ADVERTISEMENT

ಮಾರಕಾಸ್ತ್ರ ಹಿಡಿದು ಯುವಕರಿಗೆ ಥಳಿತ, ದರೋಡೆ: ಆರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 7:24 IST
Last Updated 28 ಜನವರಿ 2021, 7:24 IST

ಕಲಬುರ್ಗಿ: ರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ಆರು ಆರೋಪಿಗಳನ್ನು ನಗರ ರೌಡಿ ನಿಗ್ರಹ ಪಡೆಯ ಪೊಲೀಸರು ಬಂಧಿಸಿದ್ದಾರೆ.

ಮಿರ್ಜಾ ಬೇಗ್, ಮಿರ್ಜಾ ಸಲ್ಮಾನ್, ಮಹಮ್ಮದ್ ರಫೀಕ್, ಶೇಖ್ ವಸೀಂ, ಮಹಮ್ಮದ್ ಜುಬೇರ್, ಮಾಜೀದ್ ಬಂಧಿತರು.

ಬುಧವಾರ ರಾತ್ರಿ ತಾವರಗೇರಾ ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕಿದ್ದಾರೆ ಎಂಬ ಮಾಹಿತಿ ಬಂದಿತ್ತು. ಈ ಬಗ್ಗೆ ತಕ್ಷಣವೇ ಕಾರ್ಯಾಚರಣೆಗಿಳಿದ ರೌಡಿ ನಿಗ್ರಹ ದಳದ ಪಿಎಸ್ಐ ವಾಹಿದ್ ಕೋತ್ವಾಲ್ ನೇತೃತ್ವದ ಪೊಲೀಸ್ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ADVERTISEMENT

ದರೋಡೆ, ಲ್ಯಾಂಡ್ ಡೀಲ್ ಕೇಸ್ ಮಾಡುತ್ತಿದ್ದ ಈ ವ್ಯಕ್ತಿಗಳು, "ಬಿಲ್ಡಪ್" ಕೊಡಲು ಅನೇಕರನ್ನು ಥಳಿಸಿ ವಿಡಿಯೊ ಮಾಡಿಕೊಂಡಿದ್ದರು. ಅಲ್ಲದೇ, ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು, ಕುಣಿಯುತ್ತಾ ವಿಡಿಯೊ ಮಾಡಿಕೊಳ್ಳುತ್ತಿದ್ದರು.

ಇತ್ತೀಚೆಗೆ ಯುವಕನೊಬ್ಬನನ್ನು ಹಿಗ್ಗಾಮುಗ್ಗಾ ಥಳಿಸಿರುವ ದುಷ್ಕರ್ಮಿಗಳು, ಆತನ ತಲೆ ಕೆಳಗೆ ಮಾಡಿ, ಕೈ-ಕಾಲು ಮೇಲೆ ಮಾಡಿ ಹಿಡಿದು ಮನಸೋ ಇಚ್ಛೆ ಥಳಿಸಿ, ವಿಡಿಯೊ ಮಾಡಿರುವ ಪ್ರಕರಣವೂ ಈಗ ಬೆಳಕಿಗೆ ಬಂದಿದೆ.

ಬಂಧಿತರಿಂದ ಎರಡು ತಲವಾರ್, ಮೂರು ಲಾಂಗ್, ಖಾರದ ಪುಡಿ, ಹಗ್ಗ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.