ADVERTISEMENT

ತಾರಕಕ್ಕೇರಿದ ಚುನಾವಣೆ ಕಾವು

ಚಿಂಚೋಳಿ: ಪ್ರಖರ ಬಿಸಿಲಿನ ನಡುವೆಯೂ ಪ್ರಚಾರದ ಭರಾಟೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 11:50 IST
Last Updated 29 ಏಪ್ರಿಲ್ 2018, 11:50 IST

ಚಿಂಚೋಳಿ: ಮತಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಬೇಸಿಗೆಯ ಬಿಸಿಲಿನ ನಡುವೆಯೂ ಚುನಾವಣೆಯ ಕಾವು ತಾರಕಕ್ಕೆ ಏರುತ್ತಿದೆ.

ಇಲ್ಲಿ ಲಿಂಗಾಯತ, ಕಬ್ಬಲಿಗ, ಬಂಜಾರಾ, ಪರಿಶಿಷ್ಟ ಜಾತಿಯ ಎಡಗೈ–ಬಲಗೈ ಹಾಗೂ ಕುರುಬ ಮತ್ತು ಮುಸ್ಲಿಂ ಸಮುದಾಯಗಳು ಪ್ರಮುಖವಾಗಿವೆ.

ಚುನಾವಣಾ ಕಣದಲ್ಲಿ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಡಾ. ಉಮೇಶ ಜಾಧವ್‌, ಬಿಜೆಪಿಯಿಂದ ಮಾಜಿ ಸಚಿವ ಸುನೀಲ ವಲ್ಯಾಪುರ, ಜೆಡಿಎಸ್‌ನಿಂದ ನಿವೃತ್ತ ಶಿಕ್ಷಕಿ ಸುಶೀಲಾಬಾಯಿ ಬಿ. ಕೊರವಿ ಉಮೇದು ವಾರರಾಗಿದ್ದು, ಪಕ್ಷೇತರರು ಸೇರಿದಂತೆ ಇತರ 7 ಮಂದಿ ಕಣದಲ್ಲಿದ್ದಾರೆ.

ADVERTISEMENT

ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದ ಚಿಂಚೋಳಿ ಕ್ಷೇತ್ರ ಪ್ರತಿನಿಧಿಸಿ ದವರಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ, ಮಾಜಿ ಸಚಿವ ದಿವಂಗತ ದೇವೇಂದ್ರಪ್ಪ ಘಾಳಪ್ಪ ಜಮಾದಾರ ಪ್ರಮುಖ ರಾಗಿದ್ದಾರೆ.

ಇದೇ ಕ್ಷೇತ್ರದಿಂದ ಮೊದಲ ಬಾರಿಗೆ ಜೆಡಿಎಸ್‌ನಿಂದ 371 ( ಜೆ) ಹೋರಾಟದ ರೂವಾರಿ ಮಾಜಿ ಸಚಿವ ವೈಜನಾಥ ಪಾಟೀಲ ಗೆಲ್ಲುವ ಮೂಲಕ ಕಾಂಗ್ರೆಸ್ಸೇತರ ಪಕ್ಷದಿಂದ ಗೆದ್ದ ಹಿರಿಮೆಗೆ ಪಾತ್ರರಾಗಿದ್ದಾರೆ.  ಮೀಸಲು ಕ್ಷೇತ್ರವಾದ ಮೇಲೆ 2008ರಲ್ಲಿ ಕಾಂಗ್ರೆಸ್ಸೇತರ ಪಕ್ಷದಿಂದ ಗೆಲ್ಲುವ ಮೂಲಕ ಮಾಜಿ ಸಚಿವ ಸುನೀಲ ವಲ್ಲ್ಯಾಪುರ ಅವರು ಅಂದಿನ ಎದುರಾಳಿ ಬಂಜಾರಾ ಸಮುದಾಯದ ಬಾಬುರಾವ್‌ ಚವಾಣ್‌  ಅವರನ್ನು ಮಣಿಸಿ ಗೆಲುವು ಸಾಧಿಸಿದ್ದರು.

2013ರಲ್ಲಿ ನಡೆದ ಚುನಾವಣೆಯಲ್ಲಿ ಡಾ. ಉಮೇಶ ಜಾಧವ್‌ ಅವರನ್ನು ಕಣಕ್ಕಿಳಿಸಿ ಗೆಲ್ಲುವ ಮೂಲಕ ಕಾಂಗ್ರೆಸ್‌ ಪಕ್ಷ ಕ್ಷೇತ್ರವನ್ನು ತನ್ನ ತೆಕ್ಕೆಗೆ ಮರಳಿ ಪಡೆದುಕೊಂಡಿದೆ.

ಬಂಜಾರಾ ಮತಗಳು ಸೆಳೆಯಲು ಬಿಜೆಪಿ, ಲಿಂಗಾಯತ ಮತಗಳ ಸೆಳೆಯಲು ಕಾಂಗ್ರೆಸ್‌, ಅಲ್ಪಸಂಖ್ಯಾತರ ಮತಗಳಿಗಾಗಿ ಜೆಡಿಎಸ್‌ ಹವಣಿಸುತ್ತಿದೆ.

ಇವುಗಳ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳ ಮತ ಸೆಳೆಯಲು ಎಲ್ಲಾ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ.

ಜತೆಗೆ ಪಕ್ಷಗಳ ಸಾಂಪ್ರದಾಯಿಕ ಮತಗಳ ವಿಭಜನೆಗೂ ಪ್ರಯತ್ನಗಳು ನಡೆಯುತ್ತಿವೆ.ಮೊದಲ ಹಂತದಲ್ಲಿ ಅನ್ಯ ಪಕ್ಷಗಳ ಮುಖಂಡರನ್ನು ಸೆಳೆದ ರಾಜಕೀಯ ಪಕ್ಷಗಳು, ಈಗ ಮತದಾರರ ಮನ ತಲುಪಲು ಪ್ರಯತ್ನಗಳು ನಡೆಸುತ್ತಿವೆ. ಅಬ್ಬರದ ಪ್ರಚಾರ ನಡೆಯಿತ್ತಿದೆ. ಜತೆಗೆ ಹೈಟೆಕ್‌ ಪ್ರಚಾರಕ್ಕೂ ಅಡಿಯಿಟ್ಟಿವೆ.

ಯಡಿಯೂರಪ್ಪ ಚಿಂಚೋಳಿಗೆ ಇಂದು

‘ಬಿಜೆಪಿ ಅಭ್ಯರ್ಥಿ ಸುನೀಲ ವಲ್ಲ್ಯಾಪುರ ಪರ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಭಾನುವಾರ ಮಧ್ಯಾಹ್ನ 12 ಗಂಟೆಗೆ ಚಿಂಚೋಳಿಗೆ ಬರುತ್ತಿದ್ದಾರೆ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಭೀಮಶೆಟ್ಟಿ ಮುರುಡಾ ತಿಳಿಸಿದ್ದಾರೆ.

‘ಪಟ್ಟಣದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಂಸದ ಭಗವಂತ ಖೂಬಾ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಬಿಜೆಪಿ ನಾಯಕರು ಮತಯಾಚಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

– ಜಗನ್ನಾಥ ಡಿ. ಶೇರಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.