ADVERTISEMENT

ಹೊಟ್ಟೆಕಿಚ್ಚಿನ ರಾಜಕೀಯ ಬಿಡಲಿ:ಖರ್ಗೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 8:56 IST
Last Updated 3 ಏಪ್ರಿಲ್ 2014, 8:56 IST

ಶಹಾಬಾದ: ‘ಬಿಜೆಪಿ  ರಾಜ್ಯದಲ್ಲಿ ಅಧಿಕಾರಿದಲ್ಲಿದ್ದಾಗ ಜನರ ಸಮಸ್ಯೆಗಳಿಗೆ ಸ್ಪಂದಿಸದೆ, ಪರಸ್ಪರ ಕಚ್ಚಾಡಿ, ಬೀದಿರಂಪ ಮಾಡಿ, ಭ್ರಷ್ಟಾಚಾರದಲ್ಲಿ ಮುಳುಗಿ, ಜೈಲಿಗೆ ಹೋಗಿದ್ದು ಈಗ ಇತಿಹಾಸ. ಅಂಥವರಿಂದ ನಾವು ಪಾಠ ಕಲಿಯಬೇಕಿಲ್ಲ. ಬಿಜೆಪಿ ಮುಖಂಡರು ಹೊಟ್ಟೆಕಿಚ್ಚಿನ ರಾಜಕೀಯ ಬಿಟ್ಟು ಉತ್ತಮ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಲಿ’ ಎಂದು ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

ನಗರದ ಹಳೆ ಪೊಲೀಸ್ ಠಾಣೆ ಎದುರು ಮಂಗಳವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು  ಮಾತನಾಡುತ್ತಿದ್ದರು.
ಈಚೆಗೆ ಹೊನಗುಂಟಿ ಗ್ರಾಮದಲ್ಲಿ ಕೆ.ಎಸ್‌.ಈಶ್ವರಪ್ಪ ಅವರ ‘ಕಾಂಗ್ರೆಸ್‌ ನಾಯಕರು ಮೋದಿ ಅಲೆಗೆ ಕೊಚ್ಚಿ ಹೋಗಲಿದ್ದಾರೆ’ ಎಂಬ ಮಾತಿಗೆ ಪ್ರತಿಯಾಗಿ, ಯಾರ ಹೆಸರನ್ನೂ ಪ್ರಸ್ತಾಪಿಸದ ಖರ್ಗೆ ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಉತ್ತಮ ಕೆಲಸ ಮಾಡಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ  ಸೇರಿದಂತೆ ಹಲವು ಯೋಜನೆ ಜಾರಿ ಮಾಡಿದ್ದಾರೆ.
ರೈಲ್ವೆ ಖಾತೆ ಸಚಿವನಾಗಿ ನಾನು ಅಲ್ಪ ಅವಧಿಯಲ್ಲೆ ಉತ್ತಮ ಕೆಲಸ ಮಾಡಲು ಪ್ರಯತ್ನಿಸಿದ್ದೇನೆ’ ಎಂದರು.

ಮಾಜಿ ಸಂಸದ ಎಕ್ಬಾಲ್ ಅಹ್ಮದ ಸರಡಗಿ, ಸಚಿವ ಖಮರುಲ್‌ ಇಸ್ಲಾಂ, ಶಾಸಕ ಜಿ.ರಾಮಕೃಷ್ಣ, ಸಿ.ಎ. ಪಾಟೀಲ, ಚಂದ್ರಿಕಾ ಪರಮೇಶ್ವರ ಮಾತನಾಡಿದರು. ಬ್ಲಾಕ್ ಅಧ್ಯಕ್ಷ ಡಾ.ಎಂ.ಎ.ರಶೀದ, ಡಿಸಿಸಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ವಿಜಯಕುಮಾರ ಮುಟ್ಟತ್ತಿ, ಮೃತ್ಯುಂಜಯ ಹಿರೇಮಠ, ಸುಭಾಷ ಪವಾರ, ಮಾಪಣ್ಣ ಗಂಜಗೇರಿ, ಶಿವರಾಜ ಪಾಟೀಲ, ಶಿವಾನಂದ ಪಾಟೀಲ, ಅಜೀತಕುಮಾರ ಪೊಲೀಸಪಾಟೀಲ, ಸಂತೋಷಕುಮಾರ ಇಂಗಿನ­ಶೆಟ್ಟಿ, ಮೆಹಬೂಬಖಾನ್ ಮಸಾಲೆವಾಲ, ಸುರೇಶ ನಾಯಕ, ನಗರ­ಸಭೆ ಸದಸ್ಯ ಕುಮಾರ ಚವ್ಹಾಣ, ಸೂರ್ಯಕಾಂತ ಕೋಬಾಳ, ಗೀತಾ ಸಾಹೇಬಗೌಡ ಬೊಗುಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.