ADVERTISEMENT

ದ್ರಾವಿಡ ಭಾಷಾ ಒಕ್ಕೂಟ ರಚನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 9:36 IST
Last Updated 19 ಫೆಬ್ರುವರಿ 2018, 9:36 IST

ಕಲಬುರ್ಗಿ: ಪ್ರಾದೇಶಿಕ ಭಾಷೆಗಳ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ವಿರುದ್ಧ ಹೋರಾಟ ನಡೆಸಲು ದ್ರಾವಿಡ ಭಾಷಾ ಒಕ್ಕೂಟ ರಚಿಸಿಕೊಳ್ಳುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಸಿದ್ದಾರ್ಥ ಕಾನೂನು ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 10 ಕೃತಿಗಳ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಹಿಂದಿಯೇತರ ರಾಜ್ಯಗಳನ್ನು ತೀವ್ರವಾಗಿ ಕಡೆಗಣಿಸಿದೆ. ಒತ್ತಾಯಪೂರ್ವಕವಾಗಿ ಹಿಂದಿ ಭಾಷೆಯನ್ನು ಹೇರಿಕೆ ಮಾಡುತ್ತಿದೆ. ದಕ್ಷಿಣ ಹಾಗೂ ಈಶಾನ್ಯ ಭಾರತದ ರಾಜ್ಯಗಳು ಇದರಿಂದ ತತ್ತರಿಸಿವೆ. ಈ ನೀತಿಯ ವಿರುದ್ಧ ತಮಿಳರು ದೊಡ್ಡ ಪ್ರಮಾಣದಲ್ಲಿ ದನಿ ಎತ್ತಿದ್ದಾರೆ. ಉಳಿದವರು ಇದಕ್ಕೆ ಜತೆಯಾಗಬೇಕಾಗಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಕರ್ನಾಟಕದ ನೆಲ, ಜಲ ಹಾಗೂ ಇಲ್ಲಿನ ಸಂಪನ್ಮೂಲ ಬಳಸಿಕೊಳ್ಳುವ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ಕೊಡುತ್ತಿಲ್ಲ. 2016ರಲ್ಲಿ 9,000 ಬ್ಯಾಂಕಿಂಗ್‌ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ 380 ಕನ್ನಡಿಗರು ಆಯ್ಕೆಯಾದರು. ಇಂಗ್ಲಿಷ್‌ ಮತ್ತು ಹಿಂದಿ ಮಾಧ್ಯಮದಲ್ಲಿ ಪ್ರವೇಶ ಪರೀಕ್ಷೆ ನಡೆಸುವುದೇ ಇದಕ್ಕೆ ಕಾರಣ. ಬದುಕು ಹಾಗೂ ಅನ್ನ ನೀಡುವ ಭಾಷೆ ಕನ್ನಡವಾಗಬೇಕು’ ಎಂದು ಹೇಳಿದರು.

ಹಿರಿಯ ಸಾಹಿತಿ ಗೀತಾ ನಾಗಭೂಷಣ ಮಾತನಾಡಿ, ‘ಸರ್ಕಾರ ನೀಡುವ ಪ್ರಶಸ್ತಿಗಳು ಮಾರಾಟದ ಸರಕುಗಳಾಗುತ್ತಿವೆ. ಕೆಲವರು ಪ್ರಶಸ್ತಿಗಾಗಿ ಪದೇಪದೇ ವಿಧಾನಸೌಧ ಸುತ್ತುತ್ತಾರೆ. ಹಿರಿಯ, ಕಿರಿಯ ರಾಜಕಾರಣಿಗಳಿಗೆ ದುಂಬಾಲು ಬೀಳುತ್ತಿದ್ದಾರೆ. ಸಾಹಿತಿಗಳ ಈ ಧೋರಣೆಯಿಂದಾಗಿ ಪ್ರಶಸ್ತಿಗಳು ಮೌಲ್ಯ ಕಳೆದುಕೊಂಡಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಶಸ್ತಿಗಾಗಿ ಅರ್ಜಿ ಹಾಕುವುದು ಸರಿಯಲ್ಲ. ನಮ್ಮ ಸಾಧನೆ ಗುರುತಿಸಿ ಸರ್ಕಾರವೇ ನೀಡುವಂತಾಗಬೇಕು. ಪ್ರಶಸ್ತಿಗಳು ಸಾಹಿತಿಗಳ ಹೊಣೆ ಹೆಚ್ಚುತ್ತವೆ ಎಂಬುದನ್ನು ಮರೆಯಬಾರದು’ ಎಂದರು.

ನಿವೃತ್ತ ಐಪಿಎಸ್‌ ಅಧಿಕಾರಿ ಡಿ.ವಿ.ಗುರುಪ್ರಸಾದ ಮಾತನಾಡಿ, ‘ರಾಜ್ಯದಲ್ಲಿ ಪ್ರತಿವರ್ಷ 6,000 ಪುಸ್ತಕಗಳು ಬಿಡುಗಡೆ ಆಗುತ್ತವೆ. ಅವುಗಳಲ್ಲಿ ಬಹುತೇಕ ಪುಸ್ತಕಗಳು ಓದುಗರಿಗೆ ತಲುಪುವುದಿಲ್ಲ. ಪುಸ್ತಕಗಳನ್ನು ಬರೆಯುವುದಕ್ಕಿಂತ ಅವುಗಳನ್ನು ಓದುಗರಿಗೆ ತಲುಪಿಸುವುದು ಮುಖ್ಯವಾಗಿದೆ’ ಎಂದರು.

‘ಪುಸ್ತಕಗಳನ್ನು ಓದುವ ಸಂಸ್ಕೃತಿ ಕ್ಷೀಣಿಸಿದೆ. ಸಾಹಿತ್ಯ ಸಮ್ಮೇಳನಗಳಲ್ಲಿಯೂ ಪುಸ್ತಕಗಳನ್ನು ನೋಡುತ್ತಾರೆಯೇ ಹೊರತು ಯಾರೂ ಖರೀದಿಸುವುದಿಲ್ಲ’ ಎಂದು ವಿಷಾದಿಸಿದರು.

‘ಹೈದರಾಬಾದ್‌ ಕರ್ನಾಟಕ ಭಾಗವು ಶ್ರೇಷ್ಠ ಸಾಹಿತಿಗಳ ನೆಲೆಯಾಗಿದೆ. ಇಲ್ಲಿನವರ ಕೃತಿಗಳು ದೆಹಲಿ, ಬೆಂಗಳೂರು ಮಟ್ಟದಲ್ಲಿ ಸದ್ದು ಮಾಡಿವೆ. ನಾಡಿಗೆ ಈ ಭಾಗದವರ ಕೊಡುಗೆ ಅಪಾರ’ ಎಂದು ಹೇಳಿದರು.

ಸಮಾರಂಭದಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಕೊಡಮಾಡುವ 2015 ಹಾಗೂ 2016ನೇ ಸಾಲಿನ ‘ಕನ್ನಡ ನಾಡು ಸಾಹಿತ್ಯ ಶ್ರೀ’ ಪ್ರಶಸ್ತಿಯನ್ನು ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅವರು ಪ್ರದಾನ ಮಾಡಿದರು.

ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಅಧ್ಯಕ್ಷತೆ ವಹಿಸಿದ್ದರು. ಡಾ.ಸ್ವಾಮಿರಾವ್‌ ಕುಲಕರ್ಣಿ, ಎಸ್‌.ಕೆ.ಬಿರಾದಾರ, ಮಾರುತಿರಾವ್ ಮಾಲೆ, ಸಿದ್ದಲಿಂಗಣ್ಣ ಆನೆಗುಂದಿ, ಬಸವರಾಜ ಜಮದ್ರಖಾನಿ, ಸೂರ್ಯಕಾಂತ ನಾಕೇದಾರ, ಈಶ್ವರಯ್ಯ ಮಠ, ಅಯ್ಯಣ್ಣ ಹುಂಡೇಕಾರ ಇದ್ದರು. ಚಂದ್ರಕಲಾ ಬಿದರಿ ನಿರೂಪಿಸಿದರು.

ಬಿಡುಗಡೆಯಾದ ಕೃತಿಗಳು

ಮುಖವಾಡ ಮತ್ತು ಇತರ ನಾಟಕಗಳು(ಎಸ್‌.ಎನ್‌.ದಂಡಿನಕುಮಾರ), ಗಜಲ್‌ ಗೆಜ್ಜೆನಾದ(ವೀರಣ್ಣ ಮಂಠಾಳಕರ್), ಭವರಿ(ಬಿ.ಜೆ.ಪಾರ್ವತಿ ಸೋನಾರೆ), ಚಕ್ರತೀರ್ಥ(ಎಲ್‌.ಬಿ.ಕೆ.ಆಲ್ದಾಳ), ಕಂಬಳಿಯ ಕೆಂಡ(ಶಶಿಕಾಂತ ದೇಸಾಯಿ), ವೃದ್ಧಾಪ್ಯದ ಊರುಗೋಲು(ಡಾ.ಸಿ.ಆರ್‌.ಚಂದ್ರಶೇಖರ್), ಹಲೋ ದೇಹರಾಜ(ಡಾ.ವಸಂತ ಕುಲಕರ್ಣಿ), ಗ್ರಾಮಾಂತರಂಗ(ಗೋ.ರು.ಚನ್ನಬಸಪ್ಪ), ವಿಶ್ವಪಾರಂಪರಿಕ ಸ್ಥಳಗಳು(ಡಿ.ವಿ.ಗುರುಪ್ರಸಾದ) ಹಾಗೂ ಬಿಚ್ಚುನುಡಿ(ಡಾ.ಈಶ್ವರಯ್ಯ ಮಠ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.