ವಾಡಿ: ಮದುವೆ ಸಂಭ್ರಮ ದಿನದಂದು ಪ್ರಜ್ಞೆ ತಪ್ಪಿ ಆಸ್ಪತ್ರೆ ಸೇರಿದ್ದ ವ್ಯಕ್ತಿಯೊಬ್ಬ 15 ದಿನಗಳ ನಿರಂತರ ಚಿಕಿತ್ಸೆಯ ಸಾವು ಬದುಕಿನ ಹೋರಾಟ ಕೊನೆಗೆ ಸಾವಿನಲ್ಲಿ ಅಂತ್ಯ ಕಂಡಿದೆ.
ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದ ನಿವಾಸಿ 36 ವರ್ಷದ ರಾಜೇಂದ್ರ (ಸನ್ನಿ) ತಂದೆ ಜಾವಿಂದ್ರ ಸಿಂಗ್ ವಾಲಿಯ ಮೃತ ವ್ಯಕ್ತಿ.
ಪಿಲಕಮ್ಮಾ ಬಡಾವಣೆಯ ನಿವಾಸಿ ರಾಜೇಂದ್ರ (ಸನ್ನಿ) ಅವರ ವಿವಾಹವು ಆ. 18ರಂದು ರಾವೂರು ಗ್ರಾಮದಲ್ಲಿ ನೇಹಾ ಅವರೊಂದಿಗೆ ನೆರವೇರಿತ್ತು.
ಮೆರವಣಿಗೆ ಮೂಲಕ ಮನೆ ಮನೆ ತಲುಪಿದ ಕೆಲವೇ ಹೊತ್ತಿನಲ್ಲಿ ವರ ರಾಜೇಂದ್ರ ವಾಲಿಯಾ ಕಡಿಮೆ ರಕ್ತದೊತ್ತಡದಿಂದ ಕುಸಿದು ಬಿದ್ದಿದ್ದರು. ನಂತರ ಅವರನ್ನು ಕಲಬುರಗಿ ಹಾಗೂ ಸೊಲ್ಲಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 15 ದಿನಗಳ ನಿರಂತರ ಚಿಕಿತ್ಸೆ ನಡುವೆಯೂ ಚಿಕಿತ್ಸೆಗೆ ಸ್ಪಂದಿಸದೆ ಸೆ. 1 ರಂದು ಭಾನುವಾರ ಬೆಳಿಗ್ಗೆ ನಿಧನರಾದರು.
ಮದುವೆ ಯಾದ ಕೆಲವೆ ಗಂಟೆಗಳಲ್ಲಿ ಆಸ್ಪತ್ರೆ ಸೇರಿ ಶವವಾಗಿ ಮರಳಿದ ರಾಜೇಂದ್ರನ ಸಾವಿನಿಂದ ಕುಟುಂಬದಲ್ಲಿ ಈಗ ದುಃಖ ಮಡುಗಟ್ಟಿದೆ. ಕಳೆದ ವರ್ಷ ಪತ್ನಿಯನ್ನು ಕಳೆದುಕೊಂಡಿದ್ದ ಜಾವೀಂದ್ರ ಸಿಂಗ್ ಈಗ ಮಗನನ್ನು ಕಳೆದುಕೊಂಡಿದ್ದಾರೆ.
ಮೃತರಿಗೆ ತಂದೆ, ಸಹೋದರ, ಸಹೋದರಿ ಹಾಗೂ ಪತ್ನಿ ಇದ್ದಾರೆ.
ಭಾನುವಾರ ಮಧ್ಯಾಹ್ನ 2 ಗಂಟೆಗೆ ರೈಲ್ವೆ ಯಾರ್ಡ್‌ನ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.