ADVERTISEMENT

‘ಮೆಟಲ್ ಡಾಕ್ಟರ್’

ವಿಷ್ಣು ಭಾರದ್ವಾಜ್
Published 2 ಜುಲೈ 2018, 12:52 IST
Last Updated 2 ಜುಲೈ 2018, 12:52 IST
ಸ್ಕೂಟರ್‌ ದುರಸ್ತಿ ಮಾಡುತ್ತಿರುವ ಪೀರಪ್ಪ ಹಾಗರ ಗುಂಡಗಿ
ಸ್ಕೂಟರ್‌ ದುರಸ್ತಿ ಮಾಡುತ್ತಿರುವ ಪೀರಪ್ಪ ಹಾಗರ ಗುಂಡಗಿ   

ಗುಲ್ಬರ್ಗ: ಆ ಕಟ್ಟಡ ಸಂಕೀರ್ಣದಲ್ಲಿ ವ್ಯವಹಾರ ನಡೆಸುತ್ತಿರುವವರಲ್ಲಿ ಹೆಚ್ಚಿ­ನ­­ವರು ಡಾಕ್ಟರ್‌ಗಳು. ಮನುಷ್ಯ ದೇಹದ ವಿವಿಧ ಕಾಯಿಲೆ ಗುಣಪಡಿಸು­ವವರು. ಅದೇ ಕಟ್ಟಡದಲ್ಲಿ   ಇನ್ನೊಬ್ಬ  ‘ವೈದ್ಯ’ ಇದ್ದಾರೆ. ಇವರು ‘ಬಾಡಿ’­ಯನ್ನು ಚೂರು, ಚೂರು ಮಾಡಿ ಮತ್ತೆ ಜೋಡಿಸುತ್ತಾರೆ, ಜೀವ ತುಂಬುತ್ತಾರೆ. ಆ ದೇಹದ ಮೇಲೆ ಸವಾರಿ ಮಾಡುತ್ತಾರೆ.

ಇವರೂ ಡಾಕ್ಟರ್ರೇ... ಮೆಟಲ್‌ ಡಾಕ್ಟರ್‌!  ಹೆಸರು ಪೀರಪ್ಪ ಎಸ್‌. ಹಾಗರಗುಂಡಗಿ. ಇವರು ಬಿಳಿ ಬಟ್ಟೆ ಡಾಕ್ಟರ್‌ ಅಲ್ಲ, ಸ್ಟೆತೋಸ್ಕೋಪ್‌ ಬಳಸು­ವು­ದಿಲ್ಲ. ಸ್ಪ್ಯಾನರ್‌, ಸ್ಕ್ರ್ಯೂಡ್ರೈವರ್‌ ಇವರ ಉಪಕರಣ.  ಸ್ಕೂಟರ್‌ಗಳೇ ಇವರ ಪೇಷಂಟ್‌ಗಳು! ಕಳೆದ 40 ವರ್ಷಗಳಿಂದ ಇವರು ಸ್ಕೂಟರ್‌ಗಳಿಗೆ ‘ಚಿಕಿತ್ಸೆ’ ನೀಡುತ್ತಿದ್ದಾರೆ. ಜನರೂ ಭೇಷ್‌ ಅಂದಿದ್ದಾರೆ.
ಈಗ ಸ್ಕೂಟರ್‌ಗಳು ಕಣ್ಮರೆ­ಯಾಗುತ್ತಿದ್ದರೂ ಪೀರಪ್ಪ ಅವರನ್ನು ಹುಡುಕಿ ಬರುವ ಸ್ಕೂಟರ್‌­ಗಳ ಸಂಖ್ಯೆ          ಕಡಿಮೆಯಾಗಿಲ್ಲ.

ಗುಲ್ಬರ್ಗದ ಹಳೆ ಖೂಬಾ ಕಲ್ಯಾಣ ಮಂಟಪದ ಎದುರು ಇರುವ ಖೂಬಾ ಶಾಪಿಂಗ್‌ ಕಾಂಪ್ಲೆಕ್‌್ಸನ (ಖೂಬಾ ಪ್ಲಾಟ್‌) ನೆಲ ಅಂತಸ್ತಿನಲ್ಲಿ ಇವರ ಗ್ಯಾರೇಜು ಇದೆ. ಇಲ್ಲಿ ಸ್ಕೂಟರ್‌ಗಳಿಗೆ ಮಾತ್ರ ಪ್ರವೇಶ. ಅವುಗಳ ದುರಸ್ತಿ ಮಾತ್ರ ಇಲ್ಲಿ ನಡೆಯುತ್ತದೆ. ಪೀರಪ್ಪ ಸ್ಕೂಟರ್‌ಗಳ ತಜ್ಞ.

‘ಹನ್ನೆರಡನೇ ವಯಸ್ಸಿನಲ್ಲಿ ಸ್ಪ್ಯಾನರ್‌ ಹಿಡಿದೆ. ಬಳಿಕ ಪಾಲುದಾರರ ಜೊತೆಗೂಡಿ ಹತ್ತು ವರ್ಷದ ಗ್ಯಾರೇಜ್‌ ನಡೆಸಿದೆ. 1993ರಿಂದ ಇಲ್ಲೇ ಸ್ವಂತ ಗ್ಯಾರೇಜ್‌ ತೆರೆದು ಯಶಸ್ವಿಯಾಗಿದ್ದೇನೆ’ ಎನ್ನುವಾಗ ಅವರ ಮುಖದಲ್ಲಿ ಅದೇನೊ ಒಂದು ತರಹದ ತೃಪ್ತಿ.

ಬಜಾಜ್‌, ಲೂನಾ, ಎಲ್‌ಎಂಎಲ್‌ ವೆಸ್ಪಾ, ಲ್ಯಾಂಬ್ರಿಟ್ಟಾ ಮುಂತಾದ ಕಂಪೆನಿಗಳು 2000 ಇಸವಿಯಿಂದ ಸ್ಕೂಟರ್‌ ತಯಾರಿಕೆಯನ್ನು ನಿಲ್ಲಿಸಿವೆ. ಹೀಗಾಗಿ ಪೀರಪ್ಪ ಅವರ ‘ಮೆಟಲ್‌ ರೋಗಿ’ಗಳ ಸಂಖ್ಯೆ ಹಿಂದಿಗಿಂತ ಗಣನೀಯವಾಗಿ ಕುಸಿದಿದೆ.

‘ಆ ಕಾಲದಲ್ಲೆಲ್ಲ ಸ್ಕೂಟರ್‌ ಎಂದರೆ ಪ್ರತಿಷ್ಠೆ, ಗೌರವದ ಸಂಕೇತವಾಗಿ ಮನೆ ಮುಂದೆ ಇರುತ್ತಿತ್ತು.   ‘ಹೊಸ ನಮೂನೆಯ ಸ್ಕೂಟರ್‌ ನನ್ನಿಂದಾಗದು, ನನ್ನದೇನಿದ್ದರೂ ಬಜಾಜ್‌ನ ಚೇತಕ್‌, ಕ್ಲಾಸಿಕ್‌, ಪ್ರಿಯಾ, ವಾಸ್ಕೊ, ಎಫ್‌ಇ, ಇತರ ಕಂಪೆನಿಗಳ ಸ್ಕೂಟರ್‌ಗಳಾದ ವಿಜಯ್‌ ಡಿಲಕ್ಸ್‌, ಲೂನಾ, ಲ್ಯಾಂಬ್ರಿಟ್ಟ–ಲ್ಯಾಂಬಿ, ಎಲ್‌ಎಂಎಲ್‌ ವೆಸ್ಪಾದಂತಹ ಸ್ಕೂಟರ್‌ಗಳೊಂದಿಗೆ ಬದುಕು ಸವೆಸಿದ ಅನುಭವ.

ನನ್ನ ಸೋದರ ನನ್ನಲ್ಲೇ ಕಲಿತು ಈಗ ಹೋಂಡಾ ಆ್ಯಕ್ಟಿವಾ  ಮುಂತಾದ ಹೊಸ ನಮೂನೆಯ ವಾಹನಗಳ ದುರಸ್ತಿ ಗ್ಯಾರೇಜ್‌ ನಡೆಸುತ್ತಿದ್ದಾನೆ’ ಎನ್ನುತ್ತಾರೆ ಪೀರಪ್ಪ.

‘ಹಿಂದೆ ಗುಲ್ಬರ್ಗದಲ್ಲಿ ಹೆಸರಾಂತ ಸ್ಕೂಟರ್‌ ಗ್ಯಾರೇಜ್‌ ಆಗಿದ್ದ ಎಸ್‌.ಕೆ.ರಾವ್‌  ಅವರ ಗ್ಯಾರೇಜ್‌ನಲ್ಲಿ ಪ್ರಾಥಮಿಕ ತರಬೇತು ಪಡೆದು ನೈಪುಣ್ಯ ಗಳಿಸಿದೆ. ಎಲ್ಲವನ್ನೂ ನೋಡಿ ಕಲಿಯುವ ಕಾಲ ಅದು. ಐಟಿಐ, ಡಿಪ್ಲೊಮಾ, ವೃತ್ತಿ ಶಿಕ್ಷಣಗಳೆಲ್ಲ ನಮ್ಮಂಥ ಬಡವರಿಗೆ ಅಂದು ಕನಸಿನ ಮಾತು. ಹೀಗಾಗಿ ಬರೀ 7ನೇ ತರಗತಿ ಶಿಕ್ಷಣದೊಂದಿಗೆ  ಸ್ಕೂಟರ್‌ಗಳ ದುರಸ್ತಿ ಕರಗತ ಮಾಡಿಕೊಂಡೆ. ಐಟಿಐ, ಡಿಪ್ಲೊಮಾ ಪಡೆದವರಷ್ಟೇ ತಜ್ಞತೆಯೊಂದಿಗೆ 40 ವರ್ಷಕಾಲ ಸ್ಕೂಟರ್‌ಗಳ ಆರೈಕೆ ಮಾಡಿದ್ದೇನೆ’ ಎಂದು  ಹೆಮ್ಮೆಯಿಂದ ಹೇಳುತ್ತಾರೆ.

‘ಅಂದೆಲ್ಲಾ ಗ್ಯಾರೇಜ್‌ ತುಂಬಾ ಸ್ಕೂಟರ್‌ಗಳು ಇರುತ್ತಿದ್ದವು. ಗಣ್ಯರೂ ಸ್ಕೂಟರ್‌ ಹೊಂದಿರುತ್ತಿದ್ದರು. ಗಳಿಕೆಯೂ ಚೆನ್ನಾಗಿತ್ತು. ಗ್ರಾಹಕ ಹಾಗೂ ಮೆಕಾನಿಕ್‌ಗಳ ಮಧ್ಯೆ ಬಾಂಧವ್ಯವೂ ಆತ್ಮೀಯವಾಗಿರುತ್ತಿತ್ತು. ಫ್ಯಾಮಿಲಿ ಡಾಕ್ಟರ್‌ ಇದ್ದಂತೆ ಮನೆಮಂದಿ ವಾಹನಗಳಿಗೆ ನಿದಿತ ಮೆಕಾನಿಕ್‌ಗಳಿಂದಲೇ ದುರಸ್ತಿ ಮಾಡುವ ಕಾಲ ಅದಾಗಿತ್ತು. ಇಂದು ಸ್ಕೂಟರ್‌ ತೆರೆಮರೆ ಸೇರಿದಂತೆಯೇ, ಜನ ಜೀವನ, ಶೆೈಲಿ ಬದಲಾಗಿದೆ’ ಎಂದು ಗತವೈಭವವನ್ನು ಪೀರಪ್ಪ ಮೆಲುಕು ಹಾಕುತ್ತಾರೆ.

‘ಕೆಲಸ ತೃಪ್ತಿ ನೀಡಿದೆ’

‘ಈ ಕೆಲಸ ಆರಿಸಿಕೊಂಡಿರುವುದಕ್ಕೆ ತೃಪ್ತಿ ಇದೆ. ಸ್ವಂತ ಮನೆ ಇಲ್ಲದ ನಾನು ಹೊಸ ಮನೆ ಕಟ್ಟಿಸಿಕೊಳ್ಳಲು ಸಾಧ್ಯವಾಗಿದೆ. ಸ್ವಂತ ಗ್ಯಾರೇಜ್‌, ಇಬ್ಬರು ಮಕ್ಕಳಿಗೆ ಎಂಜಿನಿಯರಿಂಗ್‌– ಐಟಿ ಶಿಕ್ಷಣ ನೀಡಿದ್ದೇನೆ. ಇದೆಲ್ಲವನ್ನೂ ಕೊಟ್ಟದ್ದು ಇದೇ ಗ್ಯಾರೇಜ್‌. ನನ್ನಿಂದ ಕಲಿತವರೂ ಹೊರ ರಾಜ್ಯ, ಪ್ರದೇಶದಲ್ಲಿ ಒಳ್ಳೆಯ ಸ್ಥಿತಿಯಲ್ಲಿದ್ದಾರೆ.
–ಪೀರಪ್ಪ ಎಸ್‌. ಹಾಗರಗುಂಡಗಿ

‘ದುರಸ್ತಿ ಕೈಚಳಕ ಅದ್ಭುತ’
ಪೀರಪ್ಪ ಅವರಲ್ಲಿ 20 ವರ್ಷಗಳಿಂದ ಸ್ಕೂಟರ್‌ ದುರಸ್ತಿ ಮಾಡಿಸುತ್ತಿದ್ದೇನೆ. ಅವರಿಗೆ ಸ್ಕೂಟರ್‌ನಲ್ಲಿ ಇರುವ  ದೋಷಗಳು ಮುಟ್ಟಿದೊಡನೇ ಅರಿವಾಗುತ್ತದೆ. ದುರಸ್ತಿ  ತ್ವರಿತವಾಗಿ ಮಾಡುತ್ತಾರೆ. ಪರಿಪೂರ್ಣತೆ ಇರುತ್ತದೆ. ಸಾಮಾನ್ಯರಿಗೂ ಕೈಗೆಟಕುವ ಶುಲ್ಕದಲ್ಲಿ ಮಾಡುತ್ತಾರೆ. 40 ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದರೂ ಇಂದಿಗೂ ಅದೇ ಕ್ರಿಯಾಶೀಲತೆ, ಚಟುವಟಿಕೆ, ವೇಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
–ಸೈಯದ್‌ ಕ್ವಿಜರ್‌ ಹುಸೇನ್‌, ಗ್ರಾಹಕ, ಲ್ಯಾಬ್‌ ಟೆಕ್ನೀಷಿಯನ್‌

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.