಮುದುವರಿದಿದ್ದು, ಕುಟುಂಬದ ಸದಸ್ಯರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.

‘ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿ ಮಲ್ಲಿಕಾರ್ಜುನ ಯಲಗೊಂಡ ಅವರು ಗ್ರಾಮಕ್ಕೆ ಬೇಕಾದ ವ್ಯಕ್ತಿಯಾಗಿದ್ದ. ಅವರಿಗೆ ಹೀಗಾಗಬಾರದಿತ್ತು’ ಎಂಬ ಮಾತು ನೆರೆದಿದ್ದ ಜನರದ್ದಾಗಿತ್ತು.

ADVERTISEMENT

ಮಲ್ಲಿಕಾರ್ಜುನ ಅವರ ಶವದ ಪತ್ತೆಗಾಗಿ ತಾಲ್ಲೂಕು ಆಡಳಿತ ಹಾಗೂ ಪೊಲೀಸರ ಶೋಧನೆ ಗುರುವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ನಡೆಯಿತು. ಸುಮಾರು 7 ಜನಕ್ಕಿಂತ ಅಧಿಕ ಮೀನುಗಾರರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯ ನಿರಂತರ ಕಾರ್ಯಾಚರಣೆ ನಡೆಸಿದರು. ಶವದ ಪತ್ತೆಗಾಗಿ ವಿವಿಧ ಕಡೆಗಳಲ್ಲಿ ಜಾಲಿ ಬಲೆಯನ್ನು ಹಾಕಲಾಗಿತ್ತು.

ಮಳಖೇಡ ಸೇತುವೆ ಕಡೆಗಳಲ್ಲಿ ಕಳೇಬರದ ಹುಡುಕಾಟಕ್ಕೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಂಗಮೇಶ್ವರ ದೇವಾಲಯದಿಂದ ಕೆಳಗಡೆ ಹರಿಯುವ ನದಿಪಾತ್ರದ ಜನರು ಮತ್ತು ಸಂಬಂಧಿಕರು ಮೀನಹಾಬಾಳ ಸೇತುವೆ, ಸಂಗಾವಿ ಸೇತುವೆ, ಮಳಖೇಡ ಸೇತುವೆ ಕಡೆಗಳಲ್ಲಿ ನಿಂತು ಶವದ ಪತ್ತೆಗಾಗಿ ಹುಡುಕಾಟ ನಡೆಸಿದರು.

ಮಧ್ಯಾಹ್ನ 2 ಗಂಟೆಗೆ ಬೀರನಳ್ಳಿ ಗ್ರಾಮದ ಸಮೀಪ ಶವ ಪತ್ತೆಯಾದಾಗ ಸಂಬಂಧಿಕರ ಆಕ್ರಂದನ, ಚೀರಾಟ ಮುಗಿಲು ಮುಟ್ಟಿತು. ಬೀರನಳ್ಳಿ ಮತ್ತು ಮೀನಹಾಬಾಳ ಜನರು ಕಂಬನಿ ಮಿಡಿದರು.

ಸೇಡಂ ಪಿಎಸ್‌ಐ ನಟರಾಜ ಲಾಡೆ ನೇತೃತ್ವದಲ್ಲಿ ಶವವನ್ನು ಹೊರತೆಗೆದು ವೈದ್ಯಕೀಯ ತಪಾಸಣೆ ನಡೆಸಲಾಯಿತು. ಗುರುವಾರ ಸಂಜೆಯಿಂದ ಮೀನಹಾಬಾಳ ಮತ್ತು ಕುಕ್ಕುಂದಾ ಗ್ರಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ ಕಳೆಗುಂದಿತ್ತು.

ಎರಡೂ ಗ್ರಾಮದ ವ್ಯಕ್ತಿಗಳು ನದಿ ನೀರುಪಾಲಾಗಿದ್ದರಿಂದ ಗ್ರಾಮದಲ್ಲಿ ಪಟಾಕಿ ಸದ್ದು ಕೇಳಲಿಲ್ಲ. ಯಾವುದೇ ರೀತಿಯ ಪೂಜೆ, ಸಂಭ್ರಮಾಚರಣೆಗಳು ನಡೆಯಲಿಲ್ಲ. ಗ್ರಾಮದ ಜನರು ಮೌನದಿಂದ ವಿಧಿಯಾಟಕ್ಕೆ ತಲೆಬಾಗಿದರು.

ಕುಕ್ಕುಂದಾ ಗ್ರಾಮದ ಭರತ ಮಲ್ಕಣ್ಣ ಅವರ ಅಂತ್ಯಸಂಸ್ಕಾರ ಶುಕ್ರವಾರ ಬೆಳಿಗ್ಗೆ ಮತ್ತು ಮೀನಹಾಬಾಳ ಗ್ರಾಮದ ಮಲ್ಲಿಕಾರ್ಜುನ ಯಲಗೊಂಡ ಅವರ ಅಂತ್ಯಸಂಸ್ಕಾರ ಸಂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.