ADVERTISEMENT

ಮೇಯರ್ ಕಾರಿಗೆ ಕಪ್ಪು ಬಣ್ಣ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 8:26 IST
Last Updated 28 ಫೆಬ್ರುವರಿ 2018, 8:26 IST

ಕಲಬುರ್ಗಿ: ಮಹಾನಗರ ಪಾಲಿಕೆಯ ನೂತನ ಕಟ್ಟಡದ ಮೇಲೆ ಉರ್ದು ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ಮುಸ್ಲಿಂ ಲೀಗ್ ವೆಲ್ಫೇರ್ ಸೊಸೈಟಿ ಕಾರ್ಯಕರ್ತರು ಮೇಯರ್ ಕಾರಿನ ಮೇಲೆ ಮಂಗಳವಾರ ಕಪ್ಪು ಬಣ್ಣ ಎರಚಿದರು.

ಪಾಲಿಕೆಗೆ ಬಂದ 20ಕ್ಕೂ ಹೆಚ್ಚು ಕಾರ್ಯಕರ್ತರು ಮೇಯರ್‌ ಶರಣಕುಮಾರ ಮೋದಿ ಅವರ ಕಾರನ್ನು ಅಡ್ಡಗಟ್ಟಿದರು. ಆಗ ಕೆಳಗಿಳಿದ ಮೇಯರ್ ಮಾತುಕತೆಗೆ ಮುಂದಾದರು. ಈ ವೇಳೆ ಪ್ರತಿಭಟನಾಕಾರರು ಬಣ್ಣ ಎರಚಿದರು. ಇದರಿಂದಾಗಿ ಸ್ಥಳದಲ್ಲಿ ಕೆಲಹೊತ್ತು ಆತಂಕ ನಿರ್ಮಾಣವಾಗಿತ್ತು. ಬಳಿಕ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ‘ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಲಾಗಿದೆ’ ಎಂದು ಬ್ರಹ್ಮಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪರ–ವಿರೋಧ: ‘ಕೇಂದ್ರ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ಕನ್ನಡದ ಜತೆಗೆ ಉರ್ದುವಿನಲ್ಲೂ ನಾಮಫಲಕ ಹಾಕಲಾಗಿದೆ. ಹೀಗಾಗಿ ಪಾಲಿಕೆ ಕಟ್ಟಡದ ಮೇಲೂ ಉರ್ದು ನಾಮಫಲಕ ಅಳವಡಿಸಬೇಕು’ ಎಂಬುದು ಮುಸ್ಲಿಂ ಸಂಘಟನೆಗಳ ಒತ್ತಾಯ. ‘ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ. ಯಾವ ಕಾರಣಕ್ಕೂ ಉರ್ದು ನಾಮಫಲಕ ಅಳವಡಿಸಬಾರದು’ ಎಂಬುದು ಕನ್ನಡಪರ ಸಂಘಟನೆಗಳ ವಾದವಾಗಿದೆ.

ADVERTISEMENT

ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹಾಗೂ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ನಗರದಲ್ಲಿ ಈಚೆಗೆ ಪರ– ವಿರೋಧ ಪ್ರತಿಭಟನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.