ADVERTISEMENT

ರಾರಾಜಿಸುತ್ತಿವೆ ಅನಧಿಕೃತ ಫ್ಲೆಕ್ಸ್‌

ಎಲ್ಲೆಂದರಲ್ಲಿ ಶುಭಾಶಯ ಕೋರುವ ಬ್ಯಾನರ್‌, ಫಲಕಗಳ ಅಳವಡಿಕೆ, ಪಾಲಿಕೆ ಆದಾಯಕ್ಕೆ ಪೆಟ್ಟು

ಕೆ.ಎನ್.ನಾಗಸುಂದ್ರಪ್ಪ
Published 2 ಜುಲೈ 2018, 12:52 IST
Last Updated 2 ಜುಲೈ 2018, 12:52 IST
ಕಲಬುರ್ಗಿಯಲ್ಲಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್‌ಗಳು
ಕಲಬುರ್ಗಿಯಲ್ಲಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್‌ಗಳು   

ಕಲಬುರ್ಗಿ: ನಗರದ ಪ್ರಮುಖ ರಸ್ತೆ, ವೃತ್ತ ಮತ್ತು ಬಡಾವಣೆಗಳಲ್ಲಿ ಫ್ಲೆಕ್ಸ್‌ ಬ್ಯಾನರ್‌ಗಳು ರಾರಾಜಿಸುತ್ತಿವೆ. ಆದರೆ ಇದರಲ್ಲಿ ಅತಿ ಹೆಚ್ಚು ಫ್ಲೆಕ್ಸ್‌ ಬ್ಯಾನರ್‌ಗಳನ್ನು ಅನಧಿಕೃತವಾಗಿ ಹಾಕಲಾಗಿದೆ. ಇದರಿಂದ ಮಹಾನಗರ ಪಾಲಿಕೆಗೆ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗುತ್ತಿದೆ.

ಬ್ಯಾನರ್‌, ಫ್ಲೆಕ್ಸ್‌, ಜಾಹೀರಾತು ಫಲಕ ಅಳವಡಿಸಲು ನಿಗದಿತ ಶುಲ್ಕ ಪಾವತಿಸಿ ನಗರ ಪಾಲಿಕೆಯಿಂದ ಅನುಮತಿ ಪಡೆಯಬೇಕು. ಆದರೆ ಇಲ್ಲಿನ ಬಹುತೇಕ ಫ್ಲೆಕ್ಸ್‌ಗಳನ್ನು ಅನುಮತಿ ಪಡೆಯದೆ ಎಲ್ಲೆಂದರಲ್ಲಿ ಅಳವಡಿಸಲಾಗುತ್ತಿದೆ. ಅಲ್ಲದೆ ನಗರದ ಅಂದ ಕೆಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆದರೂ ನಗರ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಕಲಬುರ್ಗಿಯಲ್ಲಿ ಹಬ್ಬ, ಧಾರ್ಮಿಕ ಕಾರ್ಯಕ್ರಮ, ಧಾರ್ಮಿಕ ನಾಯಕರ ಜಯಂತಿ, ರಾಜಕೀಯ ನಾಯಕರ ಹುಟ್ಟುಹಬ್ಬ, ಸಮಾವೇಶಗಳಿಗೆ ನೂರಾರು ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕಲಾಗುತ್ತದೆ. ಆದರೆ ಈ ಸಂದರ್ಭ ನಗರ ಪಾಲಿಕೆಯಿಂದ ಅನುಮತಿ ಪಡೆಯುತ್ತಿಲ್ಲ. ಎಲ್ಲೆಂದರಲ್ಲಿ ಫ್ಲೆಕ್ಸ್‌, ಬ್ಯಾನರ್‌ ಹಾಕಿ, ಒಂದೆರಡು ದಿನದಲ್ಲಿ ವಾಪಸ್‌ ತೆಗೆದುಕೊಂಡು ಹೋಗುತ್ತಾರೆ.

ಅದರಲ್ಲಿಯೂ ನಗರದ ಹೃದಯ ಭಾಗವಾದ ಸ್ಟೇಷನ್‌ ಬಜಾರ್‌ ರಸ್ತೆ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಸಮೀಪ, ಸೂಪರ್‌ ಮಾರ್ಕೆಟ್‌ ರಸ್ತೆ, ಹೊಸ ಜೇವರ್ಗಿ ರಸ್ತೆಯಲ್ಲಿ ಫ್ಲೆಕ್ಸ್‌ಗಳು ರಾರಾಜಿಸುತ್ತವೆ. ಪ್ರತಿ ಹಬ್ಬ, ವಿಶೇಷ ದಿನಗಳಂದು ಅದೇ ಜಾಗಗಳಲ್ಲಿ ಫ್ಲೆಕ್ಸ್‌ಗಳನ್ನು ಬದಲಿಸಿ ಹಾಕಲಾಗುತ್ತದೆ. ಇದಕ್ಕೆ ಅನುಮತಿ ಪಡೆಯುತ್ತಿಲ್ಲ. ಕೇವಲ ವಾಣಿಜ್ಯ ಉದ್ದೇಶದ ಜಾಹೀರಾತು ಕಂಪೆನಿಗಳ ಫ್ಲೆಕ್ಸ್‌ ಮತ್ತು ಫಲಕಗಳಿಗೆ ಮಾತ್ರ ಅನುಮತಿ ಪಡೆಯಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ನಗರ ಪಾಲಿಕೆ ಅಧಿಕಾರಿ ಮಾಹಿತಿ ನೀಡಿದರು.

ಮುಖ್ಯಾಂಶಗಳು

27 ಲಕ್ಷ ರೂ ಕಾರ್ಪೋರೆಟ್‌, ವಾಣಿಜ್ಯ ಸಂಸ್ಥೆಗಳಿಂದ ಆದಾಯ

5 ಜಾಹೀರಾತು ಅಧಿಕೃತ
ಫ್ಲೆಕ್ಸ್‌ ಹಾಕುವ ಕಂಪೆನಿಗಳಿವೆ
* ವರ್ಷಾರಂಭದಲ್ಲಿ ಶುಲ್ಕ ಪಾವತಿಸಿದರೆ ಅನುಮತಿ
* ಹುಟ್ಟುಹಬ್ಬ, ಪುಣ್ಯತಿಥಿ ಫ್ಲೆಕ್ಸ್‌ಗೆ ಅನುಮತಿ ಪಡೆಯುತ್ತಿಲ್ಲ
* ಎಲ್ಲೆಂದರಲ್ಲಿ ಹಾಕಿದರೂ ಕ್ರಮಕೈಗೊಳ್ಳಲಾಗದ ಸ್ಥಿತಿಯಲ್ಲಿ ಪಾಲಿಕೆ

ADVERTISEMENT

ನಗರದಲ್ಲಿ ಪ್ರಮುಖವಾಗಿ ಜಾಹೀರಾತು ಫ್ಲೆಕ್ಸ್‌, ಫಲಕ ಅಳವಡಿಸುವ 5 ಕಂಪೆನಿಗಳಿವೆ. ಇವುಗಳು ವಾಣಿಜ್ಯ ಮತ್ತು ಸಾಂಸ್ಥಿಕ ಸ್ವರೂಪದ ಕಂಪೆನಿಗಳ ದೀರ್ಘಕಾಲದ ಜಾಹೀರಾತು ಫ್ಲೆಕ್ಸ್‌ ಅಳವಡಿಸಲು ನಗರ ಪಾಲಿಕೆಯಿಂದ ಅಧಿಕೃತವಾಗಿ ಅನುಮತಿ ಪಡೆಯುತ್ತಿವೆ. ಇಂತಹ ಕಂಪೆನಿಗಳಿಂದ ನಗರ ಪಾಲಿಕೆಗೆ ವಾರ್ಷಿಕ ಸುಮಾರು ರೂ 27 ಲಕ್ಷ ಆದಾಯ ಬರುತ್ತಿದೆ. ವರ್ಷದ ಆರಂಭದಲ್ಲಿಯೇ ಶುಲ್ಕ ಪಾವತಿಸಿ ಅನುಮತಿ ಪಡೆಯಲಾಗುತ್ತಿದೆ.

ಆನಂತರ ವರ್ಷ ಪೂರ್ತಿ ಫ್ಲೆಕ್ಸ್‌ ಅಳವಡಿಸುವ ಮುಖಂಡರು, ಸಂಘ–ಸಂಸ್ಥೆಗಳು ನಗರ ಪಾಲಿಕೆಯತ್ತ ಸುಳಿಯುವುದೂ ಇಲ್ಲ. ಅನಧಿಕೃತ ಫ್ಲೆಕ್ಸ್‌ ಎಂದು ತಿಳಿದಿದ್ದರೂ ರಾಜಕೀಯ ಮುಖಂಡರ ಒತ್ತಡಗಳಿಂದ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ನಗರ ಪಾಲಿಕೆ ವಿಭಾಗೀಯ ಕಚೇರಿಗಳ ಅಧಿಕಾರಿಗಳಿಗೆ ಜಾಹೀರಾತು ಫ್ಲೆಕ್ಸ್‌ ಮತ್ತು ನಾಮಫಲಕ ಅಳವಡಿಸಲು ಅನುಮತಿ ನೀಡುವ ಮತ್ತು ಅನಧಿಕೃತ ಫಲಕಗಳನ್ನು ತೆರವುಗೊಳಿಸುವ ಅಧಿಕಾರ ನೀಡಲಾಗಿದೆ. ಅನಧಿಕೃತ ಫಲಕ ಕಂಡುಬಂದರೆ ಅಧಿಕಾರಿಗಳು ತೆರವುಗೊಳಸುತ್ತಾರೆ ಎಂದು ಆಯುಕ್ತ ಶ್ರೀಕಾಂತ್‌ ಕಟ್ಟಿಮನಿ ತಿಳಿಸಿದರು.

ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಆರ್ಥಿಕ ವರ್ಷದ ಆರಂಭದಲ್ಲಿ ಡಿ.ಡಿ ರೂಪದಲ್ಲಿ ಸಂಪೂರ್ಣ ಶುಲ್ಕ ಪಾವತಿಸಿದವರಿಗೆ ಫ್ಲೆಕ್ಸ್‌, ಜಾಹೀರಾತು ಫಲಕ ಅಳವಡಿಸಲು ವಾರ್ಷಿಕ ಅನುಮತಿ ನೀಡಲಾಗುವುದು.
ಶ್ರೀಕಾಂತ್‌ ಕಟ್ಟಿಮನಿ, ಮಹಾನಗರ ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.