ADVERTISEMENT

ಅವಾಚ್ಯ ಪದಗಳಿಂದ ನಿಂದನೆ: ಅರುಣಕುಮಾರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 10:29 IST
Last Updated 13 ಜೂನ್ 2020, 10:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಹಾಗೂ ಅವರ ಪುತ್ರರು ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಜಿ.ಪಂ ಸದಸ್ಯ ಅರುಣಕುಮಾರ ಪಾಟೀಲ ಮತ್ತು ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಮಾಡಿರುವ ಆರೋಪ ನಿರಾಧಾರವಾಗಿದೆ. ಮುಖಂಡರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂಥ ಹೇಳಿಕೆ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಆಗ್ರಹಿಸಿದರು.

ಜಿಲ್ಲೆಯಲ್ಲಿನ ಮರಳು ದಂಧೆ ಕಾಂಗ್ರೆಸ್ ಕೂಸು. ಅದನ್ನು ಮುಚ್ಚಿಹಾಕಲು ಮಾಲೀಕಯ್ಯ ಅವರ ವಿರುದ್ಧ ಅವಾಚ್ಯ ಪದ ಬಳಸಿ ನಿಂದಿಸಿರವುದು ಖಂಡನಾರ್ಹ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ನಿಂದನೆ ಮಾಡಿದ ಅರುಣಕುಮಾರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಕೂಡ ಸಲ್ಲಿಸಿದ್ದೇವೆ. ಬಿಜೆಪಿಯವರು ಎಂದೂ ಭ್ರಷ್ಟಾಚಾರ ನಡೆಸಿಲ್ಲ. ಆದರೆ, ಆರೋಪ ಮಾಡುವ ಭರದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಭ್ರಷ್ಟಾಚಾರ ಕಾಂಗ್ರೆಸ್‌ನವರ ಮನೆ ದೇವರು ಎಂದು ಚುಚ್ಚಿದರು.

ADVERTISEMENT

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಫಜಲಪುರ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಕಡಿಮೆ ಮತಗಳು ಬಂದಿದ್ದರಿಂದ ಹತಾಶೆಗೊಂಡು ಮಾಲೀಕಯ್ಯ ಅವರ ವಿರುದ್ಧ ಇಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮಾಲೀಕಯ್ಯ ಅವರು ತಮ್ಮ ಸ್ವಂತ ಬಲದ ಮೇಲೆ ಶಾಸಕರಾಗಿ ಅಯ್ಕೆಯಾದವರು. ಅವರ ರಾಜಕೀಯ ಪ್ರಗತಿಗೆ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಏನೂ ಇಲ್ಲ. ಹಿಂದೆ ಎಸ್. ಬಂಗಾರಪ್ಪ ಸರ್ಕಾರದಲ್ಲಿ ಖರ್ಗೆ ಮಂತ್ರಿಯಾಗಲು ಕಾರಣರಾದವರು ವೆಂಕಯ್ಯ ಗುತ್ತೇದಾರ ಹಾಗೂ ಮಾಲೀಕಯ್ಯ ಎಂಬುದನ್ನು ಮರೆಯಬಾರದು ಎಂದರು.

ರಾಜಕೀಯದಲ್ಲಿ ಟೀಕೆಗಳು ಆರೋಗ್ಯಕರವಾಗಿರಬೇಕು. ಆದರೆ, ಅಸಂವಿಧಾನಿಕವಾಗಿ ಮಾತನಾಡಬಾರದು. ಅವರು ನಾಲಿಗೆ ಸ್ವಚ್ಛಗೊಳಿಸಿಕೊಳ್ಳಲಿ ಎಂದು ರದ್ದೇವಾಡಗಿ ಮೂದಲಿಸಿದರು.

ತಕ್ಷಣ ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಅವರ ವಿರುದ್ಧ ಹೋರಾಟಕ್ಕೆ ಇಳಿಸಬೇಕಾಗುತ್ತದೆ ಎಂದೂ ಎಚ್ಚರಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಹಾಕಿರುವ ಕುರಿತು ತನಿಖೆಯಾಗಲಿ ಎಂದರು.

ಜಿಲ್ಲೆಯಿಂದ ಹಾಲಿ ಇರುವ ಇಬ್ಬರು ವಿಧಾನ ಪರಿಷತ್ ಸದಸ್ಯರ ಅವಧಿ ಮುಗಿಯುತ್ತಿರುವುದರಿಂದ, ಆ ಎರಡು ಸ್ಥಾನಗಳನ್ನು ಮರಳಿ ಜಿಲ್ಲೆಯವರಿಗೆ ನೀಡುವಂತೆ ಪಕ್ಷದ ವರಿಷ್ಠರು, ಮುಖಂಡರು, ಮುಖ್ಯಮಂತ್ರಿ ಹಾಗೂಅಧ್ಯಕ್ಷರನ್ನು ಕೋರಲಾಗಿದೆ ಎಂದು ಶಿವರಾಜ ಪಾಟೀಲ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ ಚವ್ಹಾಣ, ಬಿಜೆಪಿ ಮಾಧ್ಯಮ ಪ್ರಮುಖ ಬಾಬುರಾವ ಹಾಗರಗುಂಡಗಿ, ಮಹಿಳಾ ಮೋರ್ಚಾ ಅಧ್ಯಕ್ಷೆ ದಿವ್ಯಾ ಹಾಗರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.