ADVERTISEMENT

ಮೋದಿ ವಿರುದ್ಧ ಕ್ರಮಕ್ಕೆ ಒತ್ತಾಯ

ಸುಳ್ಳು ಪ್ರಮಾಣಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 9:57 IST
Last Updated 12 ಏಪ್ರಿಲ್ 2014, 9:57 IST

ಗುಲ್ಬರ್ಗ: ‘2012ರ ಗುಜರಾತ್ ವಿಧಾನ­ಸಭೆ ಚುನಾವಣೆಯಲ್ಲಿ ಪತ್ನಿಯ ಬಗ್ಗೆ ವಿವರ ಸಲ್ಲಿಸದ ನರೇಂದ್ರ ಮೋದಿ ಈ ಬಾರಿಯ ಚುನಾವಣೆಯಲ್ಲಿ ಪತ್ನಿ ಇದ್ದಾರೆ ಎಂದು ಪ್ರಮಾಣಪತ್ರ ಸಲ್ಲಿಸಿ­ದ್ದಾರೆ. ಆದ್ದರಿಂದ ಅವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳ­ಬೇಕು’ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಒತ್ತಾಯಿಸಿದರು.

‘ತಮ್ಮ ಪತ್ನಿ ಶಿಕ್ಷಕಿಯಾಗಿದ್ದರೂ ಅವರ ಆದಾಯದ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಆಯೋಗಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿದರೆ, ಪ್ರಜಾ­ಪ್ರತಿನಿಧಿ ಕಾಯ್ದೆ 125 (ಎ) ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 195, 203ರ ಪ್ರಕಾರ ಎರಡು ವರ್ಷಗಳ ಕಾಲ ಶಿಕ್ಷೆಗೆ ಗುರಿಪಡಿಸುವ ಅಧಿಕಾರ ಚುನಾವಣಾ ಆಯೋಗಕ್ಕಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬೇರೆಯವರಿಗೆ ನೈತಿಕತೆ, ರಾಷ್ಟ್ರೀ­ಯತೆ ಬಗ್ಗೆ ಪಾಠ ಮಾಡುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರಿಗೆ ತಮ್ಮ ಸರ್ಕಾರವೇ ಪತ್ನಿಗೆ ಪಿಂಚಣಿ ನೀಡುವ ವಿಷಯ ಗೊತ್ತಿಲ್ಲದಿರುವುದು ದುರಂತ’ ಎಂದು ವ್ಯಂಗ್ಯವಾಡಿದ ಅವರು, ‘ಮೋದಿಗೆ ನಿಜವಾಗಿಯೂ ನೈತಿಕತೆ ಇದ್ದರೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು. ಲೋಕಸಭಾ ಚುನಾವಣೆಗೆ ವಡೋದರಾ ಹಾಗೂ ವಾರಾಣಸಿಯಿಂದ ಸಲ್ಲಿಸಿರುವ ನಾಮ­ಪತ್ರ­ಗಳನ್ನು ವಾಪಸು ಪಡೆಯಬೇಕು’ ಎಂದು ಆಗ್ರಹಿಸಿದರು.

‘2004 ರಿಂದ 1014ರ ವರೆಗೆ ಗುಜರಾತ್‌ನಲ್ಲಿ 4,870 ರೈತರು ಆತ್ಮ­ಹತ್ಯೆ ಮಾಡಿಕೊಂಡಿದ್ದಾರೆ. ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಗುಜರಾತ್ 4ನೇ ಸ್ಥಾನದಲ್ಲಿದೆ. ಅನಿವಾಸಿ ಗುಜರಾತಿಗಳು ತಮ್ಮ ರಾಜ್ಯದಲ್ಲಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ್ದಾರೆ. ಹೀಗಾಗಿ ಅಲ್ಲಿ ಅಭಿವೃದ್ಧಿ ಆಗಿದೆಯೇ ಹೊರತು ಮೋದಿಯಿಂದ ಅಲ್ಲ. ಅಲ್ಲದೇ, ಅಲ್ಲಿ ಸಹಕಾರಿ ಕ್ಷೇತ್ರಗಳ ಹಿಡಿತದಲ್ಲೇ ಆಡಳಿತ ನಡೆಯುತ್ತಿದೆ ಎಂಬುದನ್ನು ಮೋದಿ ಅರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವಂತೆ ನಾನು ಹಾಗೂ ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ ಮನವಿ ಮಾಡಿದ್ದೆವು. ಆದರೆ, ಪ್ರಜಾ­ಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೆ ಮಾಡ­ಲಾಗುವುದಿಲ್ಲ ಎಂಬುದು ವಾಸ್ತವ. ಆದ್ದರಿಂದ, ಈ ಭಾಗದ ಮತದಾರರು ಖರ್ಗೆ ಅವರನ್ನು ದಾಖಲೆ ಅಂತರದಲ್ಲಿ ಗೆಲ್ಲಿಸುವ ಮೂಲಕ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲು ಅವರಿಗೆ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು. ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ, ಡಾ.ಪುಷ್ಪಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.