ADVERTISEMENT

₹2 ನಾಣ್ಯ ನುಂಗಿದ ಮಗು ಪ್ರಾಣಾಪಾಯದಿಂದ ಪಾರು

ಯಶಸ್ವಿ ಚಿಕಿತ್ಸೆ ನಡೆಸಿದ ಎಎಸ್‌ಎಂ ಆಸ್ಪತ್ರೆ ವೈದ್ಯರು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 4:49 IST
Last Updated 7 ಡಿಸೆಂಬರ್ 2022, 4:49 IST
ಮೂರು ವರ್ಷದ ಮಗು ₹2 ನಾಣ್ಯ ನುಂಗಿರುವ ಎಕ್ಸರೇ ಚಿತ್ರ
ಮೂರು ವರ್ಷದ ಮಗು ₹2 ನಾಣ್ಯ ನುಂಗಿರುವ ಎಕ್ಸರೇ ಚಿತ್ರ   

ಕಲಬುರಗಿ: ಮೂರು ವರ್ಷದ ಮಗು ನುಂಗಿದ ಎರಡು ರೂಪಾಯಿ ನಾಣ್ಯವನ್ನು ಹೊರತೆಗೆಯುವಲ್ಲಿ ನಗರದ ಎಎಸ್‌ಎಂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯ ಡಾ.ಅರುಣಕುಮಾರ ಹರಿದಾಸ ಮತ್ತು ತಂಡ ಯಶಸ್ವಿಯಾಗಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಸೋಮವಾರ ಮಗು ಆಟವಾಡುವಾಗ ಆಕಸ್ಮಿಕವಾಗಿ ₹2 ನಾಣ್ಯ ನುಂಗಿದೆ. ತಕ್ಷಣ ತಂದೆ–ತಾಯಿ ಮಗುವನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಕೊನೆಗೆ ನಮ್ಮ ಎಎಸ್‌ಎಂ ಆಸ್ಪತ್ರೆಗೆ ಕರೆ ತಂದರು. ನಾನು, ಹಿರಿಯ ಅರಿವಳಿಕೆ ತಜ್ಞ ಡಾ. ಮಹಮ್ಮದ್ ಫುರ್ಖಾನ್ ಮತ್ತು ತಂಡದ ಸದಸ್ಯರು ಮಗುವಿನ ಶಸ್ತ್ರಚಿಕಿತ್ಸೆ ಮಾಡಿ ನಾಣ್ಯ ಹೊರತೆಗೆದೆವು’ ಎಂದು ಹಿರಿಯ ಹೃದ್ರೋಗ, ಶ್ವಾಸಕೋಶ ಮತ್ತು ರಕ್ತನಾಳ ಶಸ್ತ್ರಚಿಕಿತ್ಸಕ ಡಾ. ಅರುಣಕುಮಾರ ಹರಿದಾಸ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಣ್ಯವು ಅನ್ನನಾಳದಲ್ಲಿ ಸಿಲುಕಿರುವುದು ದೃಢಪಟ್ಟಿತು. ಹೃದಯ ಮತ್ತು ಶ್ವಾಸಕೋಶವನ್ನು ಹಿಡಿತದಲ್ಲಿ ಇಡಲು ಮತ್ತು ಬರುವ ಚುಚ್ಚುಮದ್ದು ನೀಡಿ, ಶಸ್ತ್ರಚಿಕಿತ್ಸೆ ನಡೆಸಿ ನಾಣ್ಯ ಹೊರ ತೆಗೆದೆವು. ಮಗು ಗುಣಮುಖವಾಗಿದೆ’ ಎಂದರು.

ADVERTISEMENT

‘ಪಾಲಕರು ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು.ಅನ್ನನಾಳದಲ್ಲಿ ನಾಣ್ಯ, ಮೂಳೆ ಮತ್ತು ಮೀನಿನ ಮುಳ್ಳು ಇತ್ಯಾದಿ ಸಿಲುಕುವ ಸಾಧ್ಯತೆ ಇರುತ್ತದೆ. ಶ್ವಾಸನಾಳದಲ್ಲಿ ಪರಕೀಯ ಪದಾರ್ಥಗಳು ಹೋದಾಗ, ತಕ್ಷಣ ಉಸಿರಾಟಕ್ಕೆ ತೊಂದರೆ ಆಗುತ್ತದೆ. ಆಗ ಮಕ್ಕಳನ್ನು ತಕ್ಷಣ ತಜ್ಞವೈದ್ಯರ ಬಳಿ ಕರೆದೊಯ್ಯಬೇಕು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಟ್ಟರೆ ಜೀವ ಉಳಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.