ADVERTISEMENT

ಕಲಬುರಗಿ: 9,891 ಎಕರೆ ಸರ್ಕಾರಿ ಜಾಗ ಭೂಗಳ್ಳರ ಪಾಲು

ಕಾನೂನುಗಳ ಬೇಲಿಗಳು ದಾಟಿ ಗಾಯರಾಣ ಭೂಮಿ, ಕೆರೆ, ಶಾಲೆ ಒತ್ತುವರಿ

ಮಲ್ಲಿಕಾರ್ಜುನ ನಾಲವಾರ
Published 3 ಡಿಸೆಂಬರ್ 2024, 5:07 IST
Last Updated 3 ಡಿಸೆಂಬರ್ 2024, 5:07 IST
ಚಿತ್ತಾಪುರದ ಆಲೂರು ಗ್ರಾಮದ ಸರ್ಕಾರಿ ಗಾಯರಾಣ ಜಾಗದಲ್ಲಿ ಮನೆ ನಿರ್ಮಿಸಿರುವುದು
ಚಿತ್ತಾಪುರದ ಆಲೂರು ಗ್ರಾಮದ ಸರ್ಕಾರಿ ಗಾಯರಾಣ ಜಾಗದಲ್ಲಿ ಮನೆ ನಿರ್ಮಿಸಿರುವುದು   

ಕಲಬುರಗಿ: ಸರ್ಕಾರ ಜಾರಿಗೆ ತಂದಿರುವ ವಿವಿಧ ಕಾನೂನುಗಳ ಬೇಲಿಗಳನ್ನು ದಾಟಿದ ಭೂಗಳ್ಳರು, ಸರ್ಕಾರಕ್ಕೆ ಸೇರಿದ ಸಾವಿರಾರು ಎಕರೆ ಭೂಮಿಯನ್ನು ಕಬಳಿಸಿದ್ದಾರೆ.

ಜಿಲ್ಲೆಯಲ್ಲಿ ಸರ್ಕಾರಕ್ಕೆ ಸೇರಿದ 80,572 ಎಕರೆ ಜಮೀನು ಇದೆ. ಅದರಲ್ಲಿ 9,891 ಎಕರೆಯಷ್ಟು ಸರ್ಕಾರಿ ಭೂಮಿ ಒತ್ತುವರಿಯಾಗಿ ಭೂಗಳ್ಳರ ಪಾಲಾಗಿದೆ. ಕೆರೆ, ಗೋಮಾಳ, ಶಾಲೆಗೆಂದು ಮೀಸಲಿಟ್ಟ ಜಾಗ ಒತ್ತುವರಿಯಾಗಿದ್ದು, ಒತ್ತುವರಿ ತೆರವುಗೊಳಿಸುವ ಪ್ರಕ್ರಿಯೆಯೂ ಮಂದಗತಿಯಲ್ಲಿ ನಡೆಯುತ್ತಿದೆ.

ಸರ್ಕಾರಿ ಭೂಮಿ ಇದ್ದರೂ ಒತ್ತುವರಿಯ ಕಾರಣಕ್ಕೆ ಸರ್ಕಾರದ ಯೋಜನೆಗಳಾದ ಶಾಲಾ–ಕಾಲೇಜು, ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು, ವಿದ್ಯಾರ್ಥಿಗಳ ವಸತಿ ನಿಲಯಗಳ ನಿರ್ಮಾಣಕ್ಕೆ ಜಾಗ ಸಿಗುವುದೇ ಕಷ್ಟವಾಗಿದೆ. ಆದರೆ, ಸರ್ಕಾರಿ ಜಾಗದ ಒತ್ತುವರಿ ಅವ್ಯಾಹತವಾಗಿ ಸಾಗಿದೆ.

ADVERTISEMENT

ಮಹಾನಗರ ಪಾಲಿಕೆ, ಕಂದಾಯ ಇಲಾಖೆ, ನಗರಸಭೆ, ಶಿಕ್ಷಣ ಇಲಾಖೆ, ವಕ್ಫ್‌ ಮಂಡಳಿ, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಗೆ ಸೇರಿದ ಜಮೀನು ಭೂಗಳ್ಳರ ತೆಕ್ಕೆಗೆ ಸಿಲುಕಿದೆ. ಒತ್ತುವರಿ ತೆರವು ಕಾರ್ಯಾಚರಣೆ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕಲಬುರಗಿ ತಾಲ್ಲೂಕಿನ ಫಿರೋಜಾಬಾದ್‌ನಲ್ಲಿ ಸರ್ಕಾರಿ ಪ್ರೌಢಶಾಲೆಯ ನಿರ್ಮಾಣಕ್ಕೆ ಕೆಲವು ವರ್ಷಗಳ ಹಿಂದೆ ಸುಮಾರು ₹50 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆದರೆ, ಶಾಲೆ ನಿರ್ಮಾಣಕ್ಕೆ ಸರ್ಕಾರಿ ಜಾಗ ಇಲ್ಲ ಎಂಬ ಕಾರಣಕ್ಕೆ ಬಂದಷ್ಟು ಅನುದಾನವೂ ಹಿಂದಕ್ಕೆ ಹೋಯಿತು. ಕೊನೆಗೆ ಗ್ರಾಮದ ದಾನಿಯೊಬ್ಬರು ತಮ್ಮ ಒಂದು ಎಕರೆ ಜಮೀನು ಅನ್ನು ಶಾಲೆಗಾಗಿ ನೀಡಿದರು. ಇಂತಹ ಹಲವು ಉದಾಹರಣೆಗಳು ಜಿಲ್ಲೆಯ ಒಂದಲ್ಲಾ ಒಂದು ತಾಲ್ಲೂಕಿನಲ್ಲಿ ನಡೆಯುತ್ತಿವೆ.

ಕಲಬುರಗಿ ತಾಲ್ಲೂಕಿನಲ್ಲಿ ಅತ್ಯಧಿಕ ಒತ್ತುವರಿ: ಆಡಳಿತದ ಶಕ್ತಿ ಕೇಂದ್ರವಾದ ಕಲಬುರಗಿ ತಾಲ್ಲೂಕಿನಲ್ಲಿ 3,913 ಎಕರೆ ಸರ್ಕಾರದ ಭೂಮಿ ಇದೆ. ಅದರಲ್ಲಿ 2,459 ಎಕರೆಯಷ್ಟು ಭೂಮಿ ಒತ್ತುವರಿಯಾಗಿದೆ. 1,454 ಎಕರೆಯಷ್ಟು ಭೂಮಿ ಮಾತ್ರವೇ ಸರ್ಕಾರದ ಹಿಡಿತದಲ್ಲಿದೆ. ಶೇ 62ರಷ್ಟು ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗಿದೆ. 

ಕಮಲಾಪುರ ತಾಲ್ಲೂಕಿನ 7,545 ಎಕರೆ ಸರ್ಕಾರಿ ಭೂಮಿಯಲ್ಲಿ 2,893 (ಶೇ 38ರಷ್ಟು) ಎಕರೆ ಭೂಮಿ ಒತ್ತುವರಿಯಾಗಿದೆ. ಚಿತ್ತಾಪುರ ತಾಲ್ಲೂಕಿನಲ್ಲಿನ 16,685 ಎಕರೆ ಸರ್ಕಾರಿ ಭೂಮಿ ಪೈಕಿ ಅತಿ ಕಡಿಮೆ 50 ಎಕರೆ ಭೂಮಿ ಒತ್ತುವರಿಯಾಗಿದೆ ಎಂಬುದು ಜಿಲ್ಲಾಡಳಿತ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ.

‘ವಾರಕೊಮ್ಮೆ ಸಭೆ’

‘ಸರ್ಕಾರಿ ಜಮೀನು ಒತ್ತುವರಿ ಸಂಬಂಧ ಪ್ರತಿ ವಾರ ಕಂದಾಯ ಮತ್ತು ಸಂಬಂಧಪಟ್ಟ ತಾಲ್ಲೂಕು ಅಧಿಕಾರಿಗಳ ಸಭೆ ಮಾಡಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೆಲವು ಒತ್ತುವರಿ ಜಮೀನುಗಳ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕೆಲವರಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ಸಾಕಷ್ಟು ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದ್ದು ಇದು ನಿರಂತರ ಕಾರ್ಯಾಚರಣೆಯಾಗಿದೆ. ಇದನ್ನು ಸಾರ್ವಜನಿಕರು ಅರ್ಥಮಾಡಿಕೊಂಡು ಸಹಕಾರ ನೀಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.