ADVERTISEMENT

ಪುಟ್ಟ ಗ್ರಾಮದಲ್ಲಿ ಗುಟುಕು ನೀರಿಗೂ ಪರದಾಟ

ಅಧಿಕಾರಿಗಳ ಜಾಣಕಿವುಡು; ಇನ್ನೂ ತೀರದ ಕುಸ್ರಂಪಳ್ಳಿ ಗ್ರಾಮಸ್ಥರ ಗೋಳು

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 10:01 IST
Last Updated 1 ಜೂನ್ 2018, 10:01 IST
ಚಿಂಚೋಳಿ ತಾಲ್ಲೂಕು ಕುಸ್ರಂಪಳ್ಳಿಯಲ್ಲಿ ಕುಡಿವ ನೀರು ಪಡೆಯಲು ಮಹಿಳೆಯರು ಮುಗಿ ಬಿದ್ದು ನೀರು ತುಂಬುತ್ತಿರುವುದು
ಚಿಂಚೋಳಿ ತಾಲ್ಲೂಕು ಕುಸ್ರಂಪಳ್ಳಿಯಲ್ಲಿ ಕುಡಿವ ನೀರು ಪಡೆಯಲು ಮಹಿಳೆಯರು ಮುಗಿ ಬಿದ್ದು ನೀರು ತುಂಬುತ್ತಿರುವುದು   

ಚಿಂಚೋಳಿ: ತಾಲ್ಲೂಕಿನ ಕುಸ್ರಂಪಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದೆ. ಗ್ರಾಮದಲ್ಲಿ ಒಂದು ಕಿರು ನೀರು ಪೂರೈಕೆ ಯೋಜನೆ ಘಟಕ ಇದ್ದು, ಇದರಿಂದ ಪೂರೈಕೆಯಾಗುತ್ತಿರುವ ನೀರು ಸಾಲುತ್ತಿಲ್ಲ ಎಂದು ಮಹಿಳೆಯರು ದೂರಿದ್ದಾರೆ.

ಗ್ರಾಮದಲ್ಲಿ ವಿದ್ಯುತ್‌ ಇದ್ದರೂ ನೀರಿಲ್ಲದ್ದರಿಂದ ದಾಹ ನೀಗಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಮೂರು ಕೈಕಂಪು (ಕೊಳವೆ ಬಾವಿ), ಒಂದು ಕಿರು ನೀರು ಪೂರೈಕೆ ಘಟಕ ಇವೆ. ಆದರೆ, 2 ಕೊಳವೆಬಾವಿಗಳ ನೀರು ಮಲಿನವಾಗಿದೆ. ಇದರಿಂದ ಊರ ಹೊರಗಿನ ಕೊಳವೆ ಬಾವಿಗೆ ಹೋಗುವುದು ಅನಿವಾರ್ಯವಾಗಿದೆ ಎಂಬುದು ಜನರ ಗೋಳು.

‘ನಾವು ಮನೆಯ ಎಲ್ಲ ಕೆಲಸ ಬಿಟ್ಟು ನೀರಿಗಾಗಿ ಕಾಯುವುದೇ ಹೆಚ್ಚಾಗಿದೆ. ಗುಟುಕು ನೀರು ಸಿಕ್ಕರೂ ಯಾವುದಕ್ಕೂ ಸಾಲುತ್ತಿಲ್ಲ. ಇಲ್ಲಿ ನೀರು ಸಿಕ್ಕವರಿಗೆ ಸೀರುಂಡೆ’ ಎನ್ನುತ್ತಾರೆ ಅವರು.

ADVERTISEMENT

ಬೆಳಿಗ್ಗೆ 10 ಗಂಟೆಗೆ ವಿದ್ಯುತ್‌ ಸರಬರಾಜು ಇರುತ್ತದೆ. ಒಂದೊಮ್ಮೆ ಸಮಯಕ್ಕೆ ಸರಿಯಾಗಿ ವಿದ್ಯುತ್‌ ಬರದಿದ್ದರೆ ಗ್ರಾಮಸ್ಥರು ನೀರಿಗಾಗಿ ಪರದಾಡುವುದು ಅನಿವಾರ್ಯ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರೆ ಅವರೂ ಸ್ಪಂದಿಸುತ್ತಿಲ್ಲ. ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ಗ್ರಾಮದ ಮುಖಂಡರು.‌

‘ಇಲ್ಲಿ 20ಕ್ಕೂ ಹೆಚ್ಚು ಮನೆಗಳಿವೆ. ಇವರಿಗೆ ನೀರು ಪೂರೈಸಲು ವಿವಿಧ 5 ಕಡೆ ನೀರಿನ ಗುಮ್ಮಿ ಸ್ಥಾಪಿಸಲಾಗಿದೆ. ಆದರೆ, ಇವುಗಳಲ್ಲಿ ಎರಡರಲ್ಲಿ ಮಾತ್ರ ನೀರು ದೊರೆಯುತ್ತವೆ. ಉಳಿದ ಗುಮ್ಮಿಗಳು ಒಣಗಿವೆ. ಜತೆಗೆ ಗ್ರಾಮದಲ್ಲಿ ಅಲ್ಲಲ್ಲಿ ನೀರಿನ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ, ಇವುಗಳಲ್ಲಿ ಒಮ್ಮೆಯೂ ನೀರು ಬಂದಿಲ್ಲ’ ಎಂಬುದು ಮುಖಂಡರಾದ ರಂಗನಾಥ ಮತ್ತು ಕೃಷ್ಣಾರೆಡ್ಡಿ ದೂರು.‌

ಕೊಳವೆಬಾವಿಗಳು ಕೆಟ್ಟು 3 ತಿಂಗಳಾಗಿದೆ. ದುರಸ್ತಿ ಮಾಡಲು ಯಾರೂ ಮುಂದಾಗಿಲ್ಲ. ಗ್ರಾಮಕ್ಕೆ ಶಾಶ್ವತ ಕುಡಿ ಯುವ ನೀರಿನ ಸೌಲಭ್ಯ ಕಲ್ಪಿಸಿ, ಪ್ರತಿ ಮನೆಗಳಿಗೂ ನಲ್ಲಿ ಮೂಲಕ ನೀರು ಸಿಗುವ ಸೌಲಭ್ಯ ಕಲ್ಪಿಸ ಬೇಕೆಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.