ಕಲಬುರಗಿ: ಸರ್ಕಾರದ ನಿಯಮ ಉಲ್ಲಂಘಿಸಿ ತಪ್ಪು ಮಾಹಿತಿ ನೀಡಿ ಬಿಪಿಎಲ್ ಪಡಿತರ ಸೌಲಭ್ಯ ಪಡೆದ 24,904 ಪಡಿತರ ಚೀಟಿಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರದ್ದುಪಡಿಸಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಮುನಿಯಪ್ಪ ತಿಳಿಸಿದರು.
ವಿಧಾನಸಭೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬಿಪಿಎಲ್ ಪಡಿತರ ರದ್ದು ಪಡಿಸಿದ್ದಲ್ಲದೆ, ₹5.09 ಲಕ್ಷ ದಂಡ ವಿಧಿಸಲಾಗಿದೆ. ಪಡಿತರ ಕಾರ್ಡ್ ಪಡೆಯಲು ಕಠಿಣ ಮಾನದಂಡಗಳನ್ನು ವಿಧಿಸಲಾಗಿದೆ. ತಪ್ಪು ಮಾಹಿತಿ ಕೊಟ್ಟು ಆದ್ಯತೆ ಮೇರೆಗೆ ಪಡಿತರ ಪಡೆದಂತಹ ಸಾವಿರಾರು ಜನರನ್ನು ಗುರುತಿಸಲಾಗಿದ್ದು, ಕಠಿಣ ಕ್ರಮದ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ’ ಎಂದಿದ್ದಾರೆ.
ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ 93 ನ್ಯಾಯ ಬೆಲೆ ಅಂಗಡಿಗಳಿವೆ. ನಗರ ಪ್ರದೇಶದಲ್ಲಿ 800 ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ಪಡಿತರ ಚೀಟಿಗಳು ಇದ್ದಲ್ಲಿ ಪ್ರತ್ಯೇಕ ನ್ಯಾಯ ಬೆಲೆ ಅಂಗಡಿ ಒದಗಿಸಬೇಕು ಎಂಬ ನಿಯಮವಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.