ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 15:28 IST
Last Updated 2 ಮಾರ್ಚ್ 2023, 15:28 IST
   

ಕಲಬುರಗಿ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾಗಿದ್ದರಿಂದ ಜೇವರ್ಗಿ ತಾಲ್ಲೂಕಿನ ಗ್ರಾಮವೊಂದರ ನಿವಾಸಿ ಮಹ್ಮದ್ ರಸೂಲ್‌ಸಾಬ್ ಲಾಳೇಸಾಬ್ ಕೌಲಗಿ ಎಂಬಾತನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ‍ಪೋಕ್ಸೊ) ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿ ಆದೇಶಿಸಿದೆ.

2020ರ ಮೇ 7ರಂದು ಘಟನೆ ನಡೆದಿತ್ತು. ಬೈಕ್‌ನಲ್ಲಿ ಬಂದಿದ್ದ ಮಹ್ಮದ್ ರಸೂಲ್‌ಸಾಬ್, ಬಾಲಕಿಯ ಕೈ ಹಿಡಿದು ಜಗ್ಗಿ ಒತ್ತಾಯಪೂರ್ವಕವಾಗಿ ಅಪಹರಿಸಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ನೆರೆಮನೆಯ ಬಾಲಕಿಯನ್ನು ಹೈದರಾಬಾದ್‌ಗೆ ಕರೆದುಕೊಂಡು ಹೋಗಿ ಅಲ್ಲಿಯೂ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಜೇವರ್ಗಿ ಠಾಣೆ ಪಿಎಸ್ಐ ಮಂಜುನಾಥ ಜಿ. ಹೂಗಾರ, ತನಿಖೆ ನಡೆಸಿ ದೋಷಾರೊಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ‍ಪೋಕ್ಸೊ) ನ್ಯಾಯಾಲಯ ಎಫ್‌ಟಿಎಸ್‌ಸಿ–1 ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಪೋಕ್ಸೊ ಕಾಯ್ದೆಯಡಿ 20 ವರ್ಷ ಜೈಲು ಶಿಕ್ಷೆ, ₹ 20 ಸಾವಿರ ದಂಡ, ಜೀವ ಬೆದರಿಕೆ ಹಾಕಿದ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ ಹಾಗೂ ₹ 6 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ADVERTISEMENT

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದರು.

ಕಾನೂನು ಪ್ರಾಧಿಕಾರದ ವತಿಯಿಂದ ತೀರ್ಪು ಪ್ರಕಟವಾದ ಒಂದು ತಿಂಗಳ ಒಳಗಾಗಿ ಸಂತ್ರಸ್ತೆಗೆ ₹ 7 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.