ADVERTISEMENT

ಶೇ 100ರಷ್ಟು ಲಸಿಕೆ; ಭಂಟನಳ್ಳಿ ಯಶಸ್ಸು

ಜಗನ್ನಾಥ ಡಿ.ಶೇರಿಕಾರ
Published 18 ಆಗಸ್ಟ್ 2021, 5:09 IST
Last Updated 18 ಆಗಸ್ಟ್ 2021, 5:09 IST
ಚಿಂಚೋಳಿ ತಾಲ್ಲೂಕಿನ ಭಂಟನಳ್ಳಿ ಗ್ರಾಮ ಮತ್ತು ಪಸ್ತಪುರ ತಾಂಡಾದಲ್ಲಿಶೇ 100ರಷ್ಟು ಲಸಿಕಾಕರಣ ಸಾಧಿಸಿದ ವೈದ್ಯರನ್ನು ಸನ್ಮಾನಿಸಲಾಯಿತು
ಚಿಂಚೋಳಿ ತಾಲ್ಲೂಕಿನ ಭಂಟನಳ್ಳಿ ಗ್ರಾಮ ಮತ್ತು ಪಸ್ತಪುರ ತಾಂಡಾದಲ್ಲಿಶೇ 100ರಷ್ಟು ಲಸಿಕಾಕರಣ ಸಾಧಿಸಿದ ವೈದ್ಯರನ್ನು ಸನ್ಮಾನಿಸಲಾಯಿತು   

ಚಿಂಚೋಳಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್‌–19 ಲಸಿಕೆ ಹಾಕುವಲ್ಲಿ ತಾಲ್ಲೂಕಿನ ಭಂಟನಳ್ಳಿ ಗ್ರಾಮ ಶೇ 100ರಷ್ಟು ಯಶಸ್ಸು ಸಾಧಿಸಿದೆ.

ಸುಲೇಪೇಟ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಈ ಗ್ರಾಮದ 1,238 ಜನಸಂಖ್ಯೆ ಪೈಕಿ, ಅರ್ಹ 610 ಜನ ಲಸಿಕೆ ಹಾಕಿಸಿಕೊಂಡಿದ್ದಾರೆ. ಡಾ. ವಿಜಯಕುಮಾರ ಜಾಪಟ್ಟಿ ತಂಡ ಲಸಿಕೆಗೆ ನಿಯೋಜನೆಗೊಂಡಿತ್ತು.

ಇನ್ನೊಂದೆಡೆ ಮೋಘಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಪಸ್ತಪುರ ತಾಂಡಾದ 540 ಜನಸಂಖ್ಯೆ ಪೈಕಿ ಅರ್ಹ ಒಟ್ಟು 333 ಜನ ಲಸಿಕೆ ಪಡೆದಿದ್ದಾರೆ. ಡಾ. ಸಯ್ಯದ್ ಲತೀಫ್ ನೇತೃತ್ವ ತಂಡ ಲಸಿಕೆ ನೀಡಿದೆ.

ADVERTISEMENT

ಭಂಟನಳ್ಳಿ ಗ್ರಾಮ ಹಾಗೂ ಪಸ್ತಪುರ ಲಸಿಕೆಯುಕ್ತ ತಾಂಡ ಎಂದು ಆರೋಗ್ಯ ಇಲಾಖೆ ಘೋಷಿಸಿದೆ. ಕೋವಿಡ್ ಸೋಂಕಿತನನ್ನು ಕರೆದೊಯ್ಯಲು ಹೋಗಿದ್ದ ಆರೋಗ್ಯ ಇಲಾಖೆ ಮತ್ತು ಪೊಲೀಸರ ಜತೆ ಜಗಳವಾಡಿದ್ದ ತಾಂಡಾ ವಾಸಿಗಳು, ಈಗ ಲಸಿಕೆ ಪಡೆಯಲು ಮುಂದೆ ಬಂದಿದ್ದಾರೆ.

’ಕೆಲವು ಕಡೆ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದರು. ತಾಂಡಾ ಜನರು ಕೋವಿಡ್ ಪರೀಕ್ಷೆಗೆ ಅಡ್ಡಿಪಡಿಸಿದ್ದ ನಿದರ್ಶನಗಳು ಸಹ ಇದ್ದವು. ಈಗಲೂ ಪರೀಕ್ಷೆಗೆ ಹೆದರುವವರು ಇದ್ದಾರೆ. ಆದರೆ ಭಂಟನಳ್ಳಿ ಮತ್ತು ಪಸ್ತಪುರ ತಾಂಡಾದ ಜನರು ಇದಕ್ಕೆ ಅಪವಾದವಾಗಿದ್ದಾರೆ‘ ಎಂದು ಟಿಎಚ್‌ಒ ಮಹಮ್ಮದ್ ಗಫಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಈವರೆಗೆ 88,790 ಜನರು ಲಸಿಕೆ ಪಡೆದಿದ್ದು, ಈ ಪೈಕಿ 68,898 ಜನರು ಮೊದಲ ಡೋಸ್ ಹಾಗೂ 19,892 ಜನರು ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ ಎಂದು ಹೇಳಿದರು.

ಜನರಲ್ಲಿ ಜಾಗೃತಿ ಮೂಡಿದ್ದರಿಂದ ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರುತ್ತಿದ್ದಾರೆ. ಮಂದಿರ ಮತ್ತು ಮಸೀದಿಗಳಲ್ಲೂ ಲಸಿಕಾಕರಣದ ಅಭಿಯಾನ ನಡೆಸಿ ಕೋವಿಡ್ ತಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.