ADVERTISEMENT

ತೊಗರಿ ಬೆಳೆ ಹಾನಿ: ಕಲಬುರಗಿಯಲ್ಲಿ 61 ರೈತರ ಆತ್ಮಹತ್ಯೆ

ಮಲ್ಲಿಕಾರ್ಜುನ ನಾಲವಾರ
Published 22 ಜನವರಿ 2023, 9:06 IST
Last Updated 22 ಜನವರಿ 2023, 9:06 IST
ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಕೊಡದೂರು ಗ್ರಾಮದಲ್ಲಿ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಸಂತೋಷ್ ಜಾಧವ ಕುಟುಂಬ ಸದಸ್ಯರು
ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಕೊಡದೂರು ಗ್ರಾಮದಲ್ಲಿ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಸಂತೋಷ್ ಜಾಧವ ಕುಟುಂಬ ಸದಸ್ಯರು   

ಕಲಬುರಗಿ: ತೊಗರಿ ನಾಡಿನಲ್ಲಿ ಪ್ರಸಕ್ತ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಎಂಟು ತಿಂಗಳ ಅವಧಿಯಲ್ಲಿ 61 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅತಿವೃಷ್ಟಿಯಿಂದ ಬೆಳೆ ನಷ್ಟ, ನೆಟೆ ರೋಗ, ಉತ್ಪನ್ನಗಳ ದರ ಕುಸಿತ, ಸಾಲಭಾದೆ, ಸ್ಥಳೀಯ ಲೇವಾದೇವಿದಾರರ ಕಿರುಕುಳದಿಂದ ಅನ್ನದಾತರು ಸಾವಿನ ಹಾದಿ ಹಿಡಿದಿದ್ದಾರೆ.

ಜಿಲ್ಲಾ ಅಪರಾಧ ದಾಖಲೆ ಬ್ಯೂರೊ(ಡಿಸಿಆರ್‌ಬಿ) ಪ್ರಕಾರ, 2022ರ ಜೂನ್‌ನಿಂದ 2023ರ ಜನವರಿ 15ರವರೆಗೆ ಜಿಲ್ಲೆಯಲ್ಲಿ ಬೆಳೆ ನಷ್ಟ ಸಂಬಂಧ ಒಟ್ಟು 61 ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ದಾಖಲಾಗಿವೆ.

ADVERTISEMENT

‘ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದ ರೈತ ಭೀಮರಾವ ₹13.35 ಲಕ್ಷ ಸಾಲಕ್ಕೆ, ಚಿಂಚೋಳಿ ತಾಲ್ಲೂಕಿನ ಚಂದನ ಕೇರಾ ಗ್ರಾಮದ ಸಿದ್ದಪ್ಪ ಗುಂಡಪ್ಪ ಎಂಬ ರೈತ ₹5 ಲಕ್ಷ ಸಾಲಕ್ಕಾಗಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗೆ ಪ್ರತಿ ವರ್ಷ ಒಂದಿಲ್ಲೊಂದು ಗ್ರಾಮದಲ್ಲಿ ರೈತರು ಸಾಯುತ್ತಾರೆ’ ಎನ್ನುತ್ತಾರೆ ರೈತ ಮುಖಂಡರು.

‘ರೈತರ ಆತ್ಮಹತ್ಯೆ ತಡೆಗಟ್ಟಲು ಕೇಂದ್ರ, ರಾಜ್ಯ ಸರ್ಕಾರಗಳು ಸಾಲ ಮನ್ನಾ, ಬೆಳೆ ವಿಮೆ, ಪ್ರೋತ್ಸಾಹ ಧನ ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ, ಅವು ಅರ್ಹ ರೈತರಿಗೆ ತಲುಪುತ್ತಿಲ್ಲ. ಬೆಳೆ ವಿಮೆ ಕಟ್ಟಿದ್ದರೂ ಬೆಳೆ ನಷ್ಟ ಆದಷ್ಟು ಪರಿಹಾರ ಸಿಗುತ್ತಿಲ್ಲ. ಇದರ ಜತೆಗೆ ಅಕಾಲಿಕ ಮಳೆ, ಕೀಟ, ವಿವಿಧ ರೋಗಗಳ ಬಾಧೆ, ನೀರಿನ ಕೊರತೆ, ಬೆಂಬಲ ಬೆಲೆಯ ಅಭಾವ, ಹೆಚ್ಚುತ್ತಿರುವ ಕೃಷಿ ಕೂಲಿಕಾರ್ಮಿಕರ ಮತ್ತು ರಸಗೊಬ್ಬರ ಬೆಲೆ ಏರಿಕೆಯು ರೈತರನ್ನು ಆತ್ಮಹತ್ಯೆಗೆ ನೂಕುತ್ತಿವೆ’ ಎನ್ನುವುದು ರೈತರ ಹೇಳಿಕೆ.

‘ಜಿಲ್ಲೆಯ ಬಹುತೇಕ ರೈತರು ಭೋಗ್ಯ ಜಮೀನಿನಲ್ಲಿ ದಶಕಗಳಿಂದ ತೊಗರಿ ಬೆಳೆ ಬೆಳೆಯುತ್ತಿದ್ದಾರೆ. ಬೆಳೆ ನಷ್ಟಕ್ಕೆ ಪರಿಹಾರವಾಗಿ ₹240 ಕೋಟಿ ವಿತರಿಸಿದ್ದೇವೆ ಎಂದು ಜಿಲ್ಲಾಡಳಿತ ಹೇಳುತ್ತದೆ. ಆದರೆ, ನಷ್ಟ ಅನುಭವಿಸಿದ ಕೃಷಿಕರಿಗೆ ಸಿಗುತ್ತಿಲ್ಲ. ಕೆಲ ಕಡೆ ಭೋಗ್ಯದಾರರ ಬದಲಿಗೆ ಜಮೀನಿನ ಮಾಲೀಕರಿಗೆ ಪರಿಹಾರ ಹೋಗಿದೆ’ ಎಂಬುದು ರೈತ ಸಂಘಟನೆಗಳ ಆರೋಪ.

ಆತ್ಮಹತ್ಯೆಗೆ ಭೋಗ್ಯ ಭೂಮಿ ಎರವು!

‘ಜಿಲ್ಲೆಯಲ್ಲಿ ಬಹುತೇಕ ರೈತರು ಕಡಿಮೆ ಸ್ವಂತ ಭೂಮಿ ಹೊಂದಿದ್ದು, ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಕೊಟ್ಟು ಭೂಮಿ ಭೋಗ್ಯಕ್ಕೆ ‍ಪಡೆಯುತ್ತಿದ್ದಾರೆ. ಭೋಗ್ಯದ ಹಣ ಮತ್ತು ಬಿತ್ತನೆ ಖರ್ಚು ವಾಪಸ್ ಬರುತ್ತಿಲ್ಲ. ಇದು ಕೂಡ ಕೃಷಿಕರ ಆತ್ಮಹತ್ಯೆಗೆ ಕಾರಣ ಆಗುತ್ತಿದೆ’ ಎನ್ನುತ್ತಾರೆ ಹಿರಿಯ ಕೃಷಿಕರು.

30 ಎಕರೆ ಭೂಮಿ ಭೋಗ್ಯಕ್ಕೆ ಪಡೆದು, ಸರಿಯಾಗಿ ಬೆಳೆ ಬಾರದ ಕಾರಣ ಕಾಳಗಿ ತಾಲ್ಲೂಕಿನ ಕೊಡದೂರ ಗ್ರಾಮದ ರೈತ ಸಂತೋಷ್ ಜಾಧವ ಎಂಬಾತ ಈಚೆಗೆ ಮೊಬೈಲ್‌ ಟವರ್‌ ಏರಿ ನೇಣು ಹಾಕಿಕೊಂಡ. ಇದೇ ಗ್ರಾಮದಲ್ಲಿ 35 ಎಕರೆ ಭೋಗ್ಯಕ್ಕೆ ಪಡೆದಿದ್ದ ಮತ್ತೊಬ್ಬ ರೈತ ಬಸವರಾಜ ಚಿನ್ನಾರಿ ಸಹ ನೇಣು ಹಾಕಿಕೊಂಡು ಸಾವನ್ನಪ್ಪಿದ.

‘ನನ್ನ ಮಗ ಸಂತೋಷ್ ಭೂಮಿ ಭೋಗ್ಯಕ್ಕೆ ಪಡೆದು ಬೇಸಾಯ ಮಾಡಿದ. ಸಾಲ ಪಡೆದು ಟ್ರ್ಯಾಕ್ಟರ್ ಸಹ ಖರೀದಿಸಿದ್ದ. ಉತ್ತಮ ಬೆಳೆ ನೀರಿಕ್ಷೆಯಲ್ಲಿದ್ದಾಗ ಅತಿವೃಷ್ಟಿ ಮತ್ತು ನೆಟೆ ರೋಗ ಬಂದು ತೊಗರಿ ಬೆಳೆಯನ್ನೇ ನಾಶ ಮಾಡಿತು. ಆರ್ಥಿಕ ಹೊರೆ ತಾಳದೆ ಆತ ಆತ್ಮಹತ್ಯೆ ಮಾಡಿಕೊಂಡ’ ಎಂದು ಮೃತರ ತಂದೆ ಹರಿಶ್ಚಂದ್ರ ಜಾಧವ್ ದುಃಖತಪ್ತರಾಗಿ ಹೇಳಿದರು.
*ರೈತರ ಆರ್ಥಿಕ ಹೊರೆ, ನಷ್ಟ ತಪ್ಪಿಸಲು ಪ್ಯಾಕೇಜ್ ಆಧಾರಿತ ಕೃಷಿ ಸಾಲ ನೀಡುವಂತೆ 1992ರಿಂದ ಒತ್ತಾಯಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಪ್ಯಾಕೇಜ್ ಸಾಲ ಟ್ರ್ಯಾಕ್ಟರ್, ಹೈನುಗಾರಿಕೆ, ಗೊಬ್ಬರ ಖರೀದಿಗೆ ನೆರವಾಗುತ್ತದೆ
-ಮೌಲಾ ಮುಲ್ಲಾ, ಎಐಕೆಎಸ್ ಅಧ್ಯಕ್ಷ

8 ತಿಂಗಳಲ್ಲಿ ದಾಖಲಾದ ರೈತ ಆತ್ಮಹತ್ಯೆ ಪ್ರಕರಣಗಳು

ತಿಂಗಳು; ಪ್ರಕರಣ

ಜೂನ್; 6

ಜುಲೈ; 6

ಆಗಸ್ಟ್; 9

ಸೆಪ್ಟೆಂಬರ್; 8

ಅಕ್ಟೋಬರ್; 7

ನವೆಂಬರ್; 9

ಡಿಸೆಂಬರ್; 10

ಜ.15ರ ವರೆಗೆ; 6

ಒಟ್ಟು; 61

ಮಾಹಿತಿ: ಜಿಲ್ಲಾ ಅಪರಾಧ ದಾಖಲೆ ಬ್ಯೂರೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.