ADVERTISEMENT

ಎರಡು ತಿಂಗಳಲ್ಲಿ 340 ಮದುವೆಗೆ ಅನುಮತಿ

ಗ್ರಾಮೀಣ ಪ್ರದೇಶಗಳಲ್ಲಿ ಪಾಲನೆಯಾಗದ ಕೋವಿಡ್ ಮಾರ್ಗಸೂಚಿ

ಮಲ್ಲಿಕಾರ್ಜುನ ಎಚ್.ಮುಡಬೂಳಕರ್
Published 25 ಮೇ 2021, 3:02 IST
Last Updated 25 ಮೇ 2021, 3:02 IST
ಉಮಾಕಾಂತ ಹಳ್ಳೆ
ಉಮಾಕಾಂತ ಹಳ್ಳೆ   

ಚಿತ್ತಾಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳು ಮತ್ತು ತಾಂಡಾಗಳಲ್ಲಿ ಏಪ್ರಿಲ್‌ನಿಂದ ಈವರೆಗೆ ಒಟ್ಟು 340 ಮದುವೆ ಕಾರ್ಯಕ್ರಮಗಳು ನಡೆದಿದ್ದು, ಸರ್ಕಾರದ ಮಾರ್ಗಸೂಚಿಯನ್ವಯ ತಾಲ್ಲೂಕು ಆಡಳಿತ ಅನುಮತಿ ನೀಡಿದೆ.

‘ಮದುವೆ ಸೇರಿ ಇತರ ಶುಭ ಕಾರ್ಯಗಳಿಗೆ ಅನುಮತಿ ನೀಡುವಂತೆ ಕೋರಿ ಪ್ರತಿ ದಿನವೂ ಸಾರ್ವನಿಕರಿಂದ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಸರ್ಕಾರದ ಸೂಚನೆ ಪಾಲಿಸುವುದಾದರೆ ಮಾತ್ರ ಅನುಮತಿ ನೀಡಲಾಗುವುದೆಂದು ಸ್ಪಷ್ಟವಾಗಿ ಸೂಚಿಸು ತ್ತೇವೆ. ಕಾರ್ಯಕ್ರಮದಲ್ಲಿ ನಿಗಾ ವಹಿಸುತ್ತೇವೆ. ಇದುವರೆಗೂ 340 ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ’ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ತಿಳಿಸಿದರು.

‘ಮದುವೆ ಕಾರ್ಯಕ್ರಮಕ್ಕೆ ವರ ಮತ್ತು ವಧುವಿನ ಕಡೆಯವರು ಸೇರಿ ಒಟ್ಟು 40 ಜನ ಮಾತ್ರ ಪಾಲ್ಗೊಳ್ಳಬೇಕು ಎಂದು ಸರ್ಕಾರ ನಿಯಮವಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಯಾವುದೇ ನಿಯಮಗಳು ಪಾಲನೆಯಾಗುವುದಿಲ್ಲ. ಕಾರ್ಯಕ್ರಮದಲ್ಲಿ ಜನಜಂಗುಳಿ ಇರುತ್ತದೆ ಅಲ್ಲದೇ ಶುಭಕೋರಲು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಲಾದ ಟಾಸ್ಕ್‌ಫೋರ್ಸ್ ಸಮಿತಿಗಳು ಸಹ ಮಾರ್ಗಸೂಚಿ ಜಾರಿಗೊಳಿಸುವಲ್ಲಿ ವಿಫಲವಾಗಿವೆ’ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ADVERTISEMENT

‘ಅನುಮತಿ ನೀಡಿರುವ ಪ್ರಕಾರವೇ ಮದುವೆ ನಡೆಯುತ್ತಿದೆ ಅಥವಾ ಇಲ್ಲವೇ ಎಂಬುದನ್ನು ಯಾರೂ ಗಮನಿಸುತ್ತಿಲ್ಲ. ಸೆಕ್ಟರ್ ಅಧಿಕಾರಿ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಅವರು ದೂರುತ್ತಾರೆ.

ಮಕ್ಕಳ ಜಾವಳ, ಯಲ್ಲಮ್ಮ ದೇವಿಗೆ ಕೊಡ, ಹರಕೆ ಸಲ್ಲಿಸುವ ಕಾರ್ಯಕ್ರಮ ಹೆಚ್ಚು ನಡೆಯುತ್ತವೆ. ರಾತ್ರಿಯಿಡೀ ಗುಡಿಗಳ ಹತ್ತಿರ ಭಜನೆ, ದೇವರಿಗೆ ಅಭಿಷೇಕದಂತಹ ಕಾರ್ಯಕ್ರಮ ನಿರಾತಂಕವಾಗಿ ಜರುಗುತ್ತವೆ. ಇವುಗಳಿಗೆ ಪೂರ್ಣಪ್ರಮಾಣದಲ್ಲಿ ಕಡಿವಾಣ ಹಾಕಲಾಗಿಲ್ಲ.

‘ಗ್ರಾಮೀಣ ಪ್ರದೇಶದಲ್ಲಿ ಈಚೆಗೆ ಕೊರೊನಾ ವ್ಯಾಪಕವಾಗಿ ಹರಡು ತ್ತಿದ್ದು, ಅಧಿಕಾ ರಿಗಳು ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಬೇಕು. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು’ ಎಂದು ಮುಖಂಡರು ಆಗ್ರಹಿಸಿದ್ದಾರೆ.

*ಅದ್ದೂರಿ ಮದುವೆ ನಡೆಯುತ್ತಿರುವ ಮಾಹಿತಿ ಆಧರಿಸಿ ಕಾಟಮ್ಮದೇವರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಉಮಾಕಾಂತ ಹಳ್ಳೆ, ತಹಶೀಲ್ದಾರ್

*ಮದುವೆ ಕಾರ್ಯಕ್ರಮದ ಮೇಲೆ ನಿಗಾ ವಹಿಸುವಂತೆ ಪಿಡಿಒ ಅವರಿಗೆ ಸೂಚಿಸಲಾಗಿದೆ. ಹೆಚ್ಚು ಜನರಿದ್ದರೆ ಚದುರಿಸುವ ಕೆಲಸ ನಡೆಯುತ್ತಿದೆ. ಜನರು ಸಹಕಾರ ನೀಡಬೇಕು.

ನೀಲಗಂಗಾ ಬಬಲಾದ, ತಾ.ಪಂ ಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.