ADVERTISEMENT

ಸಗರನಾಡಿನ ಮಹಾ ದಾಸೋಹಿ ಚರಬಸವ

ಚರಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಹರಿದು ಬರುವ ಭಕ್ತ ಸಾಗರ

ಟಿ.ನಾಗೇಂದ್ರ
Published 22 ಮಾರ್ಚ್ 2018, 13:31 IST
Last Updated 22 ಮಾರ್ಚ್ 2018, 13:31 IST
ಶಹಾಪುರದ ಚರಬಸವೇಶ್ವರ ದೇವಸ್ಥಾನ
ಶಹಾಪುರದ ಚರಬಸವೇಶ್ವರ ದೇವಸ್ಥಾನ   

ಶಹಾಪುರ: ವ್ಯಾಪಾರ ವೃತ್ತಿಯಾಗಿದ್ದರೂ ಇಂತಿಷ್ಟೆ ಲಾಭಾಂಶ ಪಡೆದು ಅದರ ಮೂಲಕ ದಾಸೋಹ ವನ್ನು ನಡೆಸುತ್ತಾ ಸಗರನಾಡಿನಲ್ಲಿ ಅರಿವಿನ ಬೆಳಕನ್ನು ವಿಸ್ತರಿಸಿದ ಇಲ್ಲಿನ ಚರಬಸವೇಶ್ವರರು ದಾಸೋಹ ಕಾಯಕಯೋಗಿ ಎನಿಸಿಕೊಂಡಿದ್ದಾರೆ.

ಚರಬಸವೇಶ್ವರರು ಜನಸಾಮಾನ್ಯ ರಂತೆ ಬೆಳೆದು ದೇವರ ಸ್ವರೂಪಿಯಾಗಿ ದ್ದಾರೆ. ಬೆಟ್ಟದ ಸಾಲುಗಳ ಇಳಿಜಾರು ಪ್ರದೇಶದ ಮಧ್ಯದಲ್ಲಿ ವಿಶಾಲ ಮೈದಾನದಲ್ಲಿ ದೇವಸ್ಥಾನ ಇದೆ. ಅದರ ಮುಂದುಗಡೆ ಕೆರೆಯಂಗಳವಿದೆ. ಅಂತರ್ಜಲಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಕೆರೆಯನ್ನು ಅಭಿವೃದ್ಧಿಪಡಿಸಿದೆ. ಕೆರೆಯ ಅಕ್ಕಪಕ್ಕ ದಲ್ಲಿ ಸಸಿ ನೆಟ್ಟು ಅರಣ್ಯೀಕರಣಗೊಳಿ ಸುವ ಉದ್ದೇಶ ನಗರಸಭೆ ಹೊಂದಿದೆ.

ಕಾಯಕಯೋಗಿ ಚರಬಸವೇಶ್ವರ ಅವರು (ಬಸವಯ್ಯ ಮುತ್ಯಾ) ಸದಾ ತಿರುಗಾಟದಲ್ಲಿ ಕಾಯಕ ನಡೆಸುತ್ತಿದ್ದ ಕಾರಣಕ್ಕಾಗಿ ‘ಚರಬಸವ ತಾತ’ ಎಂದು ಭಕ್ತರು ಕರೆಯಲು ಆರಂಭಿಸಿದರು. ಅಂದು ನಡೆಸಿಕೊಂಡು ಬಂದ ದಾಸೋಹವನ್ನು ಅವರ ವಂಶಜರು ಇಂದಿಗೂ ಮುನ್ನೆಡೆಸಿಕೊಂಡು ಬರುತ್ತಿದ್ದಾರೆ.

ADVERTISEMENT

ಐತಿಹಾಸಿಕ ಹಿನ್ನಲೆ: ಭೀಮೆ ಹಾಗೂ ಕೃಷ್ಣೆಯ ನಡುವೆ ಬರುವ ಪ್ರದೇಶವನ್ನು‘ಸಗರನಾಡು’ ಎಂದು ಕರೆಯಲಾಗುತ್ತದೆ. ತಾಲ್ಲೂಕಿನ ಅನವಾರ ಗ್ರಾಮದಲ್ಲಿ ಶೀಲವಂತಯ್ಯ ಹಾಗೂ ಅವ್ವಮ್ಮ ಅವರಿಗೆ ಚರಬಸವೇಶ್ವರ (ಬಸವಯ್ಯ ತಾತ) 1844ರಲ್ಲಿ ಜನಿಸಿದರು. ಅಂದಿನ ದಿನಗಳಲ್ಲಿ ಮಠ, ಮಂದಿರ ಅಕ್ಷರ ಜ್ಞಾನದ ಕೇಂದ್ರಗಳಾಗಿದ್ದವು. ತಾತನವರು ವ್ಯವಹಾರಕ್ಕೆ ಬೇಕಾದಷ್ಟು ಗಣಿತ, ಲೆಕ್ಕ, ಸಂಸ್ಕೃತ, ಕನ್ನಡ ಭಾಷಾ ಜ್ಞಾನವನ್ನು ಸಂಪಾದಿಸಿಕೊಂಡರು.

ಕಾಲ ಸರಿದಂತೆ ತಾಲ್ಲೂಕಿನ ಸಗರ ಗ್ರಾಮದ ಗಣಾಚಾರಿಮಠದ ಸೂಗಮ್ಮ ಬಾಳ ಸಂಗಾತಿಯಾದರು. ತಾತನವರು ಜವಳಿ (ಬಟ್ಟೆ) ವ್ಯಾಪಾರ ಮಾಡುತ್ತಾ ಗ್ರಾಮೀಣ ಪ್ರದೇಶಗಳಿಗೆ ತೆರಳಿದಾಗ ಜನರಿಗೆ ಅಕ್ಷರದ ಮಹತ್ವ, ನೈತಿಕ ಮೌಲ್ಯಗಳ ಜೀವನ, ಕಾಯಕದಿಂದಲೇ ಜೀವನ ನಡೆಸಬೇಕು ಎಂಬ ವಾಸ್ತವ ಬದುಕಿನ ಚಿತ್ರಣವನ್ನು ಬಿಚ್ಚಿಡುತ್ತಿದ್ದರು. ಆಗ ಅವರ ಮೌಲ್ಯಯುತ ತತ್ವ ಸಿದ್ಧಾಂತಗಳಿಗೆ ಜನ ಮಾರುಹೋದರು. ನಂತರ ಅವರು ಹುಟ್ಟು ಹಾಕಿದ ದಾಸೋಹಕ್ಕೆ ಜನರು ಹೃದಯತುಂಬಿ ನೆರವಿನ ಅಭಯ ನೀಡಿದರು.

ನುಡಿದಂತೆ ನಡೆದ ತಾತನವರು 1922ರಲ್ಲಿ ದೈವಾಧೀನರಾದರು. ಅಂದು ಅವರ ಸಮಾಧಿಯಾದ ಸ್ಥಾನದಲ್ಲಿ ಗದ್ದುಗೆಯಾಗಿ ನಂಬಿದ ಭಕ್ತರಿಗೆ ಕೈ ಹಿಡಿಯುವ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಮಾರ್ಪಟ್ಟಿದೆ. ದೇಗುಲದ ಆವರಣದ ಮುಂದೆ ಮದುವೆ, ಸಭೆ, ಸಮಾರಂಭ ಮುಂತಾದ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ. ಇದೇ ಇಂದಿನ ಚರಬಸವೇಶ್ವರ ಗದ್ದುಗೆ.
**
ಚರಬಸವೇಶ್ವರ ರಥೋತ್ಸವ ಇಂದು
ಚರಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ 6 ಗಂಟೆಗೆ ದೇವಸ್ಥಾನದ ಕೆರೆಯ ಅಂಗಳದಲ್ಲಿ 96ನೇ ರಥೋತ್ಸವ ಜರುಗಲಿದೆ.

ಮರುದಿನ (ಮಾ.23) ಜಾನುವಾರು ಜಾತ್ರೆ ನಡೆಯಲಿದೆ. ರೈತರ ಹೊಸ ವರ್ಷದ ಪ್ರಥಮ ಜಾತ್ರೆ ಇದು ಎನ್ನುವುದು ಪ್ರತೀತಿ. ಅಲ್ಲದೆ ಗ್ರಾಮೀಣ ಭಾಗದ ಕ್ರೀಡೆಗಳಾದ ಕುಸ್ತಿ, ಭಾರ ಎತ್ತುವ ಸ್ಫರ್ಧೆ ಜರುಗಲಿವೆ. ಮಾರ್ಚ್ 26ರಂದು ಸಂಜೆ 6 ಗಂಟೆಗೆ ಕಳಸಾವರೋಹಣ ನಂತರ ಕಡಬಿನ ಕಾಳಗ ನಡೆಯಲಿದೆ.

ಬಾಡಿಯಾಲ ಮೂಲಮಠದ ಚೆನ್ನವೀರ ಶಿವಾಚಾರ್ಯರು ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸುವರು. ಅಬ್ಬೆತುಮಕೂರು ಸಿದ್ಧ ಸಂಸ್ಥಾನ ಮಠದ ಗಂಗಾಧರ ಶಿವಾಚಾರ್ಯರು, ಆಂದೋಲಾ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ಚರಬಸವೇಶ್ವರ ಸಂಸ್ಥಾನಮಠದ ಪೀಠಾಧಿಪತಿ ವೇದಮೂರ್ತಿ ಬಸವಯ್ಯ ಶರಣರು ತಿಳಿಸಿದ್ದಾರೆ.
**
ರಥೋತ್ಸವಕ್ಕೆ ಬರುವ ಭಕ್ತರ ಅನುಕೂಲಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಜಾನುವಾರು ಜಾತ್ರೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
– ಶರಣು ಗದ್ದುಗೆ, ಸಂಸ್ಥಾನದ ವಂಶಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.