ADVERTISEMENT

ಚಿಂಚೋಳಿ: ದೂಳು ಹಿಡಿದ 2016ರ ಭೂಕಂಪನ ಪೀಡಿತ ಪ್ರದೇಶಗಳ ವರದಿ

ಜಗನ್ನಾಥ ಡಿ.ಶೇರಿಕಾರ
Published 19 ಅಕ್ಟೋಬರ್ 2021, 3:39 IST
Last Updated 19 ಅಕ್ಟೋಬರ್ 2021, 3:39 IST
 ಭೂಕಂಪನ ಪೀಡಿತ ಗಡಿಕೇಶ್ವಾರ ಗ್ರಾಮದ ಸಂತ್ರಸ್ತರಿಗೆ ನಿರ್ಮಿಸಲಾದ ಶೆಡ್‌
 ಭೂಕಂಪನ ಪೀಡಿತ ಗಡಿಕೇಶ್ವಾರ ಗ್ರಾಮದ ಸಂತ್ರಸ್ತರಿಗೆ ನಿರ್ಮಿಸಲಾದ ಶೆಡ್‌   

ಚಿಂಚೋಳಿ: ಇಲ್ಲಿನ ಭೂಕಂಪನ ಪೀಡಿತ ಪ್ರದೇಶಗಳ ಕುರಿತು 2016ರಲ್ಲಿ ಅಧ್ಯಯನ ನಡೆಸಿದ್ದ ತಜ್ಞರ ವರದಿ ಸಲ್ಲಿಕೆಯಾಗಿ 5 ವರ್ಷ ಕಳೆದರೂ ಸರ್ಕಾರಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.

ತಾಲ್ಲೂಕಿನ ಹಸರಗುಂಡಗಿ, ಇಂದ್ರಪಾಡ ಹೊಸಳ್ಳಿ, ದಸ್ತಾಪುರ, ಚಿಮ್ಮಾಈದಲಾಯಿ ಹಾಗೂ ಗಡಿಕೇಶ್ವಾರ ಸುತ್ತಲಿನ ಪ್ರದೇಶಗಳಲ್ಲಿ ತಜ್ಞರು ಅಧ್ಯಯನ ನಡೆಸಿದ್ದರು. ವರದಿಯನ್ನು 2016ರಲ್ಲಿ ಜಿಲ್ಲಾಧಿಕಾರಿ ಮತ್ತು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದರು.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. ಈ ತಂಡ ಅಧ್ಯಯನ ನಡೆಸಿತ್ತು.

ADVERTISEMENT

ತಜ್ಞರು ಇಲ್ಲಿನ ಭೂಮಿ ರಚನೆ, ಜಲ ಮೂಲ, ಬುಗ್ಗೆ, ನದಿ, ನಾಲಾ, ತೊರೆ, ಬೆಟ್ಟ–ಗುಡ್ಡ, ಸುಣ್ಣದ ಕಲ್ಲಿನ ನಿಕ್ಷೇಪ, ಕಪ್ಪು ಶಿಲೆ ಹಾಗೂ ಭೂಗರ್ಭದಲ್ಲಿ ನಡೆಯುವ ವಿವಿಧ ಕ್ರಿಯೆಗಳು ಆಧರಿಸಿ ಭೂಕಂಪನಕ್ಕೆ ಕಾರಣಗಳನ್ನು ಒಳಗೊಂಡ ವರದಿ ಸಲ್ಲಿಸಿತ್ತು.

ಸರ್ಕಾರ ಆ ವರದಿಯನ್ನು ಗಂಭೀರವಾಗಿ ಪರಿಗಣಿಸದೆ ಇರುವು ದರಿಂದ ದೂಳು ತಿನ್ನುತ್ತಿದೆ. ಇದರಿಂದ ಜನರು ಭಯಭೀತರಾಗಿ ಗ್ರಾಮ ತೊರೆಯುವ ಪರಿಸ್ಥಿತಿ ಬಂದಿದೆ.

ಪ್ರಕೃತಿ ವಿಕೋಪಗಳಲ್ಲಿ ಭೂಕಂಪನಕ್ಕೆ ಅಗ್ರಸ್ಥಾನ. ಇದನ್ನು ನಿರ್ಲಕ್ಷಿಸಲು ಆಗದು. ಜನರ ಸುರಕ್ಷತೆಯ ದೃಷ್ಟಿಯಿಂದ ತಜ್ಞರ ವರದಿಗೆ ಮಹತ್ವವಿದ್ದು, ಅದರಲ್ಲಿ ಭೂಕಂಪನಕ್ಕೆ ಕಾರಣದ ಜತೆಗೆ ಸುರಕ್ಷಿತ ಕ್ರಮಗಳನ್ನು ಒಳಗೊಂಡಿತ್ತು. ಹೆಚ್ಚಿನ ಅಧ್ಯಯನದ ಅಗತ್ಯ ಮತ್ತು ಭವಿಷ್ಯದಲ್ಲಿ ಸಂಭವಿಸುವ ಕಂಪನದ ಸಾಧ್ಯತೆಯೂ ಇತ್ತು.

ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯ ಉಪಪ್ರಧಾನ ವ್ಯವಸ್ಥಾಪಕ ಡಾ. ಎಚ್.ಎಸ್.ಎಂ.ಪ್ರಕಾಶ, ವಿಪತ್ತು ಉಸ್ತುವಾರಿ ಕೇಂದ್ರದ ನಿರ್ದೆಶಕ ಡಾ. ಶ್ರೀನಿವಾಸರೆಡ್ಡಿ, ಪ್ರೊ ಬಿ.ಸಿ.ಪ್ರಭಾಕರ ಸೇರಿದಂತೆ ಇತರರಿದ್ದ ತಂಡ ಅಧ್ಯಯನ ನಡೆಸಿತ್ತು.

ಅಧ್ಯಯನಕ್ಕೆ ಪರಿಗಣಿಸಿದ ಸಂಗತಿಗಳು:

ತಾಲ್ಲೂಕಿನ ಭೂಮಿಯ ಶಿಲಾರಚನೆ, ಬಿರುಕುಗಳು, ಮಣ್ಣಿನ ಗುಣಲಕ್ಷಣ, ನದಿ, ಬುಗ್ಗೆ, ತೆರೆದ ಬಾವಿಗಳು, ಕೊಳವೆ ಬಾವಿಗಳನ್ನು ಹಾಗೂ ಸ್ಥಳೀಯ ಜನರ ಅನುಭವಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಿದ್ದರು.

ಶಿಫಾರಸುಗಳು: 1993ರಲ್ಲಿ ಸಂಭವಿಸಿದ್ದ ಮಹಾರಾಷ್ಟ್ರದ ಖಿಲಾರಿ ಮತ್ತು ಚಿಂಚೋಳಿಯ ನೆಲ, ಜಲ ಹೋಲಿಕೆ ಮಾಡಿ ಇಲ್ಲಿ ಎನ್‌ಜಿಆರ್‌ಐ ಸಂಸ್ಥೆಯಿಂದ ವಿಸ್ತೃತ ಅಧ್ಯಯನ ನಡೆಸುವ ಅಗತ್ಯವನ್ನು ಪ್ರತಿಪಾದಿಸಿದ್ದರು. ಜತೆಗೆ ಇಲ್ಲಿನ ಕಚ್ಚಾ ಮನೆಗಳಿಗೆ ಉಂಟಾಗಬಹುದಾದ ಹಾನಿ ಬಗ್ಗೆಯೂ ಉಲ್ಲೇಖಿಸಿದ್ದರು.

‘2016ರಲ್ಲಿ ವಿಶೇಷ ತಜ್ಞರು ಬಂದಿಲ್ಲ. ಯಾವಾಗಲೂ ಬರುವ ವಿಜ್ಞಾನಿಗಳೇ ಬಂದು ವರದಿ ನೀಡಿದ್ದರು. ಐಪಿ ಹೊಸಳ್ಳಿಯಲ್ಲಿ ರಿಕ್ಟರ್‌ ಮಾಪಕದಲ್ಲಿ 1.6 ರಷ್ಟು ತೀವ್ರತೆ ಭೂಕಂಪನ ದಾಖಲಾಗಿತ್ತು. ಆಗ ಒಂದಿಷ್ಟು ಶೆಡ್ ನಿರ್ಮಿಸಿದ್ದೆವು‘ ಎಂದು ಅಂದಿನ ಶಾಸಕ ಈಗಿನ ಸಂಸದ ಡಾ. ಉಮೇಶ ಜಾಧವ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

***

ಭೂಕಂಪನ ಬಗ್ಗೆ ಅಧ್ಯಯನ ನಡೆಸಿ ಸಲ್ಲಿಸಿದ್ದ ವರದಿಯ ಅಂಶಗಳನ್ನು ಸರ್ಕಾರ ಪರಿಗಣಿಸಿ ಜನರ ಸುರಕ್ಷತೆಗೆ ಮುಂದಾಗಬೇಕು

- ಪ್ರೊ.ಬಿ.ಸಿ.ಪ್ರಭಾಕರ, ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ

***

ಹೆಚ್ಚಿನ ತೀವ್ರತೆಯ ಭೂಕಂಪನಗಳು ದಾಖಲಾಗುತ್ತಿವೆ. ಹೀಗಾದರೆ ನಮ್ಮ ಗತಿ ಏನು. ಇನ್ನಾದರೂ ಸರ್ಕಾರ ನಮ್ಮ ಕಡೆ ಗಮನ ಹರಿಸಲಿ

- ಶಿವಶರಣಪ್ಪ ಸಾವನ್, ಗಡಿಕೇಶ್ವಾರ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.