ADVERTISEMENT

ಬಹಿರಂಗ ಚರ್ಚೆಗೆ ಸಿದ್ಧ: ಪ್ರಿಯಾಂಕ್‌

ಮಾಲೀಕಯ್ಯ ಗುತ್ತೇದಾರಗೆ ಸವಾಲು

​ಪ್ರಜಾವಾಣಿ ವಾರ್ತೆ
Published 8 ಮೇ 2018, 13:14 IST
Last Updated 8 ಮೇ 2018, 13:14 IST

ಅಫಜಲಪುರ: ‘ಮಾಲೀಕಯ್ಯ ಗುತ್ತೇದಾರ ಅವರು ಪದೇಪದೇ ನಮ್ಮ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಮತ್ತು ಅಭಿವೃದ್ಧಿ ವಿಷಯದ ಕುರಿತು ಮಾತನಾಡುತ್ತಾರೆ. ಅವರು ತಯಾರಿದ್ದರೆ ಈ ವಿಷಯದ ಕುರಿತು ಬಹಿರಂಗ ಚರ್ಚೆಗೆ ನಾನೂ ಸಿದ್ಧ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ತಾಲ್ಲೂಕಿನ ಬಂದರವಾಡ ಗ್ರಾಮದಲ್ಲಿ ಅಭ್ಯರ್ಥಿ ಎಂ.ವೈ.ಪಾಟೀಲ ಅವರ ಪರವಾಗಿ ಪ್ರಚಾರ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ಒಂದೇ ವರ್ಷದಲ್ಲಿ ಚಿತ್ತಾಪೂರ ಕ್ಷೇತ್ರದಲ್ಲಿ ₹ 2,200 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಮಾಲೀಕಯ್ಯ ಗುತ್ತೇದಾರ ಅವರು ಕ್ಷೇತ್ರದಲ್ಲಿ ಏನು ಮಾಡಿದ್ದಾರೆ ತೋರಿಸಲಿ. ತಮ್ಮ ಸ್ವಂತ ಗ್ರಾಮ ಅತನೂರ ಹಲವಾರು ಸಮಸ್ಯೆಗಳಿಂದ ಜನರು ಪರದಾಡುತ್ತಿದ್ದಾರೆ. ಕೇವಲ ₹ 100 ಕೋಟಿಯಲ್ಲಿ ಮುಗಿಯುವ ಭೀಮಾ ಏತ ನೀರಾವರಿ ಯೋಜನೆ, 20 ವರ್ಷಗಳ ನಂತರ ₹ 700 ಕೋಟಿ ಖರ್ಚು ಮಾಡಿದರೂ ರೈತರ ಜಮೀನುಗಳಿಗೆ ನೀರು ಹರಿಸುವಂತಾಗಿಲ್ಲ’ ಎಂದು ಅವರು ದೂರಿದರು.

‘ಅತನೂರ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಸಂಸದರ ನಿಧಿಯಿಂದ ₹ 3 ಕೋಟಿಯ ವಿಶೇಷ ಅನುದಾನ ನೀಡಲಾಗುುದು’ ಎಂದರು.

ADVERTISEMENT

ಅಭ್ಯರ್ಥಿ ಎಂ.ವೈ.ಪಾಟೀಲ ಮಾತನಾಡಿದರು. ನಂತರ ತಾಲ್ಲೂಕಿನ ಬಡದಾಳ, ಚಿಂಚೋಳಿ, ಬಳೂರ್ಗಿ, ಕರಜಗಿ, ಮಾಶಾಳ ಗ್ರಾಮಗಳಲ್ಲಿ ಬಹಿರಂಗ ಸಭೆ ನಡೆಸಿದರು.

ಮುಖಂಡರಾದ ಮಕ್ಬುಲ್‍ ಪಟೇಲ, ಶಿವುಕುಮಾರ ನಾಟೀಕಾರ, ಸಿದ್ದು ಶಿರಸಗಿ, ಜಾಫರ್ ಪಟೇಲ, ಭೀರಣ್ಣ ಕಲ್ಲೂರ, ಸಿದ್ದಾರ್ಥ ಬಸರಿಗಿಡದ ಮಾತನಾಡಿದರು.

ಪ್ರಚಾರ ಸಭೆಯಲ್ಲಿ ಪಕ್ಷದ ಮುಖಂಡರಾದ ಪಪ್ಪು ಪಟೇಲ, ಮತೀನ ಪಟೇಲ, ಮಲ್ಲಿಕಾರ್ಜುನ ಗೌರ, ನಾಗೇಶ ಕೊಳ್ಳಿ, ಮಡಿವಾಳಪ್ಪ ಪಾಟೀಲ, ರಮೇಶ ಸೂಲೇಕರ, ದಯಾನಂದ ದೊಡ್ಡಮನಿ, ಪ್ರವೀಣ ಪಟೇಲ, ರೇಣುಕಾ ಸಿಂಗೆ, ಭಾಷಾ ಪಟೇಲ, ರೋಷನ್ ಖೇಡಕರ, ಶ್ರೀಕಾಂತ ನಿಂಬಾಳ, ಮಲ್ಲು ಸಾಹುಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.