ಕಲಬುರ್ಗಿ: ಜಿಲ್ಲೆಯಲ್ಲಿ ಈಗಾಗಲೇ 120 ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಇದರಲ್ಲಿ 78 ಬ್ಲ್ಯಾಕ್ ಸ್ಪಾಟ್ (ಪದೇ ಪದೇ ಅಪಘಾತವಾಗುವ ಸ್ಥಳ)ಗಳಿವೆ. ಆದರೆ, ಅಲ್ಲಿ ಅಪಘಾತ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಮಾತ್ರ ಫಲಪ್ರದವಾಗಿಲ್ಲ.
ಎರಡು ವರ್ಷಗಳಲ್ಲಿ ಅರ್ಧದಷ್ಟು ದಿನಗಳು ಕರ್ಫ್ಯೂ, ಲಾಕ್‌ಡೌನ್ ಮಧ್ಯದಲ್ಲೇ ಕಳೆದಿವೆ. ಆ ಸಂದರ್ಭದಲ್ಲಿ ವಾಹನ ಓಡಾಟ ಕಡಿಮೆ ಆಯಿತೇ ಹೊರತು; ಅಪಘಾತಗಳ ಸಂಖ್ಯೆ ತಗ್ಗಲಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸದ ಕಾರಣ ಸಾವು–ನೋವು ಸಂಭವಿಸುತ್ತಿವೆ ಎನ್ನುವುದು ನಾಗರಿಕರ ದೂರು.
ಅಪಘಾತಗಳ ಪ್ರಮಾಣ ತಗ್ಗಿಸುವ ಸಂಬಂಧವಾಗಿ ಪ್ರತಿ ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಸಮಿತಿ ಇದೆ. ಇದಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರು. ಪೊಲೀಸ್ ಇಲಾಖೆ, ಲೋಕೋಪಯೋಗಿ, ಪ್ರಾದೇಶಿಕ ಸಾರಿಗೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಅಧಿಕಾರಿಗಳು ಈ ಸಮಿತಿಯಲ್ಲಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಚರ್ಚಿಸಲಾಗುತ್ತದೆ.
ಯಾವುದು ಬ್ಲ್ಯಾಕ್ ಸ್ಪಾಟ್?: ಆರ್‌ಟಿಒ ಹಾಗೂ ಪೊಲೀಸ್ ಇಲಾಖೆಯವರು 2020ನೇ ಸಾಲಿನಲ್ಲಿ 47 ಬ್ಲಾಕ್‍ಸ್ಪಾಟ್‍ಗಳನ್ನು ಪತ್ತೆ ಹಚ್ಚಿದ್ದರು. ಈ ವರ್ಷ ಮತ್ತೆ 31 ಗುರುತಿಸಲಾಗಿದೆ. ಈಗ ಜಿಲ್ಲೆಯಲ್ಲಿ ಒಟ್ಟು 78 ಅಪಾಯಕಾರಿ ಸ್ಥಳ ಗುರುತಿಸಲಾಗಿದೆ. 500 ಮೀಟರ್ ವ್ಯಾಪ್ತಿಯೊಳಗೆ 10ಕ್ಕೂ ಹೆಚ್ಚು ಜನ ರಸ್ತೆ ಅಪಘಾತದಿಂದ ಮೃತಪಟ್ಟರೆ ಅಂಥ ಸ್ಥಳವನ್ನು ಬ್ಲಾಕ್‍ಸ್ಪಾಟ್ ಎಂಬುದಾಗಿ ಗುರುತಿಸಲಾಗುತ್ತಿದೆ.
ರಿಂಗ್ ರಸ್ತೆ ಸುತ್ತ, ಹೆಚ್ಚಿದ ಅಪಘಾತ: ನಗರದ ರಾಮ ಮಂದಿರ ಆವರಣದಿಂದ ಆರಂಭವಾಗುವ ರಿಂಗ್ ರಸ್ತೆಯು ಖರ್ಗೆ ಪೆಟ್ರೋಲ್ ಬಂಕ್, ಹುಮನಾಬಾದ್ ಚೌಕ್, ಆಳಂದ ಚೆಕ್‌ಪೋಸ್ಟ್ ಸುತ್ತುವರಿದು ಮತ್ತೆ ರಾಮ ಮಂದಿರವರೆಗೂ ವ್ಯಾಪಿಸಿದೆ. ಈ ವಿಶಾಲ ಮಾರ್ಗ ಮಧ್ಯದಲ್ಲಿ ಹಲವು ಹಳ್ಳಿಗಳು, ಶಾಲೆ, ಕಾಲೇಜು, ಸಂತೆ ಮೈದಾನ, ಉದ್ಯಾನ, ಟ್ರಕ್ ಟರ್ಮಿನಲ್, ನೂರಾರು ಗ್ಯಾರೇಜ್‌ಗಳು, ಇಟ್ಟಿಗೆ ಭಟ್ಟಿಗಳು, ಖಾಸಗಿ ಉದ್ಯಮಗಳ ಕಚೇರಿಗಳಿವೆ. ಇಲ್ಲಿ ಅಪಘಾತಕ್ಕೆ ತುತ್ತಾಗುತ್ತಿರುವವರಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚು.
ನಗರ ಹಾಗೂ ಜಿಲ್ಲೆಯಲ್ಲಿ ಈಗ ಬಹುತೇಕ ರಸ್ತೆಗಳು ಅಚ್ಚುಕಟ್ಟಾಗಿವೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಎಲ್ಲ ತಾಲ್ಲೂಕನ್ನು ಸಂಪರ್ಕಿಸಿವೆ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಗೆ ನೇರ ಸಂಚಾರ ಇದೇ ಮಾರ್ಗದಲ್ಲಿ ಆಗುತ್ತದೆ. ಸಹಜವಾಗಿಯೇ ವಾಹನಗಳ ದಟ್ಟಣೆ ಹೆಚ್ಚು. ಅಪಘಾತಗಳ ಸಂಖ್ಯೆ ಹೆಚ್ಚಲು ಕೂಡ ಇದು ಕಾರಣ ಎನ್ನುವುದು ಜಿಲ್ಲಾ ಪೊಲೀಸ್ ಅಧಿಕಾರಿಗಳ ಹೇಳಿಕೆ.
ತುಂಬ ಸಪೂರಾದ ಹೆದ್ದಾರಿಗಳಲ್ಲಿ ವೇಗವಾಗಿ ವಾಹನ ಓಡಿಸುವುದನ್ನೇ ಯುವಕರು ಫ್ಯಾಷನ್ ಮಾಡಿಕೊಂಡಿದ್ದಾರೆ. ಈ ವೇಗವೇ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಯಾರೂ ಹೆಲ್ಮೆಟ್ ಧರಿಸುವುದಿಲ್ಲ. ಅಪಘಾತ ವಲಯಗಳಲ್ಲಿ ನಿಧಾನವಾಗಿ ಸಂಚರಿಸುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವುದಿಲ್ಲ. ಇದರಲ್ಲಿ ಆಕಸ್ಮಿಕ ಅಪಘಾತಕ್ಕೆ ಎಷ್ಟು ಕಾರಣಗಳಿವೆಯೋ, ವೈಯಕ್ತಿಕ ನಿರ್ಲಕ್ಷ್ಯ ಕೂಡ ಕಾರಣವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಕನಿಷ್ಠ ವೇಗ ಮಿತಿ 80 ಕಿ.ಮೀ ಅನಿವಾರ್ಯ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈಗಾಗಲೇ ‘ಅಪಘಾತ ವಲಯ’ ಎಂಬ ಸೂಚನಾ ಫಲಕ ಅಳವಡಿಸಲಾಗಿದೆ. ಶಾಲೆ, ಕಾಲೇಜು, ದೇವಸ್ಥಾನ, ಮಸೀದಿ ಸಂಪರ್ಕಿಸಬಹುದಾದ ರಸ್ತೆಗಳಲ್ಲಿ ‘ಬಣ್ಣದ ಸೂಚನಾ ಪಟ್ಟಿ (ರಂಬಲ್ ಸ್ಟ್ರಿಪ್)’ ತೀಡಲಾಗುತ್ತಿದೆ. ಇದು ಹೊಸದಾಗಿ ಜಾರಿಗೆ ಬಂದ ಕ್ರಮ. ಭಾರಿ ವಾಹನಗಳು ಸಂಚರಿಸುವುದಕ್ಕಾಗಿಯೇ ಹೆದ್ದಾರಿ ಮಾಡಲಾಗಿದೆ. ಮೇಲಾಗಿ, ಕನಿಷ್ಠ ವೇಗ ಮಿತಿ 80 ಕಿ.ಮೀ ಇದೆ. ಇದಕ್ಕಿಂತ ಕಡಿಮೆ ವೇಗದಲ್ಲಿ ಸಂಚರಿಸುವುದಾದರೆ ಹೆದ್ದಾರಿ ಮಾಡಿದ ಉದ್ದೇಶ ಈಡೇರುವುದಿಲ್ಲ. ಹಾಗಾಗಿ, ಗ್ರಾಮಸ್ಥರು ತಮ್ಮ ಸುರಕ್ಷತೆಯ ಬಗ್ಗೆ ಗಮನ ಕೊಡಬೇಕು ಎಂಬುದು ಪ್ರಾಧಿಕಾರದ ಅಧಿಕಾರಿಗಳ ವಿವರ.
ಸುರಕ್ಷತಾ ಕ್ರಮಗಳ ಬಗ್ಗೆ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವ ಯೋಜನೆಗೆ ಚಾಲನೆ ದೊರೆತಿದೆ. ಆದರೆ, ತರಗತಿಗಳು ಆರಂಭವಾಗಲು ಕಾಯುತ್ತಿದ್ದೇವೆ ಎನ್ನುತ್ತಾರೆ ಅವರು.
ಮೇಲ್ಸೇತುವೆ ಒಂದೂ ಇಲ್ಲ
ಜಿಲ್ಲೆಯಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ 218 (ವಿಜಯಪುರ– ಕಲಬುರ್ಗಿ– ಹುಮನಾಬಾದ್) ಹಾಗೂ 9ರಲ್ಲಿ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳು ಅಂಟಿಕೊಂಡಿವೆ. ಇದೇ ಸ್ಥಳಗಳಲ್ಲಿ ಅಪಘಾತಗಳು ಮೇಲಿಂದ ಮೇಲೆ ಆಗುತ್ತಿವೆ. ಆದರೆ, ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗೆ ಜಿಲ್ಲೆಯಲ್ಲಿ ಒಂದೂ ಮೇಲ್ಸೇತುವೆ ಇಲ್ಲ. ಇದೇ ಅಪಘಾತಕ್ಕೆ ಕಾರಣವಾಗುತ್ತಿದೆ ಎನ್ನುವುದು ಗ್ರಾಮಸ್ಥರ ದೂರು.
ರಾಷ್ಟ್ರೀಯ ಹೆದ್ದಾರಿ ಮೇಲೆ ಗ್ರಾಮಸ್ಥರ ಒತ್ತಾಯದ ಮೇರೆಗೆ ಹಲವ ಕಡೆ ರೋಡ್‌ಬ್ರೇಕ್ ಅಳವಡಿಸಿದ್ದೇವೆ. ಆದರೆ, ಗ್ರಾಮದಿಂದ ಹೆದ್ದಾರಿಗೆ ಬರುವ ಹಾಗೂ ಹೆದ್ದಾರಿಯಿಂದ ಇಳಿದು ಗ್ರಾಮಕ್ಕೆ ಹೋಗುವ ಸ್ಥಳಗಳಲ್ಲೇ ಅಪಘಾತವಾಗುವ ಸಂಭವ ಹೆಚ್ಚು. ಆದ್ದರಿಂದ ಆಯಾ ಗ್ರಾಮ ಪಂಚಾಯಿತಿ ಕೂಡ ಊರಿನ ಸಂಪರ್ಕ ರಸ್ತೆಗಳಲ್ಲಿ ನಿಯಂತ್ರಕಗಳನ್ನು ಅಳವಡಿಸಿದರೆ ಅಪಘಾತ ತಪ್ಪಿಸಬಹುದು ಎನ್ನುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಲಹೆ.
ಐದು ವರ್ಷದಲ್ಲಿ 1,901 ಸಾವು
2016ರಿಂದ ಇಲ್ಲಿಯವರೆಗೆ ಐದು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ, ಒಟ್ಟು 8,951 ಅಪಘಾತಗಳು ಸಂಭವಿಸಿದ್ದು, 1,901ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚೂ–ಕಡಿಮೆ ಆಗಿದ್ದರೂ ಸಾವಿನ ಪ್ರಮಾಣ ಮಾತ್ರ ಹೆಚ್ಚುತ್ತಲೇ ಇದೆ ಎನ್ನುವುದು ರಸ್ತೆ ಸುರಕ್ಷತಾ ಸಮಿತಿಯ ಅಧಿಕಾರಿಗಳ ಹೇಳಿಕೆ.
ಅರಿವು ಮೂಡಿಸಿದರೂ ಗಮನಿಸದ ಸವಾರರು
ಪ್ರತಿ ವರ್ಷ ಜನವರಿಯಲ್ಲಿ ಎಲ್‌ಇಡಿ ಪರದೆ ಹೊಂದಿದ ವಾಹನಗಳ ಮೂಲಕ ಅಪಘಾತಗಳ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಈ ಪರದೆಯನ್ನು ಜಿಲ್ಲೆಯ ಅಪಘಾತ ವಲಯಗಳು, ನಗರದ ಪ್ರಮಖ ವೃತ್ತಗಳಲ್ಲಿ ಬಿತ್ತರ ಮಾಡಲಾಗುತ್ತಿದೆ. ಅಪಘಾತದ ವಿಡಿಯೊ ತುಣುಕುಗಳನ್ನೂ ತೋರಿಸಲಾಗುತ್ತದೆ. ಹೆಲ್ಮೆಟ್, ಸೀಟ್‌ಬೆಲ್ಟ್ ಮಹತ್ವ ಹೇಳುತ್ತೇವೆ. ಫೆಬ್ರುವರಿಯಲ್ಲಿ ರಸ್ತೆ ಸುರಕ್ಷತೆ ಕುರಿತು ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ್ದೇವೆ. ತರಗತಿಗಳು ಆರಂಭವಾದ ಮೇಲೆ ಮತ್ತೆ ಇದಕ್ಕೆ ಚಾಲನೆ ನೀಡಲಾಗುವುದು. ನಾವು ಏನೇ ಮಾಡಿದರೂ ಕೊನೆಯ ನಿರ್ಧಾರ ವಾಹನ ಸವಾರರದ್ದೇ ಆಗಿರುತ್ತದೆ. ಸವಾರರು ತಮ್ಮ ಜೀವದ ಬಗ್ಗೆ ಕಾಳಜಿ ವಹಿಸಿದರೆ ಮಾತ್ರ ಅಪಘಾತ ನಿಯಂತ್ರಣ ಸಾಧ್ಯ.
–ಡಿ.ನೂರ್ ಮಹಮ್ಮದ್ ಪಾಷಾ, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ
ಅತಿ ಹೆಚ್ಚು ಸಾವು ಸಂಭವಿಸಿದ ಸ್ಥಳ
ವಾಡಿ– ಯಾದಗಿರಿ ನಡುವಿನ ರಾಷ್ಟ್ರೀಯ ಹೆದ್ದಾರಿ ಕುಂಬಾರಹಳ್ಳಿ ಗೇಟ್‌ನ ದೊಡ್ಡ ಕೆರೆ ತಿರುವು ಜಿಲ್ಲೆಯಲ್ಲಿ ಈವರೆಗೆ ಅತಿ ಹೆಚ್ಚು ಸಾವು ಸಂಭವಿಸಿದ ಸ್ಥಳ ಎಂದು ಗುರುತಿಸಲಾಗಿದೆ.
2014ರಲ್ಲಿ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯಾದಗಿರಿಯ ಏಳು ಜನರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು. ಇದಕ್ಕೂ ಮೊದಲು ಅಂದರೆ; 2009ರಲ್ಲಿ ಇದೇ ಸ್ಥಳದಲ್ಲಿ ಮದುವೆಗೆ ತೆರಳುತ್ತಿದ್ದ ಲಾರಿ ಅಪಘಾತಕ್ಕೀಡಾಗಿ ಸುಮಾರು 16 ಜನರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.