ADVERTISEMENT

‘ಖಮರುಲ್‌ ಕೋಟೆ’ಗೆ ಲಗ್ಗೆ ಇಡಲು ಪೈಪೋಟಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 8:46 IST
Last Updated 9 ಫೆಬ್ರುವರಿ 2018, 8:46 IST
ಖನ್ನೀಸ್‌ ಫಾತಿಮಾ ಇಸ್ಲಾಂ
ಖನ್ನೀಸ್‌ ಫಾತಿಮಾ ಇಸ್ಲಾಂ   

ಕಲಬುರ್ಗಿ: ದಿವಂಗತ ಖಮರುಲ್‌ ಇಸ್ಲಾಂ ಅವರ ‘ಭದ್ರ ಕೋಟೆ’ಯಾಗಿದ್ದ ಕಲಬುರ್ಗಿ ಉತ್ತರ ವಿಧಾನಸಭಾ ಕ್ಷೇತ್ರದ ಮೇಲೆ ಅಧಿಪತ್ಯ ಸ್ಥಾಪಿಸಲು ಪ್ರಮುಖ ಪಕ್ಷಗಳು ಸಜ್ಜಾಗುತ್ತಿವೆ. ಕಾಂಗ್ರೆಸ್‌ ಮತ್ತು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಿದೆ.

ಕಳೆದ ಚುನಾವಣೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಸ್ಥಾಪಿಸಿದ್ದ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ದಿಂದ ಸ್ಪರ್ಧಿಸಿ ಗಮನಾರ್ಹ ಮತ ಪಡೆದಿದ್ದ ನಾಸೀರ್‌ ಹುಸೇನ್‌ ಉಸ್ತಾದ ಈಗ ಜೆಡಿಎಸ್‌ನಲ್ಲಿದ್ದಾರೆ. ‘ಉಸ್ತಾದ ಅವರಿಗೆ ಟಿಕೆಟ್‌ ನೀಡುವುದು ಬಹುತೇಕ ಖಚಿತ’ ಎಂಬುದು ಆ ಪಕ್ಷದ ಮೂಲಗಳ ಮಾಹಿತಿ. ಹೀಗಾಗಿ ಅವರು ತಾವೇ ಅಭ್ಯರ್ಥಿ ಎಂದು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ಮುಸ್ಲಿಂ ಮತದಾರರು ಹೆಚ್ಚಿರುವುದರಿಂದ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಮುಸ್ಲಿಮರಿಗೆ ಮೀಸಲು. ‘ಗೆಲ್ಲುವ ಅವಕಾಶ ಇದೆ’ ಎಂದು ಆ ಸಮುದಾಯದಲ್ಲಿ ಟಿಕೆಟ್‌ಗೆ ಪೈಪೋಟಿ ನಡೆದಿದೆ.

ADVERTISEMENT

ಖಮರುಲ್‌ ಇಸ್ಲಾಂ ಅವರು ಈ ಕ್ಷೇತ್ರದಿಂದ ಆರು ಬಾರಿ ಗೆದ್ದಿದ್ದರು. ಲೋಕಸಭೆ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದಾಗ ತಮ್ಮ ಅನುಯಾಯಿಯನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದರು. ಅವರ ಸ್ಥಾನಕ್ಕೆ ಕುಟುಂಬದವರನ್ನೇ ತರಬೇಕು ಎಂಬ ಯತ್ನವೂ ಒಂದು ವರ್ಗದಿಂದ ಜೋರಾಗೊ ನಡೆದಿದೆ.

ಖಮರುಲ್‌ ಅವರ ಪತ್ನಿ ಖನ್ನೀಸ್‌ಫಾತಿಮಾ ಬೇಗಂ, ಪುತ್ರ ಫರೋಜ್‌ ಉಲ್‌ ಇಸ್ಲಾಂ ಅವರಲ್ಲಿ ಒಬ್ಬರಿಗೆ ಟಿಕೆಟ್‌ ಕೊಡಬೇಕು ಎಂಬ ಬೇಡಿಕೆಯೂ ಇದೆ. ಆದರೆ, ಈ ಇಬ್ಬರೂ ಬಹಿರಂಗವಾಗಿ ತಮ್ಮ ನಿಲುವು ತಿಳಿಸಿಲ್ಲ.

‘ಖಮರುಲ್‌ ಇಸ್ಲಾಂ ಅವರ ಕುಟುಂಬಕ್ಕೆ ಟಿಕೆಟ್‌ ಕೊಡದಿದ್ದರೆ ತಮಗೆ ಕೊಡಿ ಎಂದು ಅವರ ಶಿಷ್ಯ, ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹ್ಮದ ಅಸಗರ್‌ ಚುಲ್‌ಬುಲ್‌ ಕೇಳುತ್ತಿದ್ದಾರೆ’ ಎಂಬುದು ಪಕ್ಷದ ಮೂಲಗಳ ಮಾಹಿತಿ.

ಸಚಿವ ಸ್ಥಾನದಿಂದ ವಜಾ ಮಾಡಿದ ನಂತರ ಖಮರುಲ್‌ ಇಸ್ಲಾಂ ತಮ್ಮ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು. ಅವರಿಗೆ ಪರ್ಯಾಯ ಅಭ್ಯರ್ಥಿಯನ್ನು ಹುಡುಕುವ ಕೆಲಸವನ್ನು ನಾಯಕರು ಆಗಲೇ ಮಾಡಿದ್ದರು. ಇದಕ್ಕೆ ಪೂರಕ ಎಂಬಂತೆ ಇಲಿಯಾಸ ಬಾಗವಾನ ಅವರನ್ನು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷರನ್ನಾಗಿ ಮಾಡಲಾಯಿತು ಎಂಬ ಮಾತೂ ಇದೆ. ಅವರು ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿ.

ಬಿಜೆಪಿ ಪಾಳಯದಲ್ಲಿಯೂ ರಾಜಕೀಯ ಚಟುವಟಿಕೆ ಜೋರಾಗಿವೆ. ‘ಖಮರುಲ್‌ ಇಲ್ಲದ ಕೋಟೆ’ ವಶಪಡಿಸಿಕೊಳ್ಳಬೇಕು ಎಂದು ಬಿಜೆಪಿ ಹವಣಿಸುತ್ತಿದೆ. ಮುಸ್ಲಿಂ ಸಮುದಾಯದ ಹೆಚ್ಚಿನವರು ಸ್ಪರ್ಧಿಸಿ, ಮತ ವಿಭಜನೆಯಾದರೆ ತನಗೆ ಲಾಭ ಎಂಬ ಲೆಕ್ಕಾಚಾರವೇ ಅದಕ್ಕೆ ಕಾರಣ ಎಂದು ಆ ಪಕ್ಷದವರು ಹೇಳುತ್ತಾರೆ. ಬಿಜೆಪಿಯ ಪ್ರಮುಖರಾದ ಶಶೀಲ್‌ ಜಿ. ನಮೋಶಿ, ಬಿ.ಜಿ. ಪಾಟೀಲ ಇಬ್ಬರೂ ಈ ಕ್ಷೇತ್ರದಿಂದ ಹಿಂದೆ ಸ್ಪರ್ಧಿಸಿ ಪರಾಭವಗೊಂಡಿದ್ದರು.

‘ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ್‌ ಜಿ.ನಮೋಶಿ ಅವರು ತಮಗೂ, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ ಪುತ್ರ ಚಂದು ಪಾಟೀಲಗೆ ಟಿಕೆಟ್‌ ಕೇಳುತ್ತಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುಭಾಸ ಬಿರಾದಾರ, ಪಾಲಿಕೆ ಮಾಜಿ ಸದಸ್ಯ ಉಮೇಶ ಶೆಟ್ಟಿ ಪ್ರಬಲ ಆಕಾಂಕ್ಷಿಗಳು. ಇನ್ನು ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ’ ಎನ್ನುವುದು ಬಿಜೆಪಿ ಮೂಲಗಳ ಮಾಹಿತಿ.

ರಾಹುಲ್‌ ಭೇಟಿ ವೇಳೆ ನಿರ್ಧಾರ

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಫೆ.12ರಂದು ಕಲಬುರ್ಗಿಗೆ ಬರಲಿದ್ದಾರೆ. ಮರುದಿನ ಬೆಳಿಗ್ಗೆ ಅವರು ಮಾಜಿ ಸಚಿವ ದಿ.ಖಮರುಲ್‌ ಇಸ್ಲಾಂ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ. ‘ಕಲಬುರ್ಗಿ ಉತ್ತರ ಕ್ಷೇತ್ರದಿಂದ ಖನ್ನೀಸ್‌ ಫಾತಿಮಾ ಅಥವಾ ಅವರ ಪುತ್ರ ಸ್ಪರ್ಧಿಸುವ ವಿಷಯ ರಾಹುಲ್ ಗಾಂಧಿ ಭೇಟಿಯ ವೇಳೆ ಚರ್ಚೆಗೆ ಬಂದು, ಅಂತಿಮ ನಿರ್ಧಾರವಾಗಲಿದೆ’ ಎಂದು ಈ ಕುಟುಂಬದ ಬೆಂಬಲಿಗರೊಬ್ಬರು ಹೇಳುವ ಮಾತು.

ಇಲ್ಲಿ ಕಾಂತಾ, ರೇವೂರ ಗೆದ್ದಿದ್ದರು

ಕಲಬುರ್ಗಿ ಹಿಂದೆ ಒಂದೇ ಕ್ಷೇತ್ರವಾಗಿತ್ತು. 2008ರ ಕ್ಷೇತ್ರ ಪುನರ್‌ ವಿಂಗಡಣೆ ನಂತರ ಕಲಬುರ್ಗಿ ಉತ್ತರ ಮತ್ತು ಕಲಬುರ್ಗಿ ದಕ್ಷಿಣ ಕ್ಷೇತ್ರಗಳು ಉದಯವಾದವು. ಕಲಬುರ್ಗಿ ಕ್ಷೇತ್ರದಿಂದ 1983, 1985ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಎಸ್‌.ಕೆ. ಕಾಂತಾ ಗೆದ್ದಿದ್ದರು. 1989ರ ಚುನಾವಣೆಯಲ್ಲಿ ಎಸ್‌.ಕೆ. ಕಾಂತಾ ಅವರನ್ನು ಖಮರುಲ್‌ ಅವರು 4,597 ಮತಗಳ ಅಂತರದಿಂದ ಸೋಲಿಸಿದ್ದರು. 1999ರ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಬಿಜೆಪಿಯ ಚಂದ್ರಶೇಖರ ಡಿ. ಪಾಟೀಲ ರೇವೂರ, 2004 ಚುನಾವಣೆಯಲ್ಲಿ ಖಮರುಲ್‌ ಅವರನ್ನು ಮಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.