ADVERTISEMENT

ಮುಗಿಲೆತ್ತರಕ್ಕೆ ಹೊಗೆ; ಬೆಚ್ಚಿದ ಜನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 11:01 IST
Last Updated 1 ಮಾರ್ಚ್ 2018, 11:01 IST
ಸುಟ್ಟಿರುವ ನಿರುಪಯುಕ್ತ ಬಸ್‌ಗಳು
ಸುಟ್ಟಿರುವ ನಿರುಪಯುಕ್ತ ಬಸ್‌ಗಳು   

ಕಲಬುರ್ಗಿ: ಇಲ್ಲಿಯ ಇಂದಿರಾ ನಗರದಲ್ಲಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಯಾಗಾರ–2ರಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡ ಜನ ಬೆಚ್ಚಿ ಬೀಳುವಂತೆ ಮಾಡಿತು.

ಮಧ್ಯಾಹ್ನ 1 ಗಂಟೆಯ ಸುಮಾರು ಬೆಂಕಿ ಹೊತ್ತಿಕೊಂಡಿತು. ಕೆಲ ಹೊತ್ತಿನಲ್ಲಿಯೇ ಅದು ಟೈರ್‌ ಹಾಗೂ ಅಲ್ಲಿದ್ದ ನಿರುಪಯುಕ್ತ ಬಸ್‌ಗಳಿಗೆ ವ್ಯಾಪಿಸಿತು. ಟೈರ್‌ಗಳಿಗೆ ಬೆಂಕಿ ಹತ್ತಿದ್ದರಿಂದ ಹೊಗೆ ಮುಗಿಲೆತ್ತರಕ್ಕೆ ಚಾಚಿತು.

ಇದು ನಗರದ ಇತರೆಡೆಯೂ ಗೋಚರಿಸುತ್ತಿತ್ತು. ಮನೆಯ ಮಾಳಿಗೆ, ಕಟ್ಟಡಗಳ ಮೇಲೆ ನಿಂತ ಜನರು, ‘ಪೆಟ್ರೋಲ್‌ ಬಂಕ್‌ಗೆ ಬೆಂಕಿ ಬಿದ್ದಿದೆ’ ಎಂದುಕೊಂಡರು. ಇತರರಿಗೂ ಕರೆ ಮಾಡಿ ಮಾಹಿತಿ ರವಾನಿಸಿದರು. ಕೆಲವರು ವಿಡಿಯೊ ಮಾಡಿಕೊಂಡರು. ಫೋಟೊಗಳನ್ನೂ ತೆಗೆದುಕೊಂಡರು. ಅವು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದವು.

ADVERTISEMENT

ಪರಿಸ್ಥಿತಿ ಕೈಮೀರಿದ್ದನ್ನು ಅರಿತ ಅಲ್ಲಿಯ ಸಿಬ್ಬಂದಿ ಹೊರಗೆ ಓಡಿ ಬಂದರು. ಹಲವರು ಕುತೂಹಲದಿಂದ ಅತ್ತ ಧಾವಿಸಿದರು.

ಈ ಕಾರ್ಯಾಗಾರದಲ್ಲಿ ನಿರುಪಯುಕ್ತ ವಸ್ತುಗಳನ್ನೇ ಹೆಚ್ಚಾಗಿ ಇಡಲಾಗಿತ್ತು. ಇನ್ನೊಂದು ಬದಿಗೆ ಗುಡ್ಡೆ ಹಾಕಿದ್ದ ಟೈರ್‌ಗಳಿಗೂ ಬೆಂಕಿ ವ್ಯಾಪಿಸುವ ಸಾಧ್ಯತೆ ಇತ್ತು. ಆದರೆ, ಸಾಹಸಿಗಳು ಅವುಗಳನ್ನು ಬೇರೆಡೆ ಸ್ಥಳಾಂತಿಸಿದರು.

ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಭಾಗವಾನ, ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.