ADVERTISEMENT

ಚಿಂಚೋಳಿ | ಕೊಳವೆ ಬಾವಿ ಕೊರೆಸಲು ₹19 ಕೋಟಿ ಅನುದಾನ

ಎಸ್‌ಸಿಪಿ– -ಟಿಎಸ್‌ಪಿ ಯೋಜನೆಯಡಿ ₹19 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 6:24 IST
Last Updated 19 ನವೆಂಬರ್ 2022, 6:24 IST
ಚಿಂಚೋಳಿ ತಾಲ್ಲೂಕಿನ ಐನಾಪುರದಲ್ಲಿ ಜಲ ಸಂಪನ್ಮೂಲ ಇಲಾಖೆ ವತಿಯಿಂದ ಕೊಳವೆ ಬಾವಿ ಕೊರೆಯಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ
ಚಿಂಚೋಳಿ ತಾಲ್ಲೂಕಿನ ಐನಾಪುರದಲ್ಲಿ ಜಲ ಸಂಪನ್ಮೂಲ ಇಲಾಖೆ ವತಿಯಿಂದ ಕೊಳವೆ ಬಾವಿ ಕೊರೆಯಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ   

ಚಿಂಚೋಳಿ: ವಿಧಾನಸಭಾ ಮತಕ್ಷೇತ್ರದ ಅಭಿವೃದ್ಧಿಗಾಗಿ 2022-23ನೇ ಸಾಲಿನಲ್ಲಿ ಎಸ್‌ಸಿಪಿ-ಟಿಎಸ್‌ಪಿ ಯೋಜನೆ ಅಡಿಯಲ್ಲಿ ₹19 ಕೋಟಿ ಅನುದಾನ ಮಂಜೂರಾಗಿದೆ.

₹19 ಕೋಟಿ ಅನುದಾನದಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಜಲ ಸಂಪನ್ಮೂಲ ಇಲಾಖೆಯ ಕೆಳದಂಡೆ ಮುಲ್ಲಾಮಾರಿ ಯೋಜನೆ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ಈ ಅನುದಾನದಲ್ಲಿ ರಸ್ತೆ, ಸೇತುವೆ ಹಾಗೂ ರೈತರ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಿ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಸುಂಠಾಣ ಕೋಡ್ಲಿ ರಸ್ತೆ ನಿರ್ಮಾಣಕ್ಕೆ ₹5 ಕೋಟಿ, ಕೋಡ್ಲಿ ಬಳಿ ಸೇತುವೆ ನಿರ್ಮಾಣಕ್ಕೆ ₹2.3 ಕೋಟಿ ಹಾಗೂ ಉಳಿದ ₹10.7 ಕೋಟಿ ಅನುದಾನದಲ್ಲಿ ರೈತರ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಿ ನೀರಾವರಿ ಸೌಲಭ್ಯ ಕಲ್ಪಿಸಲು ವಿನಿಯೋಗಿಸಲಾಗುತ್ತಿದೆ. ಇದರಿಂದ 153 ರೈತರ 500 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.

ADVERTISEMENT

ಎಸ್‌ಸಿಪಿ-ಟಿಎಸ್‌ಪಿ ಯೋಜನೆ ಅಡಿಯಲ್ಲಿ ರೈತರ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲು ಕ್ರಿಯಾ ಯೋಜನೆ ತಯಾರಿಸಿ ಟೆಂಡರ್ ಕರೆಯಲಾಗಿದ್ದು, ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರವೇ ಕೊಳೆವೆ ಬಾವಿ ಕೊರೆಯುವ ಕೆಲಸ ಪ್ರಾರಂಭವಾಗಲಿದೆ ಎಂದು ಕೆಳದಂಡೆ ಮುಲ್ಲಾಮಾರಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಣಮಂತ ಪೂಜಾರಿ ಪ್ರಜಾವಾಣಿಗೆ ತಿಳಿಸಿದ್ದಾರೆ.

ಕೋಡ್ಲಿ ಬಳಿ ₹2.30 ಕೋಟಿ ಮೊತ್ತದ ಸೇತುವೆ ನಿರ್ಮಾಣ ಮತ್ತು ₹70 ಲಕ್ಷ ಮೊತ್ತದ ಕೊಳವೆ ಬಾವಿಗಳು ಹಾಗೂ ₹1 ಕೋಟಿ ಮೊತ್ತದ ತಿರುಮಲಾಪುರ ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಹೀಗಾಗಿ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ ಎಂದು ಸಹಾಯಕ ಎಂಜಿನಿಯರ್ ತ್ರಿಲೋಚನ ಜಾಧವ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.