ADVERTISEMENT

ಜಿ.ಪಂ ಅಧ್ಯಕ್ಷೆ ವಿರುದ್ಧ ಸ್ವಪಕ್ಷೀಯರಿಂದಲೇ ಧರಣಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 6:52 IST
Last Updated 7 ಜುಲೈ 2017, 6:52 IST
ಕಲಬುರ್ಗಿ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಧರಣಿ ನಿರತ ಸದಸ್ಯರು ಅಧ್ಯಕ್ಷೆ ಸುವರ್ಣಾ ಮಲಾಜಿ ಅವರೊಂದಿಗೆ ವಾಗ್ವಾದದಲ್ಲಿ ತೊಡಗಿರುವುದು
ಕಲಬುರ್ಗಿ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಧರಣಿ ನಿರತ ಸದಸ್ಯರು ಅಧ್ಯಕ್ಷೆ ಸುವರ್ಣಾ ಮಲಾಜಿ ಅವರೊಂದಿಗೆ ವಾಗ್ವಾದದಲ್ಲಿ ತೊಡಗಿರುವುದು   

ಕಲಬುರ್ಗಿ: ‘ನಾವು ಯಾವ ಮಾಹಿತಿ ಕೇಳಿದರೂ ಅಧಿಕಾರಿಗಳು ಕೊಡುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ನೀವು ಕ್ರಮ ಕೈಗೊಳ್ಳುತ್ತಿಲ್ಲ. ಸಾಮಾನ್ಯ ಸಭೆಯಲ್ಲಿನ ಚರ್ಚೆ ಕಾರ್ಯರೂಪಕ್ಕೆ ಬರುತ್ತಿಲ್ಲ. ಕಾಟಾಚಾರದ ಸಭೆ ನಡೆಸುತ್ತೀರಿ. ಕೆಲವರ ಮಾತಿಗಷ್ಟೇ ಮಣೆ ಹಾಕುತ್ತಿದ್ದೀರಿ’ ಎಂದು ಆರೋಪಿಸಿ ಬಿಜೆಪಿಯ ಕೆಲ ಸದಸ್ಯರು ಅಧ್ಯಕ್ಷೆ ಸುವರ್ಣಾ ಮಲಾಜಿ ವಿರುದ್ಧ ಧರಣಿ ನಡೆಸಿದರು.

ಗುರುವಾರ ಇಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸ್ವಪಕ್ಷೀಯರೇ ಧರಣಿ ಆರಂಭಿಸಿದ್ದರಿಂದ ಅಧ್ಯಕ್ಷೆ ವಿಚಲಿತರಾದರು. ‘ಚಿಂಚೋಳಿ ತಾಲ್ಲೂಕು ಗಡಿಕೇಶ್ವಾರ ಗ್ರಾಮದಲ್ಲಿ ನರೇಗಾದಲ್ಲಿ ಅವ್ಯವಹಾರ ನಡೆದಿದ್ದು, ದಾಖಲೆ ಸಮೇತ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ನಾವು ಭ್ರಷ್ಟರಾ? ಅಧಿಕಾರಿಗಳು ಮಾತ್ರ ಹರಿಶ್ಚಂದ್ರರಾ? ಒಂದೂವರೆ ವರ್ಷ ಕಾಲಹರಣವಾಯಿತು. ಆಯ್ಕೆ ಮಾಡಿರುವ ಜನ ನಮ್ಮನ್ನು ಮೆಟ್ಟಿನಲ್ಲಿ ಹೊಡೆಯುತ್ತಾರೆ’ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವಾಣ್‌ ಆಕ್ರೋಶ ವ್ಯಕ್ತಪಡಿಸಿದರು.

ಗಡಿಕೇಶ್ವಾರ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧರಣಿ ಕುಳಿತರು. ಸಂಜೀವನ ಯಾಕಾಪುರ, ಶಿವರಾಜ ಪಾಟೀಲ ರದ್ದೇವಾಡಗಿ, ರೇವಣಸಿದ್ಪಪ್ಪ ಸಂಕಾಲಿ, ಅರುಣಕುಮಾರ ಪಾಟೀಲ ಇತರರು ಅವರನ್ನು ಬೆಂಬಲಿಸಿದರು. ಆಗ ಧಿಕ್ಕಾರದ ಘೋಷಣೆಗಳೂ ಕೇಳಿಬಂದವು.

ADVERTISEMENT

‘ಗಡಿಕೇಶ್ವಾರ ಗ್ರಾಮ ಪಂಚಾಯಿತಿಯಲ್ಲಿಯ ಅವ್ಯವಹಾರ ತನಿಖೆಗೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರನ್ನು ನಿಯೋಜಿಸಲಾಗಿತ್ತು. ಅವರು ದೀರ್ಘ ರಜೆ ಹೋದ ಕಾರಣ ನರೇಗಾ ಒಂಬುಡ್ಸಮನ್‌ ಅವರಿಗೆ ತನಿಖೆ ವಹಿಸಲಾಗಿತ್ತು. ಒಂಬುಡ್ಸಮನ್‌ ರಾಜೀನಾಮೆ ನೀಡಿದ್ದು, ಈಗ ಬೇರೆ ಅಧಿಕಾರಿಗಳನ್ನು ತನಿಖೆಗೆ ನಿಯೋಜಿಸಲಾಗಿದೆ. 10 ದಿನಗಳಲ್ಲಿ ತನಿಖಾ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ’ ಎಂದು ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ ಹೇಳಿದರು.

‘ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ’ ಎಂಬ ಸದಸ್ಯರ ಒತ್ತಾಯಕ್ಕೆ ಅವರು ಮಣಿಯಲಿಲ್ಲ. ವಾರದಲ್ಲಿ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷೆ ಸೂಚನೆ ನೀಡಿದ ನಂತರ ಧರಣಿ ವಾಪಸ್‌ ಪಡೆಯಲಾಯಿತು.

ಇದಕ್ಕೂ ಮೊದಲು ‘ಸಿಇಒ ಅವರು ಅಧಿಕಾರಿಗಳನ್ನು ರಕ್ಷಿಸುತ್ತಿದ್ದಾರೆ’ ಎಂದು ಸಂಜೀವನ ಯಾಕಾಪುರ ಆರೋಪಿಸಿದರೆ, ‘ಭ್ರಷ್ಟ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಪತ್‌ಕುಮಾರ್‌ ಅವರು ಬೆಂಬಲ ನೀಡುತ್ತಿದ್ದಾರೆ’ ಎಂದು ಸಿದ್ದಾರಾಮ ಪ್ಯಾಟಿ ದೂರಿದರು.

‘ಕೆಲಸ ಮಾಡದ ಒಬ್ಬ ಅಧಿಕಾರಿಗಾದರೂ ನೋಟಿಸ್‌ ನೀಡಿದ್ದೀರಾ’ ಎಂದು ಶಿವಾನಂದ ಪಾಟೀಲ ಪ್ರಶ್ನಿಸಿದರು. ‘ಅಧ್ಯಕ್ಷರಿಗೆ ಏನು ಅಧಿಕಾರ ಇದೆ ಎನ್ನುವುದೇ ನಮಗೆ ಇನ್ನೂ ಗೊತ್ತಾಗಿಲ್ಲ’ ಎಂದು ಶಿವರಾಜ ಪಾಟೀಲ ರದ್ದೇವಾಡಗಿ ಹೇಳಿದರು. ‘ನಾವು ಪ್ರಸ್ತಾಪಿಸುವ ವಿಷಯಗಳ ಬಗ್ಗೆ ಅಧ್ಯಕ್ಷರು ಗಮನವನ್ನೇ ಹರಿಸುತ್ತಿಲ್ಲ’ ಎಂದು ರೇವಣಸಿದ್ದಪ್ಪ ಸಂಕಾಲಿ ಅಸಮಾಧಾನ ವ್ಯಕ್ತಪಡಿಸಿದರು.

ಸಿಇಒ, ಸದಸ್ಯರ ಜಟಾಪಟಿ
‘ನೀವು (ಸಿಇಒ) ಸಣ್ಣವರು, ಅಧ್ಯಕ್ಷರು, ಉಪಾಧ್ಯಕ್ಷರು, ಸಿಇಒ ಎಲ್ಲರೂ ಮಹಿಳೆಯರೇ ಇದ್ದೀರಿ. ಮಹಿಳೆಯರೇ ಆಡಳಿತದಲ್ಲಿ ಇರುವುದರಿಂದ ಜಿಲ್ಲಾ ಪಂಚಾಯಿತಿಯಲ್ಲಿ ಯಾವುದೇ ಸ್ಪಷ್ಟ ನಿರ್ಣಯ ಆಗುತ್ತಿಲ್ಲ ಎಂದು ಹೊರಗೆ ಜನ ಮಾಡನಾಡಿಕೊಳ್ಳುವಂತಾಗಿದೆ’ ಎಂದು ಸದಸ್ಯರೊಬ್ಬರು ಹೇಳಿದ್ದು ಕಾವೇರಿದ ಚರ್ಚೆಗೆ ಕಾರಣವಾಯಿತು.

ಇದಕ್ಕೆ ಕೆರಳಿದ ಸಿಇಒ ಹೆಪ್ಸಿಬಾರಾಣಿ, ‘ಮಹಿಳೆ–ಪುರುಷ ಇಬ್ಬರಿಗೂ ಸಂವಿಧಾನ ಸಮಾನ ಅವಕಾಶ ನೀಡಿದೆ. ಇಲ್ಲಿ ಯಾರೂ ದೊಡ್ಡವರು, ಸಣ್ಣವರು ಅಲ್ಲ. ಬರೀ ಮಹಿಳೆಯರು ಇರುವುದರಿಂದ ಹೀಗಾಗುತ್ತಿದೆ ಎಂದು ಅಗೌರವ ತೋರುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಕಾನೂನಿನಲ್ಲಿ ಅವಕಾಶ ಇದೆ’ ಎಂದು ಹೇಳಿದರು.

‘ನಾವೇನು ನಿಮಗೆ ಅಗೌರವ ತೋರಿದ್ದೇವೆ? ನಿಮ್ಮ ಮಾತು ವಾಪಸು ಪಡೆಯಿರಿ. ಇದು ಬೆದರಿಕೆ ತಂತ್ರ, ನಿಮ್ಮ ಸೇವೆ ನಮಗೆ ಬೇಡವೇ ಬೇಡ’ ಎಂದು ಸದಸ್ಯರು ಪಟ್ಟು ಹಿಡಿದರು. ಕೊನೆಗೆ ಒತ್ತಡಕ್ಕೆ ಮಣಿದ ಸಿಇಒ, ‘ನನ್ನ ಮಾತು ವಾಪಸು ಎಂದರು.

‘ವರ್ಗಾವಣೆಯಾಗಿದೆ, ಬೇಕಿದ್ದರೆ ಬಿಡುಗಡೆ ಮಾಡಿ’!
‘ಈಗಾಗಲೇ ನನ್ನ ವರ್ಗಾವಣೆಯಾಗಿದೆ. ಬೇಕಿದ್ದರೆ ನೀವು ನನ್ನನ್ನು ಇಂದೇ ಸೇವೆಯಿಂದ ಬಿಡುಗಡೆ ಮಾಡಿ. ನಾನು ಬೇರೆಡೆ ಹೋಗಲು ಸಿದ್ಧ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕ ಬೆಳಮಗಿ ಅವರು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹೇಳಿದ್ದು ಕಾವೇರಿದ ಚರ್ಚೆಗೆ ಕಾರಣವಾಯಿತು.

‘ನಾನು ಕೇಳಿದ ಮಾಹಿತಿಯನ್ನು ಈ ಅಧಿಕಾರಿ ಕೊಟ್ಟಿಲ್ಲ. ಅವರನ್ನು ಸೇವೆಯಿಂದ ಬಿಡುಗಡೆ ಮಾಡುವ ನಿರ್ಣಯ ಕೈಗೊಳ್ಳಬೇಕು’ ಎಂದು ಇದಕ್ಕೂ ಮುನ್ನ ಒತ್ತಾಯಿಸಿದ್ದ ಸಂಜೀವನ ಯಾಕಾಪುರ, ‘ಅಧಿಕಾರಿಯ ಈ ಉತ್ತರ ಸಭೆಗೆ ಮಾಡಿದ ಅಗೌರವ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪಟ್ಟು ಹಿಡಿದರು.

‘ಸದಸ್ಯರು ಲಿಖಿತವಾಗಿ ಕೇಳುವ ಮಾಹಿತಿ ಕೊಡುವುದು ಕಡ್ಡಾಯ. ಅದು ನಿಮ್ಮ ಕರ್ತವ್ಯದ ಭಾಗ. ವರ್ಗಾವಣೆಯ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವ ಅಗತ್ಯ ಇರಲಿಲ್ಲ’ ಎಂದು ಸಿಇಒ ಹೇಳಿದರು.

‘ತಪ್ಪು ಮಾಹಿತಿ ನೀಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಣಯ ಹಿಂದಿನ ಸಭೆಯಲ್ಲಿ ಅಂಗೀಕರಿಸಲಾಗಿದೆ ನಿಜ. ಮಾಹಿತಿ ನೀಡದ ಅಧಿಕಾರಿಯ ಮೇಲೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದು ಕಾನೂನಿನಲ್ಲಿ ಸ್ಪಷ್ಟವಾಗಿ ಉಲ್ಲೇಖವಿಲ್ಲ. ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸ್ಪಷ್ಟನೆ ಕೋರಿ ಪತ್ರ ಬರೆದಿದ್ದೇವೆ’ ಎಂದು ಅವರು ಸಭೆಗೆ ತಿಳಿಸಿದರು.

*  * 
ತಪ್ಪಿತಸ್ಥರ ವಿರುದ್ಧ ವಾರದಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಿಇಒ ಮತ್ತು ಉಳಿದ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
ಸುವರ್ಣಾ ಮಲಾಜಿ ಜಿಪಂ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.