ADVERTISEMENT

ಆರ್ಯವೈಶ್ಯ ಸಮಾಜದ ಮಹಿಳೆಯರಿಂದ ಬಾಗಿನ

ಕಾಳಗಿ: ಸಡಗರ, ಸಂಭ್ರಮದ ನಡುವೆ ಮಕರ ಸಂಕ್ರಾಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 6:11 IST
Last Updated 15 ಜನವರಿ 2018, 6:11 IST
ಕಾಳಗಿಯ ಆರ್ಯವೈಶ್ಯ ಸಮಾಜದ ಮಹಿಳೆಯರು ಭಾನುವಾರ ಬಾಗಿನ ನೀಡಿದರು
ಕಾಳಗಿಯ ಆರ್ಯವೈಶ್ಯ ಸಮಾಜದ ಮಹಿಳೆಯರು ಭಾನುವಾರ ಬಾಗಿನ ನೀಡಿದರು   

ಕಾಳಗಿ: ಪಟ್ಟಣವು ಸೇರಿದಂತೆ ಸುತ್ತಲಿನ ಜನ ಭಾನುವಾರ ಸಂಭ್ರಮದಿಂದ ಸಂಕ್ರಾಂತಿ ಆಚರಿಸಿದರು.

ಬೆಳಿಗ್ಗೆ ತೀರ್ಥ ಕ್ಷೇತ್ರದಲ್ಲಿ ಸ್ನಾನ ಮಾಡಿ, ಶ್ರದ್ಧಾ ಭಕ್ತಿಯಿಂದ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಎಳ್ಳುಬೆಲ್ಲ, ಕುಸುರೆಳ್ಳು ಕೊಟ್ಟು ಮಕರ ಸಂಕ್ರಾಂತಿ ಆಚರಿಸಿದರು. ಸ್ಥಳೀಯ ಆರ್ಯವೈಶ್ಯ ಸಮಾಜದ ಮಹಿಳೆಯರು ಪರಸ್ಪರ ಬಾಗಿನ ಪಡೆದುಕೊಂಡು ಶುಭಾಶಯ ಹಂಚಿಕೊಂಡರು.

ಸಂಕ್ರಾಂತಿ ಹಬ್ಬದಂದು ಮನೆಮುಂದೆ ತಳಿರುತೋರಣ ಹಾಕಿ, ಗೌರಿಪೂಜೆ ಮಾಡಿದ ಮುತ್ತೈದೆಯರು ಬಾಗಿನ ನೀಡಿದರೆ ಇನ್ನೊಂದು ಜೀವನದಲ್ಲಿನ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿ ಹಬ್ಬ ಸಾಧನೆಗೆ ಪೂರಕವಾಗಿದ್ದರಿಂದ ಈ ದಿನ ನೀಡಿದ ಬಾಗಿನದಿಂದ ದೇವತೆಯ ಕೃಪೆ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ADVERTISEMENT

ಲೋಕಕಲ್ಯಾಣಕ್ಕಾಗಿಯೂ ಆರ್ಯವೈಶ್ಯ ಸಮಾಜದ ಹಿರಿಯರು ಜಾರಿಗೆ ತಂದ ಪದ್ಧತಿ ಇದಾಗಿದೆ. ಅರಸಿಣ ಬೋಟ್ಟು 125 ಕೆ.ಜಿ, ಅಕ್ಕಿ 125 ಕೆ.ಜಿ, ಎಳ್ಳು 25 ಕೆ.ಜಿ, ಬೆಲ್ಲ 25 ಕೆ.ಜಿ, ಕುಂಕುಮ 11 ಕೆ.ಜಿ ಸೇರಿದಂತೆ ತುಳಸಿ, ಬೀಸುಕಲ್ಲು, ತುಂಬಿದ ಕೊಡ, ಬೀಗತಿ ಕೊಡ, ಗೋಮಾತೆ, ಮುತ್ತು, ಹವಳ, ಊದುಬತ್ತಿ ಎಲ್ಲವನ್ನೂ ಸೇರಿಸಲಾಗುತ್ತದೆ. ನಂತರ ಹಿಡಿಯಷ್ಟು ವಸ್ತುಗಳನ್ನು ಬಾಗಿನದಲ್ಲಿ ನೀಡುವ ಪದ್ಧತಿ ರೂಢಿಯಲ್ಲಿದೆ’ ಎಂದು ಮುತ್ತೈದೆ ಸುಜಾತಾ ವಿದ್ಯಾಸಾಗರ ವನಮಾಲಿ ಹೇಳಿದರು.
‘ಈ ಬಾಗಿನವನ್ನು ಬೃಂದಾವನ, ಅರಸಿಣ, ಕುಂಕುಮ, ಮುತ್ತು ಹವಳ, ಯಲ್ಲಮ್ಮ, ಬೀಸಕಲ್ಲು, ಒಳಕಲ್ಲು, ರೇವಗ್ಗಿ, ಬೀಗತಿ ಎಂಬ ಹದಿನಾರು ಹೆಸರುಗಳಿಂದ ಕರೆಯಲಾಗುತ್ತದೆ’ ಎಂದು ಅವರು ತಿಳಿಸಿದರು.

ಮೈಹಿಬೂಬ ನಗರ, ಬೀದರ್, ಸೊಂತ, ದುಬಲಗುಂಡಿ, ತಾಂಡೂರು, ಸೇಡಂ, ಕಲಬುರ್ಗಿಯ ಆರ್ಯವೈಶ್ಯ ಸಮಾಜದ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎಲ್ಲರೂ ಸೇರಿ ಮಾವಿನ ತಳಿರು, ಚೆಂಡುಹೂವು, ಕಬ್ಬು, ಬಾಳೆ ದಿಂಡಿನಿಂದ ಮಂಟಪ ನಿರ್ಮಿಸಿದ್ದರು. ಈ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿಮೂರ್ತಿಗೆ ಚಂದ್ರಶೇಖರ ಜೋಶಿ ವೈದಿಕತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಸುಜಾತಾ ವಿಶ್ವನಾಥ, ಶೋಭಾ ರೇವಣಸಿದ್ದಪ್ಪ ವನಮಾಲಿ, ಸುಜಾತಾ ಸಂಗಮೇಶ, ಶಶಿಕಲಾ ಬಸವರಾಜ, ಶಾಮಲಾ ಲಿಂಗರಾಜ ವನಮಾಲಿ, ಅನ್ನಪೂರ್ಣ ಸತ್ಯನಾರಾಯಣ, ಲತಾ ಸಿದ್ದರಾಜ ವನಮಾಲಿ, ರಾಧಾ ಕೃಷ್ಣಮೂರ್ತಿ ವನಮಾಲಿ, ಶ್ರೀದೇವಿ ಸುರೇಶ, ನಮ್ರತಾ ಪರಮೇಶ್ವರ ವನಮಾಲಿ, ಚಂದ್ರಕಲಾ ಶಿವಕುಮಾರ ವನಮಾಲಿ, ಅನ್ನಪೂರ್ಣ ಜೋಶಿ, ಸಂಗಮೇಶ ಗಂಗಾ, ನಾರಾಯಣಪ್ಪ, ಗೌರಿಶಂಕರ ವನಮಾಲಿ, ಶಶಿಕುಮಾರ ವನಮಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.