ADVERTISEMENT

ಶಹಾಪುರದಲ್ಲಿ ದಸರಾ ಮಹೋತ್ಸವ ನಡೆಯಲಿ: ವೀರಸೋಮೇಶ್ವರ ಶಿವಾಚಾರ್ಯರು

​ಪ್ರಜಾವಾಣಿ ವಾರ್ತೆ
Published 5 ಮೇ 2019, 15:08 IST
Last Updated 5 ಮೇ 2019, 15:08 IST
ಶಹಾಪುರ ಚರಬಸವೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ಧರ್ಮ ಸಂಸ್ಕಾರ ಜನ ಜಾಗೃತಿ ಸಮಾರಂಭವನ್ನು ಶಾಸಕ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಬಾಳೆಹೊನ್ನೂರ ರಂಭಾಪುರಿ ಮಠದ  ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು
ಶಹಾಪುರ ಚರಬಸವೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ಧರ್ಮ ಸಂಸ್ಕಾರ ಜನ ಜಾಗೃತಿ ಸಮಾರಂಭವನ್ನು ಶಾಸಕ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಬಾಳೆಹೊನ್ನೂರ ರಂಭಾಪುರಿ ಮಠದ  ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು   

ಶಹಾಪುರ: ಬದುಕಿಗೆ ಸಂಸ್ಕಾರದ ಜೊತೆಗೆ ಧರ್ಮಾಚರಣೆ ಅಗತ್ಯವಾಗಿದೆ. ಧರ್ಮದ ಹೆಸರಿನಲ್ಲಿ ಜಾತಿ ತಳುಕು ಹಾಕಿಕೊಳ್ಳುತ್ತಿದೆ. ಧರ್ಮ ಹಾಗೂ ಜಾತಿಯ ನಡುವೆ ಸಂಘರ್ಷ ನಡೆಯುತ್ತಿರುವುದು ಅಪಾಯಕಾರಿ ಬೆಳೆವಣಿಗೆಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಚರಬಸವೇಶ್ವರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾನುವಾರ ಜರುಗಿದ ಧರ್ಮ ಸಂಸ್ಕಾರ ಜನ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು

ಇಂದಿನ ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿಯ ಕೊರತೆ ಕಾಣುತ್ತೇವೆ. ಅರಿವು ಆಚರಣೆ ಇಲ್ಲದ ಮನುಷ್ಯನ ಬದುಕು ಅಶಾಂತಿಯಿಂದ ಕೂಡಿದೆ. ವೈಚಾರಿಕ ಮತ್ತು ಆಧುನಿಕತೆ ಹೆಸರಿನಲ್ಲಿ ಸತ್ಯ, ನ್ಯಾಯ, ಧರ್ಮವನ್ನು ಕಲುಷಿತಗೊಳಿಸಲಾಗುತ್ತಿದೆ. ಗುರುಪೀಠಗಳು, ವಿರಕ್ತರು, ಮಠಾಧೀಶರು, ಸಮನ್ವಯತೆಯನ್ನು ಪರಿಪಾಲಿಸಿಕೊಂಡು ಮುನ್ನಡೆಯಬೇಕು. ಧರ್ಮದ ಹೊರಗಿನ ವೈರಿಗಳನ್ನು ನಿಯಂತ್ರಿಸಬಹುದು. ಆದರೆ ಒಳಗಿನ ವೈರಿಗಳನ್ನು ನಿಯಂತ್ರಿಸುವುದು ಕಷ್ಟ. ಲಿಂಗಾಯತ ಧರ್ಮದ ಹೆಸರಿನಲ್ಲಿ ಬೇರ್ಪಡಿಸುವ ವ್ಯರ್ಥ ಪ್ರಯತ್ನ ವಿಫಲವಾಗಿದೆ. ಈಗಾಲಾದರೂ ಜಾತಿಯನ್ನು ವಿಭಜಿಸುವ ಗೋಜಿಗೆ ಕೈ ಹಾಕಬಾರದು. ಶಹಾಪುರದಲ್ಲಿ ದಸರಾ ಮಹೋತ್ಸವ ಆಚರಿಸಬೇಕು ಎಂದು ಸಲಹೆ ಮಾಡಿದರು.

ಶಾಸಕ ಶರಣಬಸಪ್ಪ ದರ್ಶನಾಪುರ, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜೇಂದ್ರ ದೇಶಮುಖ, ಫಕೀರೇಶ್ವರ ಮಠದ ಗುರುಪಾದ ಸ್ವಾಮಿಗಳು, ಗುಂಬಳಾಪುರ ಮಠದ ಸಿದ್ದೇಶ್ವರ ಸ್ವಾಮಿಗಳು, ಜಂಗಮ ಸಮಾಜದ ಗೌರವಾಧ್ಯಕ್ಷ ಬಸವರಾಜ ಹಿರೇಮಠ, ಕರವೇ ಅಧ್ಯಕ್ಷ ಶರಣು ಗದ್ದುಗೆ, ಕೆರೂಟಗಿ ಶಿವಬಸವ ಸ್ವಾಮಿಗಳು, ಚರಬಸವೇಶ್ವರ ಗದ್ದುಗೆ ಮಠದ ಬಸವಯ್ಯ ಶರಣರು, ಶಹಾಪುರ ಬೆಟ್ಟದ ರುದ್ರಪಶುಪತೇಶ್ವರ ಸ್ವಾಮಿಗಳು, ಕಲಬುರ್ಗಿ ಗಿರಿಯಪ್ಪ ಮುತ್ಯಾ, ದೋರನಹಳ್ಳಿ ಹಿರೇಮಠದ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ, ಗಿರೀಶ ಶಾಬಾದಿ, ಅಮರೇಶ ಹಿರೇಮಠ, ಅಮರಯ್ಯ ಸ್ವಾಮಿ ಇದ್ದರು.

ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಹಿರೇಮಠ ಮತ್ತು ಸಿದ್ಧಾರ್ಥ ಹಿರೇಮಠ ಉಭಯ ವಟುಗಳು ಶಿವದೀಕ್ಷಾ ಅಯ್ಯಾಚಾರ ಸ್ವೀಕರಿಸಿದರು.

ADVERTISEMENT

ದರ್ಶನಾಪುರಗೆ ಸಚಿವ ಸ್ಥಾನ ನೀಡಿ
ಹೈದರಾಬಾದ್‌ ಕರ್ನಾಟಕ ಪ್ರದೇಶದ ವತಿಯಿಂದ ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಶರಣಬಸಪ್ಪ ದರ್ಶನಾಪುರ ಅವರಿಗೆ ಸಚಿವ ಸ್ಥಾನ ನೀಡಬೇಕು. ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸಮ್ಮಿಶ್ರ ಸರ್ಕಾರದ ಮುಖಂಡರಿಗೆ ಜನಜಾಗೃತಿ ವೇದಿಕೆಯ ಮೂಲಕ ಒತ್ತಾಯಿಸುವುದಾಗಿ ರಂಭಾಪುರಿ ಶ್ರೀಗಳು ತಿಳಿಸಿದರು.

ಶರೀರದ ಮೇಲೆ ಲಿಂಗ ಧರಿಸಿ
ಲಿಂಗವನ್ನು ಧರಿಸದೇ ಗೂಟಕ್ಕೆ ಹಾಕುವುದು ಸರಿಯಲ್ಲ. ಲಿಂಗವನ್ನು ಯಾರಾದರೂ ಮುಟ್ಟಿದರೆ ಮೈಲಿಗೆ ಆಗುತ್ತದೆ ಎನ್ನುವುದು ತಪ್ಪು ಭಾವನೆ. ಲಿಂಗ ಸ್ಪರ್ಶದಿಂದ ವ್ಯಕ್ತಿ ಪವಿತ್ರನಾಗುತ್ತಾನೆ. ಯಾವಾಗಲೂ ಲಿಂಗವನ್ನು ಶರೀರದ ಮೇಲೆ ಧರಿಸಬೇಕು ಎಂದು ಯುವ ಸಮುದಾಯಕ್ಕೆ ರಂಭಾಪುರಿ ಶ್ರೀಗಳು ಸಲಹೆ ಮಾಡಿದರು.

*ತಂದೆ ತಾಯಿಯ ಪಾಲನೆ ಮಕ್ಕಳ ಕರ್ತವ್ಯವಾಗಿದೆ. ವೃದ್ದಾಶ್ರಮಗಳು ತೆಲೆ ಎತ್ತಿರುವುದು ನಾಗರಿಕ ಸಮಾಜದ ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಹಿರಿಯರನ್ನು ಗೌರವದಿಂದ ಕಾಣಬೇಕು
ರಂಭಾಪುರಿ ಶ್ರೀಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.