ADVERTISEMENT

ಜಿಲ್ಲೆಯಲ್ಲಿ‌ ಮತ್ತೆ 7 ಜನ ನಿಧನ

271 ಜನರಲ್ಲಿ ಸೋಂಕು; 203 ಜನ ಗುಣಮುಖ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 4:02 IST
Last Updated 8 ಆಗಸ್ಟ್ 2020, 4:02 IST

ಕಲಬುರ್ಗಿ: ಕೋವಿಡ್‌–19 ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ 7 ಜನ ನಿಧನರಾಗಿರುವ ಬಗ್ಗೆ ಶುಕ್ರವಾರ ದೃಢವಾಗಿದ್ದು, ಸೋಂಕಿಗೆ ಜಿಲ್ಲೆಯಲ್ಲಿ ಇದೂವರೆಗೆ ಮೃತರಾದವರ ಸಂಖ್ಯೆ 129ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ತೀವ್ರ ಉಸಿರಾಟದ ತೊಂದರೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಆಳಂದ ಪಟ್ಟಣದ ಕೈಗಾರಿಕಾ ಪ್ರದೇಶದ 77 ವರ್ಷದ ವೃದ್ಧ ಜು 23ರಂದು ಆಸ್ಪತ್ರೆಗೆ ದಾಖಲಾಗಿ ಆ 6ರಂದು ನಿಧನ ಹೊಂದಿದ್ದಾರೆ. ತೀವ್ರ ಉಸಿರಾಟ ತೊಂದರೆ ಜೊತೆಗೆ ನಂಜಿನ ಸಮಸ್ಯೆಯಿಂದ ಕಲಬುರ್ಗಿಯ ಶಿವಾಜಿ ನಗರದ 21 ವರ್ಷದ ಯುವಕ ಜು 27ರಂದು ಆಸ್ಪತ್ರೆಗೆ ದಾಖಲಾಗಿ ಆ.3 ರಂದು ಮೃತಪಟ್ಟಿದ್ದಾರೆ. ತೀವ್ರ ಉಸಿರಾಟ ತೊಂದರೆಯಿಂದ ಕಲಬುರ್ಗಿಯ ಗುಲಾಬವಾಡಿ ಪ್ರದೇಶದ 46 ವರ್ಷದ ಪುರುಷ ಆ.2ರಂದು ಅಸ್ಪತ್ರೆಗೆ ದಾಖಲಾಗಿ ಆ 6ರಂದು ನಿಧನರಾದರು.

ವಿಷಯ ಶೀತ ಜ್ವರದಿಂದ ಮೆಕ್ಕಾ ಕಾಲೋನಿಯ 66 ವರ್ಷದ ವೃದ್ಧ ಜು 26ರಂದು ತಮ್ಮ ಮನೆಯಲ್ಲಿ ನಿಧನ ಹೊಂದಿದ್ದಾರೆ. ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಬ್ರಹ್ಮಪುರ ಪ್ರದೇಶದ 50 ವರ್ಷದ ಪುರುಷ ಜು 3ರಂದು ಅಸ್ಪತ್ರೆಗೆ ದಾಖಲಾಗಿ ಅಂದೇ ನಿಧನರಾದರು. ತೀವ್ರ ಉಸಿರಾಟದ ತೊಂದರೆ ಜೊತೆಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರ್ಗಿಯ ಗಂಜ್ (ಬ್ಯಾಂಕ್ ಕಾಲೊನಿ) ಪ್ರದೇಶದ 85 ವರ್ಷದ ವೃದ್ಧ ಜು 30ರಂದು ಅಸ್ಪತ್ರೆಗೆ ದಾಖಲಾಗಿ ಆ.6 ರಂದು ನಿಧನ ಹೊಂದಿದ್ದಾರೆ. ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಮಲಾಪುರ ತಾಲ್ಲೂಕಿನ ಮಹಾಗಾಂವ ಗ್ರಾಮದ 65 ವರ್ಷದ ವೃದ್ಧೆ ಜು 30ರಂದು ಅಸ್ಪತ್ರೆಗೆ ದಾಖಲಾಗಿ ಜು 31ರಂದು ನಿಧನ ಹೊಂದಿದ್ದಾರೆ ಎಂದು ಶರತ್ ತಿಳಿಸಿದರು.

ADVERTISEMENT

271 ಪ್ರಕರಣ: ಶುಕ್ರವಾರ 13 ಮಕ್ಕಳು ಸೇರಿದಂತೆ 271 ಜನರಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಆದರ್ಶ ನಗರದ ಕೆನರಾ ಬ್ಯಾಂಕ್ ಶಾಖೆಯ 31 ಹಾಗೂ 34 ವರ್ಷದ ಮಹಿಳಾ ಉದ್ಯೋಗಿಗಳು, ಹೈಕೋರ್ಟ್‌ ಕಲಬುರ್ಗಿ ಪೀಠದ 42 ವರ್ಷದ ಉದ್ಯೋಗಿ, ನಾಗನಹಳ್ಳಿಯಲ್ಲಿರುವ ಪೊಲೀಸ್‌ ತರಬೇತಿ ಕೇಂದ್ರದ 28 ವರ್ಷದ ಪುರುಷ ಕಾನ್‌ಸ್ಟೆಬಲ್, 29 ಹಾಗೂ 33 ಮಹಿಳಾ ಉದ್ಯೋಗಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6886ಕ್ಕೆ ಏರಿದೆ. ಶುಕ್ರವಾರ 203 ಜನ ಗುಣಮುಖರಾಗಿ ಮನೆಗೆ ಮರಳಿದ್ದು, ಒಟ್ಟು 4256 ಜನ ಗುಣಮುಖರಾದಂತಾಗಿದೆ. 2501 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.