ADVERTISEMENT

ವರ್ಷ ಕಳೆದರೂ ಸಿಗದ ಆಶ್ರಯಭಾಗ್ಯ

ಅಲಿಬಾಬಾ ಪಟೇಲ್
Published 7 ನವೆಂಬರ್ 2017, 7:17 IST
Last Updated 7 ನವೆಂಬರ್ 2017, 7:17 IST
ಎಚ್‌.ಸಿದ್ದಾಪುರ ಗ್ರಾಮದಲ್ಲಿರುವ ಆಶ್ರಯ ಮನೆಗಳು ಹಾಳು ಬಿದ್ದಿರುವುದು (ಎಡಚಿತ್ರ). ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿರುವುದು
ಎಚ್‌.ಸಿದ್ದಾಪುರ ಗ್ರಾಮದಲ್ಲಿರುವ ಆಶ್ರಯ ಮನೆಗಳು ಹಾಳು ಬಿದ್ದಿರುವುದು (ಎಡಚಿತ್ರ). ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿರುವುದು   

ಜಾಲಹಳ್ಳಿ: ತಾಲ್ಲೂಕು ಕೇಂದ್ರದಿಂದ 25 ಕಿ.ಮೀ ದೂರದಲ್ಲಿರುವ ಎಚ್‌.ಸಿದ್ದಾಪುರ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ. ಗ್ರಾಮದಲ್ಲಿಯೇ ಗ್ರಾಮ ಪಂಚಾಯಿತಿ ಕಚೇರಿ ಇದ್ದರೂ ಅನೇಕ ಯೋಜನೆಗಳು ಜಾರಿಯಾಗದೇ ಗ್ರಾಮ ಕೊಳಗೇರಿಯಂತಾಗಿದೆ ಎಂಬುದು ಗ್ರಾಮಸ್ಥರ ಆರೋಪ. 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಜನರು ವಿವಿಧ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ.

2008–09 ರಲ್ಲಿ ವಿವಿಧ ಆಶ್ರಯ ಯೋಜನೆಯಡಿ 120 ಮನೆಗಳು ಮಂಜೂರಾಗಿದ್ದು, ತಾಲ್ಲೂಕು ಆಡಳಿತ ಮನೆಗಳ ನಿರ್ಮಾಣಕ್ಕೆ 6ಎಕರೆ ಕೃಷಿ ಭೂಮಿಯನ್ನು ₹25ಲಕ್ಷ ನೀಡಿ ಖರೀದಿಸಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿಯ ವರೆಗೆ ಕೇವಲ 53 ಮನೆಗಳು ಮಾತ್ರ ನಿರ್ಮಾಣಗೊಂಡಿವೆ.

‘ಪೂರ್ಣಗೊಂಡ ಮನೆಗಳಿಗೆ ವಿದ್ಯುತ್‌ ಸಂಪರ್ಕವಿಲ್ಲ. ವರ್ಷಗಳೇ ಕಳೆದರೂ ಫಲಾನುಭವಿಗಳಿಗೆ ವಿತರಣೆ ಮಾಡಿಲ್ಲ. ಈ ಮನೆಗಳು ಸದ್ಯ ಶೌಚಾಲಯಗಳಾಗಿ ಪರಿರ್ವತಗೊಂಡಿವೆ. ಈ ಬಗ್ಗೆ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳ ಹಾಗೂ ಶಾಸಕರ ಗಮನಕ್ಕೆ ತರಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ದೂರುತ್ತಾರೆ.

ADVERTISEMENT

‘50 ಸಾವಿರ ಲೀಟರ್‌ ನೀರು ಸಂಗ್ರಹದ ನೀರಿನ ಟ್ಯಾಂಕ್‌ ಬಳಕೆಯಾಗದೆ ಹಾಳುಬಿದ್ದಿದೆ. ಒಂದು ವರ್ಷದ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗಿದ್ದು, ಉದ್ಘಾಟನೆಗೊಂಡಿಲ್ಲ. ಎಸ್‌ಟಿಪಿ ಯೋಜನೆ ಅಡಿ ₹80 ಲಕ್ಷ ವೆಚ್ಚದಲ್ಲಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ರಸ್ತೆ ಪಕ್ಕದಲ್ಲಿ ಚರಂಡಿಗಳು ನಿರ್ಮಿಸಿಲ್ಲ ಹೊಲಸು ನೀರು ರಸ್ತೆಯಲ್ಲಿಯೇ ಸಂಗ್ರಹಗೊಂಡು ಸೊಳ್ಳೆಗಳ ತಾಣವಾಗಿದೆ’ ಎಂದು ಗ್ರಾಮಸ್ಥ ಕೇಚಪ್ಪ ಮಂಡಲಗುಡ್ಡ ಆರೋಪಿಸುತ್ತಾರೆ.

‘2005–06 ರಲ್ಲಿ ಶಿಕ್ಷಣ ಇಲಾಖೆ ₹10 ಲಕ್ಷ ವೆಚ್ಚದಲ್ಲಿ 4 ಕೋಣೆಗಳನ್ನು ನಿರ್ಮಿಸಲಾಗಿದೆ. ಕೋಣೆಗಳು ಕಳಪೆಯಾಗಿದ್ದು, ಇಲ್ಲಿಯವರೆಗೆ ಶಾಲಾ ಶಿಕ್ಷಕರು ಅ ಕೋಣೆಗಳನ್ನು ಬಳಕೆ ಮಾಡಿಕೊಳ್ಳದೇ ಇರುವುದರಿಂದ ಸುತ್ತಲು ಗಿಡಗಂಟಿ ಬೆಳೆದಿವೆ’ ಎಂದು ಅವರು ದೂರುತ್ತಾರೆ.

‘ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ. ಗ್ರಾಮದ ಸುತ್ತಲು ನಾರಾಯಣಪುರ ಬಲದಂಡೆ ಕಾಲುವೆಯ ಬಸಿ ನೀರು ಹಾಗೂ ಭತ್ತದ ಗದ್ದೆಗಳು ಇರುವುದರಿಂದ ಶೌಚಾಲಯ ಇಲ್ಲದೆ ಮಹಿಳೆಯರು ಹಾಗೂ ಪುರುಷರು ಪರದಾಡುವಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ರಾಮಚಂದ್ರಪ್ಪ ನಾಯಕ ಮುರಾಳ ಆರೋಪಿಸಿಸುತ್ತಾರೆ.

ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಬೇಕು. ಸಮರ್ಪಕ ಚರಂಡಿ ನಿರ್ಮಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.