ADVERTISEMENT

ಸಭೆ ರದ್ದತಿಗೆ ಆಯೋಗಕ್ಕೆ ದೂರು

ನಿಲ್ಲದ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಯ ಕದನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 9:21 IST
Last Updated 7 ಏಪ್ರಿಲ್ 2018, 9:21 IST

ಕಲಬುರ್ಗಿ: ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಆಡಳಿತ ಮಂಡಳಿಯ ಕದನ ಇನ್ನೂ ಮುಂದುವರೆದಿದೆ.ಮಾರ್ಚ್‌ 29ರಂದು ಅವಿಶ್ವಾಸ ಗೊತ್ತುವಳಿ ಮೂಲಕ ಅಧ್ಯಕ್ಷ ಸಿದ್ದರಾಮರಡ್ಡಿ ವಿ.ಪಾಟೀಲ ಅವರನ್ನು ಪದಚ್ಯುತಗೊಳಿಸಲಾಗಿತ್ತು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಏಪ್ರಿಲ್‌ 9ರಂದು ಆಡಳಿತ ಮಂಡಳಿಯ ಸಭೆ ಕರೆದಿದ್ದಾರೆ.

‘ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಏಪ್ರಿಲ್‌ 9ರಂದು ಬ್ಯಾಂಕ್‌ನ ಆಡಳಿತ ಮಂಡಳಿಯ ಸಭೆ ಕರೆದಿದ್ದಾರೆ. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಬ್ಯಾಂಕಿನ ಪದಚ್ಯುತ ಅಧ್ಯಕ್ಷ ಸಿದ್ರಾಮರೆಡ್ಡಿ ವಿ.ಪಾಟೀಲ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.‘ಈ ಸಭೆ ರದ್ದು ಪಡಿಸಬೇಕು ಮತ್ತು ನೀತಿ ಸಂಹಿತೆ ಉಲ್ಲಂಘಿಸಿರುವ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘9ರಂದು ಬೆಳಿಗ್ಗೆ 11.30ಕ್ಕೆ ಬ್ಯಾಂಕ್‌ ಮುಖ್ಯ ಕಚೇರಿ ಸಭಾಂಗಣದಲ್ಲಿ ಕರೆದಿರುವ ಸಭೆಯಲ್ಲಿ ಬ್ಯಾಂಕಿನ ಎಲ್ಲ ಆಡಳಿತ ಮಂಡಳಿ ಸದಸ್ಯರು ಹಾಗೂ ನಿರ್ದೇಶಕರು ಉಪಸ್ಥಿತರಿರಬೇಕು ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಅಲ್ಪಾವಧಿ ಸಾಲ, ಚಿನ್ನಾಭರಣ ಸಾಲ, ಗೋದಾಮು ಸಾಲ, ನಿಶ್ಚಿತ ಠೇವಣಿ ಮೇಲೆ ಸಾಲ, ದ್ವಿಚಕ್ರ–ನಾಲ್ಕು ಚಕ್ರ ವಾಹನಗಳ ಸಾಲ, ಕುರಿ ಸಾಕಣೆಗಾಗಿ ಸಾಲ, ಮಧ್ಯಮ ಅವಧಿ ಕೃಷಿ ಸಾಲ ನೀಡುವಿಕೆ ಸಭೆಯ ವಿಷಯ ಪಟ್ಟಿಯಲ್ಲಿವೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ರೇಣುಕಾ ಚಿದಂಬರಂ ಅವರು ಯಾವುದೇ ನಿಗಮ–ಮಂಡಳಿಗಳಲ್ಲಿ ಸಭೆ ನಡೆಸದಂತೆ ಈಗಾಗಲೇ ಸ್ಪಷ್ಟವಾದ ನಿರ್ದೇಶನ ನೀಡಿದ್ದಾರೆ.ಈ ನೀತಿ ಡಿಸಿಸಿ ಬ್ಯಾಂಕ್‌ಗೂ ಅನ್ವಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ಮಾದರಿ ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ಬ್ಯಾಂಕಿನ ಸಿಇಒ ವಿರುದ್ಧ ಪ್ರಜಾಪ್ರಾತಿನಿಧ್ಯ ಕಾಯ್ದೆ 1950ರಡಿ ಪ್ರಕರಣ ದಾಖಲಿಸಬೇಕು’ ಎಂದು ಸಿದ್ರಾಮರೆಡ್ಡಿ ವಿ.ಪಾಟೀಲ ಅವರು ಜಿಲ್ಲಾ ಚುನಾವಣಾಧಿಕಾರಿ, ಸಹಕಾರ ಸಂಘಗಳ ನಿಬಂಧಕರಿಗೂ ದೂರು ನೀಡಿದ್ದಾರೆ.

**

ಅವಿಶ್ವಾಸ ಗುತ್ತುವಳಿ ಸಭೆ ನಡೆಸಿದ್ದು ಹಾಗೂ ಈಗ ಆಡಳಿತ ಮಂಡಳಿ ಸಭೆ ಕರೆದಿರುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಸಿದ್ರಾಮರೆಡ್ಡಿ ವಿ.ಪಾಟೀಲ,‌ಡಿಸಿಸಿ ಬ್ಯಾಂಕ್‌ ನಿರ್ದೇಶಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.