ಹೃದಯಾಘಾತ
ಚಿಂಚೋಳಿ: ತಾಲ್ಲೂಕಿನ ಚಂದನಕೇರಾ ಗ್ರಾಮದಲ್ಲಿ ಯುವಕನೊಬ್ಬ ಹೃದಯಾಘಾತಕ್ಕೆ ಬಲಿಯಾದ್ದು, ಮದುವೆಯಾಗಿ ಮೂರು ವಾರವಾಗಿತ್ತು.
ಮೋಹಸಿನ್ ಒಶಾ ಪಟೇಲ್ (22) ಮೃತ ಯುವಕ. ಇವರು ಸಾಸರಗಾಂವ್ ಗ್ರಾಮದವರಾದ ಇವರು ಜೂನ್ 15ರಂದು ಮದುವೆಯಾಗಿದ್ದರು. ಕಳೆದ ಹಲವು ವರ್ಷಗಳಿಂದ ಚಂದನಕೇರಾದಲ್ಲಿ ನೆಲೆಸಿದ್ದರು. ಈಚೆಗೆ ಕಲಬುರಗಿಗೆ ತೆರಳಿದ್ದು, ಅಲ್ಲಿಯೇ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು.
ಚಾಲಕ ವೃತ್ತಿ ಮಾಡುತ್ತಿದ್ದ ಮೊಹಸಿನ್ ಮೊಹರಂ ಹಬ್ಬಕ್ಕಾಗಿ ಸ್ವಗ್ರಾಮ ಚಂದನಕೇರಾ ಗ್ರಾಮಕ್ಕೆ ಬಂದಿದ್ದು ಮಧ್ಯಾಹ್ನ ಕುಸಿದು ಬಿದ್ದಿದ್ದಾರೆ. ತಕ್ಷಣ ಚಂದನಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಅಷ್ಟರಲ್ಲೇ ಕೊನೆಯುಸಿರೆಳೆದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಪ್ರಜಾವಾಣಿಗೆ ತಿಳಿಸಿದ್ದಾರೆ.
ಮರಣ ಮೃದಂಗ: ತಾಲ್ಲೂಕಿನಲ್ಲಿ ಹೃದಯಘಾತ ಮತ್ತು ಹೃದಯ ಸ್ತಂಭನ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಕಳೆದ 6 ತಿಂಗಳಲ್ಲಿ ಸುಮಾರು 40 ಮಂದಿ ಮೃತಪಟ್ಟಿದ್ದು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಇದರಲ್ಲಿ 15 ಮಂದಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಗಮನಾರ್ಹ.
‘ಉಸಿರಾಟ ಮತ್ತು ಹೃದಯ ಸಂಬಂಧಿ ತೊಂದರೆಯಿಂದ ಮೃತಪಟ್ಟಿದ್ದಾರೆ ಎಂದು ಸತ್ತವರ ಕುಟುಂಬದವರು ಮಾಹಿತಿ ನೀಡಿದ್ದು ದಾಖಲಿಸಿಕೊಂಡು ಶವ ಹಸ್ತಾಂತರ ಮಾಡಲಾಗಿದೆ. ಇಂತಹ ಪ್ರಕರಣಗಳು ಕಳೆದ 2 ವರ್ಷಗಳಿಂದ ಹೆಚ್ಚುತ್ತಿರುವುದು ಕಂಡು ಬಂದಿದೆ’ ಎಂದು ತಾಲ್ಲೂಕು ಆಸ್ಪತ್ರೆಯ ಎಎಂಒ ಡಾ. ಸಂತೋಷ ಪಾಟೀಲ ತಿಳಿಸಿದರು.
‘ನಮ್ಮಲ್ಲಿ 9 ಮಂದಿ ಹೃದಯ ಸಂಬಂಧಿ ತೊಂದರೆಯಿಂದ ಸಾವನ್ನಪ್ಪಿದ್ದಾರೆ. ತೆಲಂಗಾಣದವರು 4 ಮಂದಿಯಿದ್ದು ಒಟ್ಟು 9 ಮಂದಿ ಕಳೆದ 6 ತಿಂಗಳಲ್ಲಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಕರ್ನಾಟಕದ ಇಬ್ಬರು ತೆಲಂಗಾಣದ ನಾಲ್ವರು 40ಕ್ಕಿಂತ ಕಡಿಮೆ ವಯಸ್ಸಿನವರು’ ಎಂದು ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ.ಬಾಲಾಜಿ ಪಾಟೀಲ ತಿಳಿಸಿದರು.
ಚಿಂಚೋಳಿ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿತ್ಯ 15ಕ್ಕೂ ಹೆಚ್ಚು ಜನರಿಗೆ ಇಸಿಜಿ ತಪಾಸಣೆ ನಡೆಸಲಾಗುತ್ತಿದೆ. ಈಗ ಇದರ ಪ್ರಮಾಣ ಇನ್ನಷ್ಟು ಹೆಚ್ಚುತ್ತಿದೆ.– ಡಾ. ಸಂತೋಷ ಪಾಟೀಲ, ಎಂಎಂಒ, ಚಿಂಚೋಳಿ
ಯುವಜನರಲ್ಲಿಯೇ ಹೃದಯ ಸಂಬಂಧಿ ಕಾಯಿಲೆ ಹೆಚ್ಚುತ್ತಿರುವುದರಿಂದ ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಿಗೆ ಅರಿವು ಕಾರ್ಯಕ್ರಮ ನಡೆಸಬೇಕು.– ಶ್ರೀಮಂತ ಕಟ್ಟಿಮನಿ, ಅಧ್ಯಕ್ಷ, ವಕೀಲರ ಸಂಘ ಚಿಂಚೋಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.