ADVERTISEMENT

ಚುನಾವಣೆ: ಪರವಾನಗಿಗೆ ‘ಸುವಿಧಾ’ ಆ್ಯಪ್‌

ಜಿಲ್ಲಾ ಚುನಾವಣಾಧಿಕಾರಿ ಆರ್‌.ವೆಂಕಟೇಶಕುಮಾರ್‌ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 9:02 IST
Last Updated 10 ಏಪ್ರಿಲ್ 2018, 9:02 IST

ಕಲಬುರ್ಗಿ: ರಾಜಕೀಯ ಪಕ್ಷಗಳ ಸಭೆ-ಸಮಾರಂಭ, ವಾಹನ ಪರವಾನಗಿ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಪರವಾನಗಿ ನೀಡಲು ಚುನಾವಣಾ ಆಯೋಗ ‘ಸುವಿಧಾ’ ಆ್ಯಪ್ ರೂಪಿಸಿದೆ.

ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಈ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸುತ್ತಿರುವುದರಿಂದ ನೋಂದಣಾಧಿಕಾರಿಗಳು 48 ಗಂಟೆ ಒಳಗೆ ಈ ಅರ್ಜಿಗಳ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಸೂಚಿಸಿದರು.

ಸೋಮವಾರ ಇಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಹಾಗೂ ಚುನಾವಣೆಗೆ ನಿಯೋಜಿಸಲಾದ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ADVERTISEMENT

‘ನೋಂದಣಾಧಿಕಾರಿಗಳು ಏಕಗವಾಕ್ಷಿ ಪದ್ಧತಿಯಲ್ಲಿ ಎಲ್ಲದಕ್ಕೂ ಅನುಮತಿ ನೀಡುವುದರಿಂದ ಇತರೆ ಅಧಿಕಾರಿಗಳು ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದರು.

‘ದೂರುಕೋಶಕ್ಕೆ ದೂರು ಬಂದ 24 ಗಂಟೆ ಒಳಗೆ ಅದಕ್ಕೆ ಪರಿಹಾರ ಕಲ್ಪಿಸಬೇಕು. ಚುನಾವಣಾ ಆಯೋಗ ದೂರುಕೋಶದ ಕೆಲಸದ ಹರಿವಿನ ಮೇಲೆ ನಿಗಾವಹಿಸಿದ್ದು, ನೋಂದಣಾಧಿಕಾರಿಗಳು ಇದನ್ನೂ ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದರು.

‘ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಶೇ 50ಕ್ಕಿಂತ ಹೆಚ್ಚಿನ ಮಹಿಳಾ ಮತದಾರರು ಇರುವ ಮತಗಟ್ಟೆಗಳನ್ನು ಮಹಿಳಾ ಮತಗಟ್ಟೆ ಎಂದು ಗುರುತಿಸಬೇಕು. ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 5 ಮಹಿಳಾ ಮತಗಟ್ಟೆಗಳಾದರೂ ಇರಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಮಹಾನಗರ ಪಾಲಿಕೆಯ ಆಯುಕ್ತ ರಘುನಂದನ ಮೂರ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಇದ್ದರು.

ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ಗೈರು

ಚುನಾವಣಾ ಅಕ್ರಮಗಳ ತಡೆಗೆ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಆಳಂದ ತಾಲ್ಲೂಕಿನ ಕಿಣ್ಣಿಸಡಕ್ ಚೆಕ್ ಪೋಸ್ಟ್‌ಗೆ ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ಹಠಾತ್ ಭೇಟಿ ನೀಡಿದ್ದರು. ಅಲ್ಲಿಯ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಸಿಬ್ಬಂದಿ ಚೆಕ್‌ಪೋಸ್ಟ್‌ನಲ್ಲಿ ಇರದೆ ಗೈರಾಗಿದ್ದರು. ಅವರಿಗೆ ನೋಟಿಸ್‌ ನೀಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು ಸೆಕ್ಟರ್ ಚುನಾವಣಾಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ತಿಳಿಸಲಾಗಿದೆ.

**

ಏ.8 ರಂದು ನಡೆದ ಮಿಂಚಿನ ನೋಂದಣಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲೆಯಲ್ಲಿ 27,310 ಅರ್ಜಿಗಳು ಸ್ವೀಕೃತಗೊಂಡಿವೆ – ಆರ್‌.ವೆಂಕಟೇಶಕುಮಾರ್‌,ಜಿಲ್ಲಾ ಚುನಾವಣಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.