ADVERTISEMENT

ವಾಡಿಯಲ್ಲಿ ಎರಡು ಪ್ರತ್ಯೇಕ ಪ್ರತಿಭಟನೆ

ಕೋರೆಗಾಂವ ಘಟನೆ ಬಗ್ಗೆ ದಲಿತರು, ತಲಾಖ್ ಬಗ್ಗೆ ಮುಸ್ಲಿಮರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 8:38 IST
Last Updated 14 ಜನವರಿ 2018, 8:38 IST
ತ್ರಿವಳಿ ತಲಾಖ್ ಮಸೂದೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಹಲವು ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು
ತ್ರಿವಳಿ ತಲಾಖ್ ಮಸೂದೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಹಲವು ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು   

ವಾಡಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ಶನಿವಾರ ಎರಡು ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು. ಈಚೆಗೆ ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿ ದಲಿತರ ಮೇಲಿನ ಹಲ್ಲೆಯನ್ನು ಖಂಡಿಸಿ ಕೂಡಲೇ ರಾಷ್ಟ್ರಪತಿ ಅವರು, ಮಹಾರಾಷ್ಟ್ರ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸಾಂಕೇತಿಕ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಸಂಘಟನೆಯ ಮುಖಂಡರು, ಘಟನೆ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಮಾತನಾಡಿ, ‘ಕೋರೆಗಾಂವನಲ್ಲಿ ವ್ಯವಸ್ಥಿತ ಸಂಚು ನಡೆಸಿ ದಲಿತರ ಮೇಲೆ ಹಲ್ಲೆ ಮಾಡಲಾಗಿದೆ. ದೇಶವೇ ತಲ್ಲಣಗೊಳಿಸುವ ಘಟನೆ ಜರುಗಿದರೂ ದಿವ್ಯ ಮೌನಕ್ಕೆ ಶರಣಾಗಿರುವ ಮಹಾರಾಷ್ಟ್ರ ಸರ್ಕಾರ, ದಲಿತ ಹಾಗೂ ಹಿಂದುಳಿದವರ ವಿರೋಧಿಯಾಗಿದೆ. ಕೂಡಲೇ ಮಹಾರಾಷ್ಟ್ರ ಸರಕಾರವನ್ನು ವಜಾ ಮಾಡಲು ರಾಷ್ಟ್ರಪತಿ ಕ್ರಮ ಕೈಗೊಳ್ಳಬೇಕು. ಇಂತಹ ಷಡ್ಯಂತ್ರಕ್ಕೆ ಕಾರಣರಾದ ಸಂಭಾಜಿ ಭಿಡೆ ಮತ್ತು ಮಿಲಿಂದ ಏಕಬೋಟೆ ಅವರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು. ಮುಂಜಾಗ್ರತಾ ಕ್ರಮ ಕೈಗೊಳ್ಳದ ಜಿಲ್ಲಾ ಅಧೀಕ್ಷಕ ಮತ್ತು ಜಿಲ್ಲಾಧಿಕಾರಿಯನ್ನು ಕೂಡಲೇ ವಜಾ ಮಾಡಬೇಕು ಮತ್ತು ದಲಿತರ ಮೇಲೆ ದಾಖಲಿಸಲಾದ ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

ವಾಡಿ-ಶಹಾಬಾದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಸೇನ ಮೇನಗಾರ, ಇಂದ್ರಜೀತ ಸಿಂಗೆ, ಶರಣಪ್ಪ ವಾಡೇಕರ್, ಸಂತೋಷ ಜೋಗೂರ, ಶರಣಬಸು ಶಿರೂರಕರ, ಸತೀಶ, ಸುಧಾಕರ ಗಾಯಕವಾಡ ಮಾತನಾಡಿದರು. ಮಲ್ಲಿಕಾರ್ಜುನ ಮಾಶಾಳ, ರಾಹುಲ ಮೇನಗಾರ, ಅಪ್ಪಾರಾವ ಸರಡಗಿ, ಯಲ್ಲಪ್ಪ ಬೇಡೆಕರ್, ಶೇಕಪ್ಪ ಹೇರೂರ, ಚಂದ್ರು ದೊಡ್ಡಮನಿ, ಶ್ರೀಮಂತ ಮೈನಾಳಕರ್, ವಿಜಯ ಯಲಸತ್ತಿ, ರಾಜು ಗಟ್ಟು, ರಾಜು ಕೊಲ್ಲೂರ, ಉಲ್ಲಾಸ ಮೈನಾಳಕರ್ ಇದ್ದರು.

ತ್ರಿವಳಿ ತಲಾಖ್ ಕಾನೂನು ತಿದ್ದುಪಡಿಗೆ ವಿರೋಧ: ಮುಸ್ಲಿಂರ ಷರಿಯತ್ ಕಾನೂನಿನ ಪ್ರಮುಖ ಅಂಶವಾದ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಲು ಮುಂದಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಹಲವು ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿ, ಕೇಂದ್ರ ಸಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದವು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಆಜಾದ್ ಚೌಕ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾ ರರನ್ನು ಉದ್ದೇಶಿಸಿ ಮಾತನಾಡಿದ ಡಾ.ಫಿರ್ದೋಸ್ ಝರೀನಾ, ‘ಮುಸ್ಲಿಂರ ವೈಯುಕ್ತಿಕ ಕಾನೂನಿನಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಿದ್ದು, ಇದು ಪ್ರಜಾತಂತ್ರ ವಿರೋಧಿ ಹಾಗೂ ಅಸಂವಿಧಾನಿಕ ಕ್ರಮವಾಗಿದೆ. ಯಾವುದೇ ಜನಪರ ಸರ್ಕಾರವಾಗಲಿ ದೇಶದ ಪ್ರಜೆಯ ವೈಯುಕ್ತಿಕ ನಂಬಿಕೆ ಹಾಗೂ ಧರ್ಮದಲ್ಲಿ ಹಸ್ತಕ್ಷೇಪ ಮಾಡುವುದು ಸಂವಿಧಾನಕ್ಕೆ ಎಸಗಿದ ಘೋರ ಅಪರಾಧವಾಗಿದೆ’ ಎಂದರು.

‘ಕೇಂದ್ರ ಸರ್ಕಾರದ ಈ ನಡೆಯಿಂದ ಇಡೀ ಮುಸ್ಲಿಂ ಸಮಾಜದ ಬಾಂಧವರ ಮನಸ್ಸಿಗೆ ಹಾಗೂ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ತಕ್ಷಣವೇ ಈ ಕಾನೂನು ರಚನೆಯ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಇಡೀ ದೇಶದಾದ್ಯಂತ ಪ್ರಬಲ ಹೋರಾಟ ಬೆಳೆಸಲಾಗುವುದು’ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಾಮೀಯ ಮಸೀದಿ ಅಧ್ಯಕ್ಷ ಆಲ್ ಹಜ್ ಮಕ್ಬೂಲ್ ಜಾನಿ, ಅಬ್ದುಲ್ ಬಖಿ ಖಾಲೀದ್, ಸೈಯದ್ ಮಹೆಮೂದ್ ಸಾಹೇಬ್, ಬಷೀರ್ ಆಹ್ಮದ್ ಖುರೇಶಿ, ಅಫ್ಸರಾ ಬೇಗಂ, ಹಸೀನಾ ಬೇಗಂ, ಝರೀನಾ ಬೇಗಂ ಸೇರಿದಂತೆ 9 ಮಸೀದಿಗಳ ಅಧ್ಯಕ್ಷರು ಹಾಗೂ ಮುಖಂಡರು ಇದ್ದರು.

ನಾಲವಾರ ಉಪತಹಶೀಲ್ದಾರ್‌ ಕೆ.ವೈ.ರವಿಕುಮಾರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.