ADVERTISEMENT

ಕಲಬುರ್ಗಿ ಜಿಲ್ಲೆ ಅಭಿವೃದ್ಧಿಗೆ ₹ 500 ಕೋಟಿ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 6:21 IST
Last Updated 27 ಜೂನ್ 2019, 6:21 IST
   

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಭಾಗದ ಆರೋಗ್ಯ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಕಲಬುರ್ಗಿಯ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ₹150 ಕೋಟಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೃದಯ ಸಂಬಂಧಿ ತೊಂದರೆಗಾಗಿ ಜನರು ಹೈದರಾಬಾದ್‌ಗೆಹೋಗಬೇಕಿತ್ತು. ಈಗ ಆಸ್ಪತ್ರೆ ವಿಸ್ತರಣೆಯಿಂದ ಅನುಕೂಲವಾಗಲಿದೆ ಎಂದರು‌.

ಭೀಮಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿಸುವ ಕುರಿತು ಚರ್ಚಿಸಲು ಮಹಾರಾಷ್ಟ್ರ ‌ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಎರಡು ಬಾರಿ ಸಮಯ ಕೇಳಿದ್ದೆ. ಅವರು ಚರ್ಚೆಗೆ ಬರುತ್ತಿಲ್ಲಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ವಾಲ್ಮೀಕಿ ಸಮುದಾಯದವರಿಗೆ ಶೇ 7.5 ಮೀಲಾತಿ ನೀಡುವ ಕುರಿತು ‌ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ‌ಕುಮಾರಸ್ವಾಮಿ, ಈ ಬಗ್ಗೆ ಬೀದಿಯಲ್ಲಿ ಆದೇಶ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ₹500 ಕೋಟಿ: ಒಟ್ಟಾರೆ ಜಿಲ್ಲೆಯ ‌ಶಾಲಾ ಕಟ್ಟಡ ದುರಸ್ತಿ, ಹೊಸ ಕಟ್ಟಡ ನಿರ್ಮಾಣ, ಸಿ.ಸಿ. ರಸ್ತೆ ನಿರ್ಮಾಣ ಸೇರಿದಂತೆ ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಗೆ ₹500 ಕೋಟಿ ವೆಚ್ಚ ಮಾಡಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ ಎಂದರು.

ಹೇರೂರ (ಬಿ) ಗ್ರಾಮದಲ್ಲಿಯೇವಾಸ್ತವ್ಯ: ಮಳೆಯಿಂದಾಗಿ ರದ್ದುಗೊಂಡಿದ್ದ ಹೇರೂರ (ಬಿ) ಗ್ರಾಮದಲ್ಲೇ ಮತ್ತೆ ವಾಸ್ತವ್ಯ ಹೂಡುವೆ. ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಕಲಬುರ್ಗಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅಹವಾಲು ಸಲ್ಲಿಸಿದ ಸಾರ್ವಜನಿಕರು

ಮುಂದಿನವಾರ ಬೆಂಗಳೂರಿನಲ್ಲಿ ‌ಸಭೆ: ಹೈದರಾಬಾದ್ ಕರ್ನಾಟಕ ಭಾಗದ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಂದಿನವಾರ ಬೆಂಗಳೂರಿನಲ್ಲಿ ಈ ಭಾಗದ ಜನಪ್ರತಿನಿಧಿಗಳ ಸಭೆ ನಡೆಸಲಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಜಿಲ್ಲಾ‌ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿ ‌ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರಡ್ಡಿ, ಪ್ರಾದೇಶಿಕ ಆಯುಕ್ತ ‌ಸುಬೋಧ್ ಯಾದವ್, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್, ಜಿ.ಪಂ. ಸಿಇಒ ಡಾ.ರಾಜಾ ಪಿ. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.