ADVERTISEMENT

ಸಮಾಜಮುಖಿ ಕಾರ್ಯದ ಪ್ರಾಧ್ಯಾಪಕಿ

ಅವಿನಾಶ ಬೋರಂಚಿ
Published 8 ಮಾರ್ಚ್ 2018, 10:00 IST
Last Updated 8 ಮಾರ್ಚ್ 2018, 10:00 IST
ಸಮಾಜಮುಖಿ ಕಾರ್ಯದ ಪ್ರಾಧ್ಯಾಪಕಿ
ಸಮಾಜಮುಖಿ ಕಾರ್ಯದ ಪ್ರಾಧ್ಯಾಪಕಿ   

ಸೇಡಂ: ಇಲ್ಲಿಯ ನೃಪತುಂಗ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ ಚಂದ್ರಕಲಾ ಬಿದರಿ ಅವರು ತಮ್ಮ ಬದುಕಿನ ಉದ್ದಕ್ಕೂ ಸಂಭವಿಸಿದ ಘಟನೆಗಳಿಗೆ ವಿಚಲಿತರಾಗದೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದ್ದಾರೆ.

20 ವರ್ಷಗಳಿಂದ ಸಾಹಿತ್ಯ, ಮಹಿಳಾ ಕ್ಷೇತ್ರ, ಉಪನ್ಯಾಸ, ರಂಗಕ್ಷೇತ್ರ, ರಾಷ್ಟ್ರೀಯ ಸೇವಾ ಯೋಜನೆ (10 ವರ್ಷ) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅವರು ಕಥೆ, ಕವನ ಸೇರಿದಂತೆ 30ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ.

ಪತ್ರಿಕೆಗಳಿಗೂ ಲೇಖನ ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಇವರು ಬರೆದ ಕವನಗಳು ಗುಲಬರ್ಗಾ ವಿಶ್ವವಿದ್ಯಾಲಯ ಬಿ.ಎ ಎರಡನೇ ವರ್ಷದ ವಿದ್ಯಾರ್ಥಿಗಳ ಪಠ್ಯಕ್ರಮಕ್ಕೆ ಸೇರಿಸಿದೆ.

ADVERTISEMENT

ಇವರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. 10 ವರ್ಷಗಳಿಂದ ರಾಷ್ಟ್ರೀಯ ಸೇವಾ ಯೋಜನೆಯ ಮುಖಂಡತ್ವ ವಹಿಸಿ ಬೆಂಗಳೂರು, ಕೇರಳ, ತಮಿಳುನಾಡು, ದೆಹಲಿ ಸೇರಿದಂತೆ ವಿವಿಧೆಡೆಗಳಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಕರ್ನಾಟಕದಿಂದ ನವದೆಹಲಿಗೆ ತೆರಳಿದ ಮೊದಲ ಮಹಿಳಾ ಸೇವಾ ಯೋಜನೆಯ ಅಧಿಕಾರಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವಿಶ್ವವಿದ್ಯಾಲಯ ಮಟ್ಟದ ಅತ್ಯುತ್ತಮ ಅಧಿಕಾರಿ, ರಾಷ್ಟ್ರಮಟ್ಟದ ಯುವ ಮುಖಂಡತ್ವ ಪ್ರಶಸ್ತಿಯನ್ನು ಪಡೆದಿದ್ದಾರೆ.

10 ವರ್ಷಗಳಿಂದ ಉಚಿತ ಯೋಗ ತರಬೇತಿ ನೀಡುತ್ತಿದ್ದಾರೆ.

ಇಲ್ಲಿಯವರೆಗೆ 3 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಯೋಗ ತರಬೇತಿ ನೀಡಿದ್ದಾರೆ.

ರಾಣಿ ಅಹಲ್ಯಾಬಾಯಿ ಹೋಳ್ಕರ್ ಸ್ವಸಹಾಯ ಸಂಘ ಕಟ್ಟಿಕೊಂಡು ಪ್ರತಿವರ್ಷ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುತ್ತಾ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ‘ಯಶಸ್’ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ರಂಗಚೇತನದ ಮೂಲಕ ರಂಗ ಕ್ಷೇತ್ರದಲ್ಲಿ ತೊಡಗಿಸಿಕೊಂಡು 15 ಕ್ಕೂ ಅಧಿಕ ನಾಟಕಗಳನ್ನು ಪ್ರದರ್ಶಿಸಿದ್ದಾರೆ.

ಸೇಡಂನಲ್ಲಿ ನಡೆದ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಪುತ್ರ ಚೇತನ್‌ ಬಿದರಿ ಪಿಎಸ್‌ಐ ವೃತ್ತಿಗೆ ನೇಮಕಗೊಂಡಿದ್ದಾರೆ. ಇನ್ನೊಬ್ಬ ಪುತ್ರ ಸಚಿನ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದಾರೆ.

ಮದುವೆಯಾಗಿ ಒಂದು ವರ್ಷದಲ್ಲೇ ಇವರ ಪತಿ ಶಂಕರ ಬಿದರಿ ಅವರಿಗೆ ಪಾರ್ಶ್ವವಾಯು ರೋಗಕ್ಕೆ ತುತ್ತಾದರು. ಮನೆಯಲ್ಲಿ ಪತಿಯ ಸೇವೆ ಮಾಡುತ್ತಲೇ, ಸಮಾಜಮುಖಿ ಸೇವೆಯಲ್ಲಿರುವ ಇವರ ಬದುಕು ಇನ್ನೊಬ್ಬರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಅವರನ್ನು ಬಲ್ಲವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.