ADVERTISEMENT

ಪ್ರತ್ಯೇಕ ಸಚಿವರ ನೇಮಕಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 8:38 IST
Last Updated 1 ಫೆಬ್ರುವರಿ 2018, 8:38 IST

ಕಲಬುರ್ಗಿ: ‘ಹೈದರಾಬಾದ್ ಕರ್ನಾಟಕ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವರ ನೇಮಕ ಮಾಡುವುದು ಅಗತ್ಯವಾಗಿದೆ’ ಎಂದು ಉದ್ಯಮಿ ಉಮಾಕಾಂತ ನಿಗ್ಗುಡಗಿ ಹೇಳಿದರು.

ಇಲ್ಲಿನ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಹೈ–ಕ ಪ್ರದೇಶದ 371(ಜೆ) ಅನುಷ್ಠಾನದಲ್ಲಿನ ಸಮಸ್ಯೆ ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರವು ಉದ್ಯೋಗದ ವಿಷಯದಲ್ಲಿ ಸುಳ್ಳು ಹೇಳುತ್ತಿದೆ. 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಹೇಳಿದ ಸರ್ಕಾರ, ಇಲ್ಲಿಯವರೆಗೆ ಕೇವಲ 18,993 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿದೆ. ಕಲಂ 371(ಜೆ) ಸಮರ್ಪಕ ಅನುಷ್ಠಾನಕ್ಕಾಗಿ ನೇಮಿಸಿರುವ ಸಂಪುಟ ಉಪ ಸಮಿತಿಯಲ್ಲಿ ಬೇರೆ ಭಾಗದವರು ಅಧ್ಯಕ್ಷರಾಗಿರುವುದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಉಪ ಸಮಿತಿಗೆ ಈ ಭಾಗದವರನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಅನಿಲಕುಮಾರ್ ಬಿಡವೆ ಮಾತನಾಡಿ, ‘ಹಿಂದುಳಿದ ಭಾಗ ಎಂಬ ಹಣೆಪಟ್ಟಿ ಅಳಿಸಿ ಹಾಕಲು ಶಿಕ್ಷಣವೊಂದೇ ಪ್ರಬಲ ಸಾಧನವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಈ ಭಾಗವನ್ನು ಸಮೃದ್ಧಗೊಳಿಸಬೇಕು’ ಎಂದು ನುಡಿದರು.

ಡಾ. ಬಸವರಾಜ ಕುಮ್ಮನೂರ, ಸಂಗೀತಾ ಕಟ್ಟಿ, ಎಸ್.ಎ.ಪಾಳೇಕಾರ, ಐ.ಎಸ್. ವಿದ್ಯಸಾಗರ ವಿಷಯ ಮಂಡಿಸಿದರು. ಪ್ರಾಚಾರ್ಯರಾದ ಡಾ. ನೀಲಾಂಬಿಕಾ ಶೇರಿಕಾರ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎನ್.ಎಸ್.ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪುಟ್ಟಮಣಿ ದೇವಿದಾಸ ನಿರೂಪಿಸಿ, ಡಾ. ಎಸ್.ಎಸ್.ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.