ADVERTISEMENT

ಕಲಬುರಗಿ | ‘ಜನಸಮೂಹದ ಮೇಲೆ ಸಾಮ್ರಾಜ್ಯಶಾಹಿಗಳ ಅಟ್ಟಹಾಸ’: ಬಿ. ಅಮ್ಜದ್

ಭಾರತ ಕಮ್ಯುನಿಸ್ಟ್ ಪಕ್ಷದ 25ನೇ ಜಿಲ್ಲಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 7:27 IST
Last Updated 3 ಆಗಸ್ಟ್ 2025, 7:27 IST
ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಮುಖಂಡರು ಘೋಷಣೆಗಳನ್ನು ಕೂಗಿದರು
ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಮುಖಂಡರು ಘೋಷಣೆಗಳನ್ನು ಕೂಗಿದರು   

ಕಲಬುರಗಿ: ಜಗತ್ತಿನ ವಿವಿಧ ಅಸಹಾಯಕ ರಾಷ್ಟ್ರಗಳ ಮೇಲೆ ಸಾಮ್ರಾಜ್ಯಶಾಹಿ ಶಕ್ತಿಗಳು ಯುದ್ಧ ಹೂಡುವ ಮೂಲಕ ಅಟ್ಟಹಾಸಗೈಯುತ್ತಿವೆ. ಆದ್ದರಿಂದ ಜಗತ್ತಿನೆಲ್ಲೆಡೆ ಎಲ್ಲ ಪ್ರಗತಿಪರ ಮನಸ್ಸುಗಳು ಯುದ್ಧ ವಿರೋಧಿ ಹೋರಾಟಗಳನ್ನು ಕೈಗೆತ್ತಿಕೊಳ್ಳಬೇಕಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಜ್ಯ ಸಹ ಕಾರ್ಯದರ್ಶಿ ಬಿ. ಅಮ್ಜದ್ ಕರೆ ನೀಡಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಪಕ್ಷದ 25ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಇಸ್ರೇಲ್ ಪ್ಯಾಲೆಸ್ಟೀನ್ ಹಾಗೂ ಇರಾನ್ ಮೇಲೆ, ರಷ್ಯಾ ಉಕ್ರೇನ್‌ ಮೇಲೆ ಯುದ್ಧಗಳನ್ನು ನಡೆಸುತ್ತಿದೆ. ಇದರಿಂದಾಗಿ ಲಕ್ಷಾಂತರ ಅಸಹಾಯಕ ಜನರು ಸಾವಿಗೀಡಾಗುತ್ತಿದ್ದಾರೆ. ಇಸ್ರೇಲ್ ದಾಳಿಯ ಹಿಂದೆ ಅಮೆರಿಕದ ಕೈವಾಡವಿದೆ ಎಂಬುದು ಇಡೀ ಜಗತ್ತಿಗೇ ತಿಳಿದಿದೆ. ಇಂತಹ ಘಟನೆಗಳಿಂದಾಗಿ ಸುಸ್ಥಿರ ಸಮಾಜ ಕಟ್ಟುವ ಪ್ರಯತ್ನಗಳಿಗೆ ಹಿನ್ನಡೆಯಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆ ಸತ್ತಿದೆ ಎಂದು ಜರಿದಿದ್ದಾರೆ. ತೆರಿಗೆ ನೀತಿಯಿಂದಾಗಿ ಆರ್ಥಿಕ ವ್ಯವಸ್ಥೆಗೆ ಬರೆ ಹಾಕಿದ್ದಾರೆ. ಕಮ್ಯುನಿಸ್ಟ್ ಪಕ್ಷದವರು ಸದಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾರೆ ಎಂಬ ಆರೋಪಗಳಿವೆ. ಆದರೆ, ಕಮ್ಯುನಿಸ್ಟರು ವಾಸ್ತವಿಕ ಪರಿಸ್ಥಿತಿಯನ್ನು ಅರಿತುಕೊಂಡು ಆಳುವವರನ್ನು ಟೀಕಿಸುತ್ತೇವೆ’ ಎಂದರು.

ADVERTISEMENT

‘ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತಂದಿರುವುದು ಶ್ಲಾಘನೀಯ. ಆದರೆ, ಅದೇ ಸಂದರ್ಭದಲ್ಲಿ ಐತಿಹಾಸಿಕ ಹೋರಾಟದ ಮೂಲಕ ಗಳಿಸಿದ ಕಾರ್ಮಿಕರ ದುಡಿಮೆಯ ಅವಧಿಯನ್ನು 8 ಗಂಟೆಯಿಂದ 12 ಅಥವಾ 14 ಗಂಟೆಗೆ ಹೆಚ್ಚಿಸಲು ಹುನ್ನಾರ ನಡೆಸುತ್ತಿದೆ. ಅಧಿಕಾರಕ್ಕೆ ಬಂದ ಕೂಡಲೇ ವಾಪಸ್ ಪಡೆಯುತ್ತೇವೆ ಎಂದಿದ್ದ ಮೂರು ಕೃಷಿ ಸಂಬಂಧಿ ತಿದ್ದುಪಡಿ ಕಾಯ್ದೆಗಳು ಇನ್ನೂ ರದ್ದಾಗಿಲ್ಲ. ಹೀಗೆ ಮಾಡುವುದು ಜನಪರ ಸರ್ಕಾರವೊಂದರ ಲಕ್ಷಣವಲ್ಲ’ ಎಂದು ಟೀಕಿಸಿದರು.

ಪ್ರಗತಿಪರ ಚಿಂತಕ ಮಾರುತಿ ಗೋಖಲೆ ಮಾತನಾಡಿ, ‘ಜಗತ್ತಿನಲ್ಲಿ ಎಲ್ಲ ಸರ್ವಾಧಿಕಾರಿಗಳೂ ಚುನಾವಣೆಯ ಮೂಲಕವೇ ಆಯ್ಕೆಯಾಗಿದ್ದಾರೆ. ಜರ್ಮನಿಯ ಅಡಾಲ್ಫ್ ಹಿಟ್ಲರ್, ಇಟಲಿಯ ಬೆನೆಟೊ ಮುಸೊಲಿನಿಯಂತಹವರು ಮನುಕುಲಕ್ಕೆ ಭಾರಿ ಪ್ರಮಾಣದ ಹಾನಿ ಮಾಡಿದ್ದಾರೆ. ದೇಶದಲ್ಲಿಯೂ ಫ್ಯಾಸಿಸ್ಟ್ ಶಕ್ತಿಗಳು ತಲೆ ಎತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಬೇರೆ ದೇಶಗಳಲ್ಲಿ ಕ್ರಾಂತಿಯಾಗಿದೆ. ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷ ಆರಂಭವಾಗಿ ನೂರು ವರ್ಷ ಕಳೆದರೂ ಏಕೆ ಕ್ರಾಂತಿಯಾಗಿಲ್ಲ ಎಂದು ಜನರು ಪ್ರಶ್ನಿಸಬಹುದು. 1919ರಲ್ಲಿ ಮಾಸ್ಕೊದಲ್ಲಿ ನಡೆದ ಪಕ್ಷದ ಮಹಾಧಿವೇಶನದಲ್ಲಿ ಮಾತನಾಡಿದ್ದ ಲೆನಿನ್ ಅವರು ಆಯಾ ದೇಶಗಳ ಅವಶ್ಯಕತೆಗೆ ತಕ್ಕಂತೆ ಕಮ್ಯುನಿಸ್ಟ್ ಸಿದ್ಧಾಂತವನ್ನು ಮಾರ್ಪಾಟು ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ಸಿದ್ಧಾಂತದಲ್ಲಿ ಯಾವುದೇ ದೋಷವಿಲ್ಲ. ಆದರೆ, ಅದನ್ನು ಮುನ್ನಡೆಸುವವರಲ್ಲಿ ದೋಷಗಳಿವೆ ಎಂಬುದಾಗಿ ತಿಳಿಸಿದ್ದರು. ಇದನ್ನು ತಿದ್ದಿಕೊಂಡು ದುಡಿಯುವ ಜನರನ್ನು ಸಂಘಟಿಸಬೇಕು’ ಎಂದು ಸಲಹೆ ನೀಡಿದರು.

ಹಿರಿಯ ವಕೀಲ ಪಿ. ವಿಲಾಸಕುಮಾರ್, ದಲಿತ ಮುಖಂಡ ಬಸಣ್ಣ ಸಿಂಗೆ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ್ ರಾಠೋಡ, ಸಹ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಪಕ್ಷದ ರಾಜ್ಯ ಮಂಡಳಿ ಸದಸ್ಯ ಮೌಲಾ ಮುಲ್ಲಾ, ಪಕ್ಷದ ಮುಖಂಡರಾದ ಭೀಮಾಶಂಕರ ಮಾಡಿಯಾಳ, ಪದ್ಮಾವತಿ ಮಾಲಿಪಾಟೀಲ, ಹಣಮಂತರಾಯ ಅಟ್ಟೂರ ಹಾಗೂ ವಿವಿಧ ತಾಲ್ಲೂಕುಗಳ ಕಾರ್ಯದರ್ಶಿಗಳು, ಪಕ್ಷದ ಕಾರ್ಯಕರ್ತರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

2014ರಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದ ಮೋದಿಯವರು ಉದ್ಯೋಗ ಕೊಡುವ ಬದಲು ವಿದೇಶಕ್ಕೆ ಹಾರುತ್ತಿದ್ದಾರೆ. ನೋಟ್‌ ಬಂದಿ ಮಾಡಿದ ಬೆನ್ನಲ್ಲೇ ಈಗ ವೋಟ್‌ ಬಂದಿ ಮಾಡಲು ಹೊರಟಿದ್ದಾರೆ
ಡಾ.ಪಿ.ಸಂಪತ್ ರಾವ್ ಹಿರಿಯ ಕಮ್ಯುನಿಸ್ಟ್ ನಾಯಕ
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅವನತಿಯಾಗಿದೆ. ಮಹಾನ್‌ ಅನಾಹುತದತ್ತ ಹೋಗುತ್ತಿದ್ದೇವೆ. ದೇಶ ಈಗಾಗಲೇ ಅರ್ಧ ಸತ್ತು ಹೋಗಿದೆ. ಪೂರ್ತಿ ಸತ್ತು ಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ
ಪ್ರೊ.ಆರ್.ಕೆ. ಹುಡಗಿ ಪ್ರಗತಿಪರ ಚಿಂತಕ

ಕಲಬುರಗಿಯಲ್ಲಿ ರಾಜ್ಯ ಸಮ್ಮೇಳನ:

ಆಗಸ್ಟ್ 30 31 ಹಾಗೂ ಸೆಪ್ಟೆಂಬರ್ 1ರಂದು ಕಲಬುರಗಿಯಲ್ಲಿ ಸಿಪಿಐ ಪಕ್ಷದ ರಾಜ್ಯ ಸಮ್ಮೇಳನ ನಡೆಯಲಿದೆ. ಸೆಪ್ಟೆಂಬರ್ 25ರಿಂದ 30ರವರೆಗೆ ಪಕ್ಷದ ಮಹಾಧಿವೇಶನ ಪಂಜಾಬ್‌ನಲ್ಲಿ ನಡೆಯಲಿದೆ. ದೇಶದ ವಿವಿಧ ರಾಜ್ಯಗಳ ಹಲವು ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಯಲಿದೆ ಎಂದು ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಬಿ. ಅಮ್ಜದ್ ಮಾಹಿತಿ ನೀಡಿದರು. ಸಮ್ಮೇಳನಕ್ಕೂ ಮುನ್ನ ಕನ್ನಡ ಭವನದ ಆವರಣದಲ್ಲಿ ಪಕ್ಷದ ಕೆಂಬಾವುಟವನ್ನು ಹಾರಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.