ಚಿತ್ತಾಪುರ: ಪಟ್ಟಣದ ಆಶ್ರಯ ಬಡಾವಣೆ ಹಾಗೂ ವೆಂಕಟೇಶ್ವರ ಬಡಾವಣೆಯ ಎರಡು ಮನೆಗಳಲ್ಲಿ ಕಳ್ಳರು ಒಟ್ಟು 23 ಗ್ರಾಂ ಬಂಗಾರ, 32 ತೊಲ ಬೆಳ್ಳಿ, ₹ 92 ಸಾವಿರ ನಗದು ಕದ್ದೊಯ್ದಿರುವ ಪ್ರಕರಣ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಶುಕ್ರವಾರ ರಾತ್ರಿ ಆಶ್ರಯ ಬಡಾವಣೆಯಲ್ಲಿನ ಸೂರನದೇವಿ ದ್ಯಾವಪ್ಪ ಎಂಬುವರ ಮನೆಗೆ ನುಗ್ಗಿದ್ದ ಕಳ್ಳರು 5 ಗ್ರಾಂ ಬಂಗಾರ, ₹ 50 ಸಾವಿರ ನಗದು ಕಳವು ಮಾಡಿದ್ದಾರೆ. ಇದೇ ಬಡಾವಣೆಯಲ್ಲಿ ಇತರೆ ಮೂರು ಮನೆಗಳ ಬೀಗ ಮುರಿದು ಕಳ್ಳತನಕ್ಕೆ ಪ್ರಯತ್ನ ಮಾಡಿದ್ದಾರೆ. ವೆಂಕಟೇಶ್ವರ ಬಡಾವಣೆಯಲ್ಲಿನ ಸಂಜಯಿನಿ ಶರಣಬಸಪ್ಪ ಎಂಬುವವರ ಮನೆಯಲ್ಲಿ 18 ಗ್ರಾಂ ಬಂಗಾರ, 32 ತೊಲ ಬೆಳ್ಳಿ, ₹ 42 ಸಾವಿರ ನಗದು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಕಳ್ಳತನದ ಸುದ್ಧಿ ತಿಳಿಯುತ್ತಿದ್ದಂತೆ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಶ್ರೀಶೈಲ ಅಂಬಾಟಿ, ಪಿಎಸ್ಐ ಚಂದ್ರಾಮಪ್ಪ ಅವರು ಘಟನಾ ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಮನೆ ಕಳ್ಳತನ ಕುರಿತು ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆ: ಶುಕ್ರವಾರ ರಾತ್ರಿ 2.40ರ ಸುಮಾರಿಗೆ ಐವರು ರಸ್ತೆಯಲ್ಲಿ ಚಹರೆ ಮರೆಮಾಚಿಕೊಂಡು ರಾಜಾರೋಷವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯಾವಳಿ ಗಣೇಶ ನಗರದಲ್ಲಿನ ಮನೆಯೊಂದರ ಮುಂದೆ ಅಳವಡಿಸಿರುವ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇವರೇ ಮನೆ ಕಳ್ಳತನ ಮಾಡಿರಬಹುದೆಂದು ಪೊಲೀಸರಿಗೆ ಶಂಕೆಯುಂಟಾಗಿದ್ದು ವಿಡಿಯೊ ಪರಿಶೀಲಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.