ADVERTISEMENT

ಮನೆ ಹಂಚಿಕೆಯಲ್ಲಿ ₹ 10 ಕೋಟಿ ಅವ್ಯವಹಾರ: ಶಿವಕುಮಾರ ನಾಟೀಕಾರ ಆರೋಪ

ಸರ್ಕಾರಿ ನೌಕರನೇ ಕಿಂಗ್‌ಪಿನ್‌, ಭ್ರಷ್ಟಾಚಾರದ ಬಗ್ಗೆ ರಾಜ್ಯಪಾಲರಿಗೆ ದೂರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 15:57 IST
Last Updated 22 ಜೂನ್ 2025, 15:57 IST
 ಶಿವಕುಮಾರ್ ನಾಟೀಕಾರ.
 ಶಿವಕುಮಾರ್ ನಾಟೀಕಾರ.   

ಅಫಜಲಪುರ: ‘ವಸತಿ ಯೋಜನೆಯ ಮನೆ ಹಂಚಿಕೆಯಲ್ಲಿ ₹ 10 ಕೋಟಿ ಅವ್ಯವಹಾರವಾಗಿದ್ದು, ಇದಕ್ಕೆಲ್ಲ ಅಫಜಲಪುರ ತಾಲ್ಲೂಕಿನ ಬಳುಂಡಗಿ ಗ್ರಾಮ ಸರ್ಕಾರಿ ನೌಕರನೊಬ್ಬ ಕಿಂಗ್‌ಪಿನ್‌ ಆಗಿದ್ದಾನೆ. ಈತ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸಚಿವ ಜಮೀರ್‌ ಅಹ್ಮದ್‌ರ ಆಪ್ತ ಎಂದು ಹೇಳಿಕೊಂಡು, ಹಣದ ವ್ಯವಹಾರ ಮಾಡುತ್ತಿದ್ದಾರೆ. ಆತನನ್ನು ಬಂಧಿಸಿ, ತನಿಖೆ ನಡೆಸಿದರೆ ಸತ್ಯ ಹೊರಬೀಳಲಿದೆ’ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿಶಿವಕುಮಾರ ನಾಟೀಕಾರ ಆರೋಪಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿಹೋಗಿದೆ. ತಕ್ಷಣ ರಾಜ್ಯಪಾಲರು, ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಅಫಜಲಪುರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ 3 ಸಾವಿರ ಮನೆಗಳು ಹೆಚ್ಚುವರಿಯಾಗಿ ಮಂಜೂರಾಗಿವೆ. ಆದರೆ ಶಾಸಕರ ಕೆಲ ಬೆಂಬಲಿಗರು ಪ್ರತಿ ಮನೆಗೆ ₹25ರಿಂದ, ₹30 ಸಾವಿರವರೆಗೆ ಹಣ ಪಡೆದು, ಹಂಚಿಕೆ ಮಾಡುತ್ತಿದ್ದಾರೆ. ಅಂದಾಜು ₹ 10 ಕೋಟಿಗೂ ಹೆಚ್ಚು ಹಣವನ್ನು ಜನರಿಂದ ವಸೂಲಿ ಮಾಡಿದ್ದಾರೆ. ಅದರಲ್ಲಿ ಈ ನೌಕರನೇ ಕಿಂಗ್‌ಪಿನ್‌ ಆಗಿದ್ದು, ತಾಲ್ಲೂಕಿನ ಬಡವರಿಂದ ಕೋಟ್ಯಂತರ ಹಣ ಸುಲಿಗೆ ಮಾಡುತ್ತಿದ್ದಾನೆ ಎಂದು 6 ತಿಂಗಳ ಹಿಂದೆಯೇ ಹೇಳಿದ್ದೆ. ಆದರೆ ನಾನು ಅಸೂಯೆಯಿಂದ ಹೀಗೆ ಹೇಳುತ್ತಿದ್ದೇನೆ ಎಂದರು. ಈಗ ಅವರ ಪಕ್ಷದ ಶಾಸಕ ಬಿ.ಆರ್. ಪಾಟೀಲ್ ಹಗರಣ ಬಯಲಿಗೆ ಎಳೆದಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಲೋಕೋಪಯೋಗಿ ಮತ್ತು ಕೆಆರ್ ಐಡಿಎಲ್ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿದೆ. ಗುತ್ತಿಗೆದಾರರು ಶಾಸಕರ ಸುಪುತ್ರ ಅರುಣಕುಮಾರ ಪಾಟೀಲ್ ಅವರಿಗೆ ಕಮಿಷನ್ ಕೊಡದಿದ್ದರೆ ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗಿ ಅಡೆತಡೆ ಮಾಡುವುದು ಅಥವಾ ಅವರ ಬೆಂಬಲಿಗರನ್ನು ಬಿಟ್ಟು ಕಾಮಗಾರಿ ನಿಲ್ಲಿಸುವುದು, ಮತ್ತೆ ಕಮಿಷನ್ ಬಂದ ಬಳಿಕವೇ ಕಾಮಗಾರಿ ಪುನರಾರಂಭ ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಬಗ್ಗೆ ಸಮಗ್ರವಾಗಿ ದಾಖಲೆ ಸಮೇತ ರಾಜ್ಯಪಾಲರಿಗೆ ದೂರು ಸಲ್ಲಿಸಲು ತಯಾರಿ ನಡೆಸಲಾಗುತ್ತಿದೆ. ಅಫಜಲಪುರ ತಾಲೂಕಿನಲ್ಲಿ ಯಾರಿಗೆ ಮನೆಯಿಲ್ಲ, ಅಂತಹವರಿಗೆ ಮನೆ ಹಂಚ್ಚುವ ಕೆಲಸ ಆಗಬೇಕು. ಇಲ್ಲದಿದ್ದರೆ ಹಳ್ಳಿಹಳ್ಳಿಗೆ ತೆರಳಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾ.ಪಂಗಳಲ್ಲಿ ಮನೆ ಮಂಜೂರಿಗೆ ಹಣ ಪಡೆದಿರುವ ಬಗ್ಗೆ ನಮ್ಮ ಹತ್ತಿರ ದಾಖಲೆಗಳಿವೆ. ಪ್ರಸಂಗ ಬಂದರೆ ಬಹಿರಂಗಪಡಿಸುತ್ತೇವೆ. ಪಟ್ಟಣದಲ್ಲಿ ನಡೆದಿರುವ ರಸ್ತೆ ಅಗಲೀಕರಣ ಕಾಮಗಾರಿ ಕಳಪೆಯಾಗಿದೆ. ಸಾರ್ವಜನಿಕರ ದುಡ್ಡು ಹಾಳಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ನಡೆದಿರುವ ಎಲ್ಲ ಇಲಾಖೆಗಳ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರ ಎಚ್ಚರಗೊಳ್ಳುವಂತೆ ಮಾಡುತ್ತೇವೆ. ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ರಾಜಕುಮಾರ ಉಕ್ಕಲಿ, ಶರಣಗೌಡ ಪಾಟೀಲ, ಮರೇಪ್ಪ ಜಮಾದಾರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.