ADVERTISEMENT

ಚಿಕ್ಕವೀರೇಶ್ವರ ಶಿವಾಚಾರ್ಯರ 72ನೇ ಪುಣ್ಯಸ್ಮರಣೋತ್ಸವ

ಫೆ.5ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ, 6ರಂದು ಚಿನ್ನದ ಕಂತಿ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 13:37 IST
Last Updated 2 ಫೆಬ್ರುವರಿ 2019, 13:37 IST
ರೇವಣಸಿದ್ದ ಶಿವಾಚಾರ್ಯ
ರೇವಣಸಿದ್ದ ಶಿವಾಚಾರ್ಯ   

ಕಲಬುರ್ಗಿ: ‘ತಾಲ್ಲೂಕಿನ ಶ್ರೀನಿವಾಸ ಸರಡಗಿಯ ಚಿಕ್ಕವೀರೇಶ್ವರ ಶಿವಾಚಾರ್ಯರ 72ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಫೆ.5 ಮತ್ತು 6ರಂದು ಚಿಕ್ಕವೀರೇಶ್ವರ ಸಂಸ್ಥಾನ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಪೀಠಾಧಿಪತಿ ರೇವಣಸಿದ್ದ ಶಿವಾಚಾರ್ಯರು ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆ.5 ರಂದು ಬೆಳಿಗ್ಗೆ 10ಕ್ಕೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಫೆ.6 ರಂದು ವೀರೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಜಂಗಮಗಣಾರಾಧನೆ, ಹೋಮ ಹವನಾದಿಗಳು ನಡೆಯಲಿವೆ. ಬೆಳಿಗ್ಗೆ 10ಕ್ಕೆ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ವೇದಿಕೆಯಲ್ಲಿ ಚಿನ್ನದ ಕಂತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

‘ಸಮಾರಂಭದಲ್ಲಿ ಚಿಕ್ಕವೀರೇಶ್ವರ ಸಂಸ್ಥಾನಮಠದ ಕುರಿತು ಶಿವಶಂಕರ ಬಿರಾದಾರ ಹಾಡಿರುವ ಧ್ವನಿ ಸುರುಳಿ ಬಿಡುಗಡೆ ಮಾಡಲಾಗುವುದು. ನಂತರ ಕಲ್ಯಾಣ ಮಂಟಪ ಕಾಮಗಾರಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಡಿಗಲ್ಲು ನೆರವೇರಿಸುವರು. ಇದಕ್ಕೂ ಮುಂಚೆ ಬೆಳಿಗ್ಗೆ 9.30ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಒಡೆಯರ್ ಅವರ ಮೆರವಣಿಗೆ ನಡೆಯಲಿದೆ’ ಎಂದರು.

ADVERTISEMENT

‘ತುಮಕೂರು ಜಿಲ್ಲೆಯ ಸೋಮನಕಟ್ಟೆ ಕಾಡಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗಿ ಅವರಿಗೆ ಚಿನ್ನದ ಕಂತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಮದಾಪುರದ ಮುರುಘೇಂದ್ರ ಸ್ವಾಮೀಜಿ, ಆಲಮೇಲದ ಚಂದ್ರಶೇಖರ ಶಿವಾಚಾರ್ಯ ನೇತೃತ್ವ ವಹಿಸುವರು. ಮೈಸೂರು ಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು. ಸಂಸ್ಥಾನಮಠದ ಪೀಠಾಧಿಪತಿ ರೇವಣಸಿದ್ದ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಬಸವರಾಜ ಮತ್ತಿಮೂಡ, ಸಿದ್ದೇಶ ನಾಗೀಂದ್ರಪ್ಪ, ಬೀರೂರ ಶಿವುಸ್ವಾಮಿ ಭಾಗವಹಿಸುವರು’ ಎಂದು ತಿಳಿಸಿದರು.

ಮುಖಂಡರಾದ ಸುಭಾಷ್ ರಾಠೋಡ, ಹಣಮಂತರಾಯ ಅಟ್ಟೂರ, ರವಿ ಕೋರಿ, ನಾಗಲಿಂಗಯ್ಯ ಮಠಪತಿ, ಶಿವಶರಣಪ್ಪ ಚಿದ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.