ADVERTISEMENT

ರೈಲು ನಿಲ್ದಾಣದಲ್ಲಿ ಪ್ರಿಪೇಯ್ಡ್‌ ಆಟೊ ಇಲ್ಲ

ಮಧ್ಯರಾತ್ರಿ ನಗರಕ್ಕೆ ಬಂದಿಳಿಯುವ ಪ್ರಯಾಣಿಕರಿಗೆ ಸುರಕ್ಷತೆಯ ಆತಂಕ, ಅಧಿಕ ದರ ಕೇಳುವ ಚಾಲಕರು

ಕೆ.ಎನ್.ನಾಗಸುಂದ್ರಪ್ಪ
Published 2 ಜುಲೈ 2018, 12:52 IST
Last Updated 2 ಜುಲೈ 2018, 12:52 IST

ಕಲಬುರ್ಗಿ: ನಗರಕ್ಕೆ ಮಧ್ಯರಾತ್ರಿಯ ನಂತರ ರೈಲು ಅಥವಾ ಬಸ್‌ ನಿಲ್ದಾಣದಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ಮನೆ ತಲುಪುವುದು ಹೇಗೆ ಎಂಬ ಆತಂಕ ಕಾಡುತ್ತದೆ. ಆಟೊ ಚಾಲಕರು 4ರಿಂದ 5 ಪಟ್ಟು ಹಣ ಕೇಳುತ್ತಾರೆ. ಅಲ್ಲದೆ  ರಾತ್ರಿಯಲ್ಲಿ ಆಟೊ ಪ್ರಯಾಣ ಎಷ್ಟು ಸುರಕ್ಷಿತ ಎಂಬ ಆಂತಕ ಜನರಲ್ಲಿದೆ.

ಇಲ್ಲಿನ ರೈಲು ಮತ್ತು ಬಸ್‌ ನಿಲ್ದಾಣಗಳಲ್ಲಿ ಪ್ರಿಪೇಯ್ಡ್‌ ಆಟೊ ವ್ಯವಸ್ಥೆ ಇಲ್ಲ. ಆಟೊದವರು ಕೇಳಿದಷ್ಟು ಹಣ ಕೊಟ್ಟು ಪ್ರಯಾಣ ಮಾಡುವುದು ಅನಿವಾರ್ಯ. ನಗರದ ರೈಲ್ವೆ ನಿಲ್ದಾಣದಲ್ಲಿ ರಾತ್ರಿ 11ರ ನಂತರ ಬಂದಿಳಿಯುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚು. ಅದಕ್ಕೆ ತಕ್ಕಂತೆ ಆಟೊ ಸಮಸ್ಯೆಯೂ ಹೆಚ್ಚು.

ನಗರದ ರೈಲ್ವೆ ನಿಲ್ದಾಣದಲ್ಲಿ 5 ವರ್ಷಗಳ ಹಿಂದೆ ಪ್ರಿಪೇಯ್ಡ್‌ ಆಟೊ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಆಟೊ ಚಾಲಕರ ಸಂಘ, ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಸಂಚಾರ ಪೋಲಿಸರ ನಡುವಿನ ಸಮನ್ವಯದ ಕೊರತೆಯಿಂದ ಈ ವ್ಯವಸ್ಥೆ ಕೇವಲ 6 ತಿಂಗಳೂ ಸರಿಯಾಗಿ ನಿರ್ವಹಿಸಲಿಲ್ಲ.

ಆದರೆ ಆನಂತರ ಮತ್ತೆ ಪ್ರಿಪೇಯ್ಡ್‌ ಆಟೊ ವ್ಯವಸ್ಥೆ ಆರಂಭಿಸುವ ಬಗ್ಗೆ ಎಲ್ಲಿಯೂ ಚರ್ಚೆ ನಡೆಯಲಿಲ್ಲ. ಎರಡರಿಂದ ಮೂರು ತಿಂಗಳಿಗೊಮ್ಮೆ ನಡೆಯುವ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿಯೂ (ಆರ್‌ಟಿಎ) ಪ್ರಿಪೇಯ್ಡ್‌ ಆಟೊ ವ್ಯವಸ್ಥೆ ಸ್ಥಗಿತಗೊಂಡಿರುವ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲಿಲ್ಲ. ಪ್ರಯಾಣಿಕರ ಸಮಸ್ಯೆ ಮುಂದುವರಿದಿದೆ.

ನಗರದಲ್ಲಿ ನಿತ್ಯ ರಾತ್ರಿ 9ರಿಂದ ಬೆಳಿಗ್ಗೆ 6ರ ನಡುವೆ 16ಕ್ಕೂ ಹೆಚ್ಚು ರೈಲುಗಳು ಬಂದು– ಹೋಗುತ್ತವೆ. ಈ ಸಂದರ್ಭ ಕುಟುಂಬ ಸಮೇತ ರೈಲ್ವೆ ನಿಲ್ದಾಣಕ್ಕೆ ಬಂದಿಳಿದರೆ ಯಾರನ್ನು ನಂಬಿ ಪ್ರಯಾಣಿ ಸಬೇಕು ಎಂಬ ಆತಂಕ ಎಲ್ಲರಲ್ಲಿದೆ. ಅಲ್ಲದೆ 6 ತಿಂಗಳ ಹಿಂದೆ ರೈಲ್ವೆ ನಿಲ್ದಾಣ ದಿಂದ ಆಟೊದಲ್ಲಿ ತೆರಳಿದ ಮಹಿಳೆ ಮೇಲೆ ಹಲ್ಲೆ ನಡೆದಿತ್ತು. ಇದು ದೊಡ್ಡ ಸುದ್ದಿಯಾದರೂ, ಪ್ರಿಪೇಯ್ಡ್‌ ಆಟೊ ವ್ಯವಸ್ಥೆ ಜಾರಿಗೆ ಆರ್‌ಟಿಎ ಇದುವರೆಗೂ ಕ್ರಮಕೈಗೊಂಡಿಲ್ಲ.

ಪ್ರಿಪೇಯ್ಡ್‌ ಆಟೊ ವ್ಯವಸ್ಥೆ ಜಾರಿಯಾ­ದರೆ ಅಪರಾಧ ಪ್ರಕರಣ ತಡೆಗೂ ಅನುಕೂಲ. ಪ್ರಿಪೇಯ್ಡ್‌ ವ್ಯವಸ್ಥೆಯ ಆಟೊದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಹೆಸರು, ಸ್ಥಳ ಮತ್ತು ಆಟೊ ಸಂಖ್ಯೆ ದಾಖಲಾಗುತ್ತದೆ. ಇದರಿಂದ ಪ್ರಯಾಣಿ ಕರು ನಿರಾಂತಕವಾಗಿ ಬಸ್‌ ಮತ್ತು ರೈಲ್ವೆ ನಿಲ್ದಾಣದಿಂದ ಪ್ರಯಾಣಿಸಬಹುದು.

‘ನಗರದ ರೈಲು ಮತ್ತು ಬಸ್ ನಿಲ್ದಾಣದಲ್ಲಿ ಪ್ರಿಪೇಯ್ಡ್‌ ಆಟೊ ಆರಂಭಿಸಬೇಕು ಎಂಬ ಪ್ರಸ್ತಾವವಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆ ಯಲ್ಲಿ ನಡೆಯುವ ಮುಂದಿನ ಆರ್‌ಟಿಎ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುಲಾಗುವುದು’ ಎಂದು ಜಂಟಿ ಸಾರಿಗೆ ಅಧಿಕಾರಿ ಶಿವರಾಜ್‌ ಪಾಟೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವ್ಯವಸ್ಥೆ ಯಶಸ್ವಿಯಾಗಬೇಕೆಂದರೆ ಆಟೊ ಚಾಲಕರು, ಸಾರ್ವಜನಿಕರು, ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ, ರೈಲ್ವೆ ಮತ್ತು ಈಶಾನ್ಯ ಸಾರಿಗೆ ಸಂಸ್ಥೆ ಅಧಿ ಕಾರಿಗಳ ಸಹಕಾರ ಮುಖ್ಯ. ಮೊದಲು ಆಟೊ ಚಾಲಕರ ಸಂಘದ ಜತೆಗೆ ಮಾತು ಕತೆ ನಡೆಸುವುದಾಗಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.