ADVERTISEMENT

ಉಚಿತ ಬಸ್‌ಪಾಸ್‌ಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಸಾವಿರಾರು ವಿದ್ಯಾರ್ಥಿಗಳಿಂದ ಎಸ್‌ವಿಪಿ ವೃತ್ತದಲ್ಲಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 10:38 IST
Last Updated 4 ಜುಲೈ 2019, 10:38 IST
ಎಬಿವಿಪಿ ಕಾರ್ಯಕರ್ತರು ಕಲಬುರ್ಗಿಯ ಎಸ್‌ವಿಪಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು
ಎಬಿವಿಪಿ ಕಾರ್ಯಕರ್ತರು ಕಲಬುರ್ಗಿಯ ಎಸ್‌ವಿಪಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು   

ಕಲಬುರ್ಗಿ: ರಾಜ್ಯದಾದ್ಯಂತ ವಿವಿಧ ಶಾಲೆ, ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಬಸ್‌ ಪಾಸ್‌ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತ (ಎಸ್‌ವಿಪಿ)ದಲ್ಲಿ ಗುರುವಾರ ರಸ್ತೆ ತಡೆ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಎಸ್‌ವಿಪಿ ವೃತ್ತವನ್ನು ಸುತ್ತುವರೆದು ಮಾನವ ಸರಪಳಿ ರಚಿಸಿದರು. ಇದರಿಂದಾಗಿ 15 ನಿಮಿಷಗಳವರೆಗೆ ಎಲ್ಲ ವಾಹನಗಳ ಸಂಚಾರ ಸ್ತಬ್ದಗೊಂಡಿತು. ಸ್ಥಳಕ್ಕೆ ಬಂದ ಪೊಲೀಸರು ಮಾಹಿತಿ ನೀಡದೇ ರಸ್ತೆ ತಡೆ ನಡೆಸುತ್ತಿರುವ ಬಗ್ಗೆ ಎಬಿವಿಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರ ಎಚ್ಚರಿಕೆಗೂ ಜಗ್ಗದ ಮುಖಂಡರು ಜಿಲ್ಲಾಧಿಕಾರಿಗಳು ಇಲ್ಲಿಯೇ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು.

ಇದರಿಂದಾಗಿ ಕೆಲ ಹೊತ್ತು ಪೊಲೀಸರು ಮತ್ತು ಮುಖಂಡರ ಮಧ್ಯೆ ವಾಗ್ವಾದ ನಡೆಯಿತು. ನಂತರ ರೈಲು ನಿಲ್ದಾಣದಿಂದ ಎಸ್‌ವಿ‍ಪಿ ವೃತ್ತವನ್ನು ಸಂಪರ್ಕಿಸುವ ರಸ್ತೆಯನ್ನು ಸಂಪೂರ್ಣ ಬಂದ್‌ ಮಾಡಿದರು. ಪೊಲೀಸರು ಮುಖಂಡರ ಮನವೊಲಿಸಿ ಜಿಲ್ಲಾಧಿಕಾರಿ ಕಚೇರಿಯತ್ತ ಮೆರವಣಿಗೆ ಹೊರಡುವಂತೆ ಮಾಡಿದರು.

ADVERTISEMENT

ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ ಪ್ರತಿಭಟನಾಕಾರರು ಬಸ್‌ ಪಾಸ್‌ ಉಚಿತವಾಗಿ ನೀಡಲು ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸದರ್ಭದಲ್ಲಿ ಮಾತನಾಡಿದ ಸಂಘಟನೆಯ ನಗರ ಕಾರ್ಯದರ್ಶಿ ದಶರಥ ರಾಠೋಡ, ‘ರಾಜ್ಯವು ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರಾಜ್ಯದ ರೈತಾಪಿ ಕುಟುಂಬಗಳು ಸಂಕಷ್ಟದಲ್ಲಿವೆ. ಇಂದಿನ ಖಾಸಗಿ ಕಾಲೇಜುಗಳ ಹಾವಳಿ ಮತ್ತು ಶಿಕ್ಷಣವು ಮಾರಾಟದ ವಸ್ತುವಾಗಿರುವಂತಹ ಈ ಸ್ಥಿತಿಯಲ್ಲಿ ರಾಜ್ಯದ ಹಿಂದುಳಿದ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ ಹಣ ನೀಡುವುದೂ ಆಗುತ್ತಿಲ್ಲ. ಹೀಗಾಗಿ, ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಂತೆ ಸರ್ಕಾರ ಎಸ್‌ಸಿ, ಎಸ್ಟಿ ಸೇರಿದಂತೆ ಎಲ್ಲ ಜಾತಿ, ಧರ್ಮದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಬಸವರಾಜ ಬಡಿಗೇರ, ಅರುಣ ಬಿರಾದಾರ, ಪವನ್‌ಕುಮಾರ್‌, ರವಿಕುಮಾರ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.