ADVERTISEMENT

ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ: ರೌಡಿ ಶೀಟರ್‌ ಮೇಲೆ ಗುಂಡಿನ ದಾಳಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 8:15 IST
Last Updated 11 ಜನವರಿ 2018, 8:15 IST
ಕಲಬುರ್ಗಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೌಡಿಶೀಟರ್ ಮಲ್ಲಿಕಾರ್ಜುನ ಕಡಬೂರು
ಕಲಬುರ್ಗಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೌಡಿಶೀಟರ್ ಮಲ್ಲಿಕಾರ್ಜುನ ಕಡಬೂರು   

ಕಲಬುರ್ಗಿ: ನಗರ ಹೊರವಲಯದ ಕೆಸರಟಗಿ ಬಳಿ ಬುಧವಾರ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ರೌಡಿ ಶೀಟರ್‌ ಮಲ್ಲಿಕಾರ್ಜುನ ಚಂದ್ರಕಾಂತ ಕಡಬೂರು ಅಲಿಯಾಸ್ ಇದ್ಲಿ ಮಲ್ಯಾ (22) ಹಲ್ಲೆ ಮಾಡಿದ್ದು, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಹಲ್ಲೆಗೆ ಒಳಗಾಗಿರುವ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ಗಳಾದ ವಿಶ್ವನಾಥ ಮತ್ತು ಅನಿಲ್‌ಕುಮಾರ್ ಅವರನ್ನು ಬಸವೇಶ್ವರ ಆಸ್ಪತ್ರೆಗೆ ಹಾಗೂ ಆರೋಪಿ ಮಲ್ಲಿಕಾರ್ಜುನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಲಿಕಾರ್ಜುನನ ಬಲಗಾಲು ಮತ್ತು ಬಲ ಕೈಗೆ ಗುಂಡು ತಗುಲಿದೆ.

ಬಂಧಿತ ಮಲ್ಲಿಕಾರ್ಜುನ ಮೇಲೆ ಕೊಲೆ, ದರೋಡೆ, ಅಪಹರಣ, ಹಲ್ಲೆ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಂಬತ್ತು ಪ್ರಕರಣ ದಾಖಲಾಗಿವೆ.

ADVERTISEMENT

‘ನಂದೂರ (ಕೆ) ನಿವಾಸಿ ಲಕ್ಷ್ಮಿಕಾಂತ ಕೊಲೆ ಸೇರಿ ಹಲವು ಪ್ರಕರಣಗಳಲ್ಲಿ ಮಲ್ಲಿಕಾರ್ಜುನ ಕಡಬೂರು ಪೊಲೀಸರಿಗೆ ಬೇಕಾಗಿದ್ದ. ಪೊಲೀಸರ ಗುಂಡಿನ ದಾಳಿಯಿಂದ ಮೃತಪಟ್ಟಿರುವ ಮಲ್ಲಿಕಾರ್ಜುನ ಅಲಿಯಾಸ್ ಕರಿ ಚಿರತೆಯ ಸಹಚರನಾಗಿದ್ದ. ಖಚಿತ ಮಾಹಿತಿ ಆಧರಿಸಿ ಬಂಧಿಸಲು ತೆರಳಿದ್ದ ಕಾನ್‌ಸ್ಟೆಬಲ್‌ಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ. ಆತ್ಮ ರಕ್ಷಣೆಗಾಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಪಿಎಸ್‌ಐ ಪರಶುರಾಮ ವನಂಜಕರ್ ಆತನ ಮೇಲೆ ಗುಂಡು ಹಾರಿಸಿದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ಗ್ರಾಮೀಣ ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕಾನ್‌ಸ್ಟೆಬಲ್‌ಗಳ ಆರೋಗ್ಯ ವಿಚಾರಿಸಿದರು. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.